ದೇಶಪ್ರಮುಖ ಸುದ್ದಿ

ಹಣ ಪಡೆಯಲು ಬಂದು ಬ್ಯಾಂಕಿನಲ್ಲೇ ಮಗುವಿಗೆ ಜನ್ಮ ನೀಡಿದ ತಾಯಿ

ಬ್ಯಾಂಕಿನಲ್ಲಿ ಹಣ ಪಡೆಯಲು ಬಂದಿದ್ದ ಗರ್ಭಿಣಿಯೊಬ್ಬರು ಅಲ್ಲೇ ಮಗುವಿಗೆ ಜನ್ಮ ನೀಡಿದ ಪ್ರಕರಣ ವರದಿಯಾಗಿದೆ. ಕಾನ್ಪುರ ದೆಹಾತ್ ಜಿಲ್ಲೆಯ ಜಿಹಿಂಜಾಕ್‍ನ ಪಂಜಾಬ್ ನ್ಯಾಷನಲ್ ಬ್ಯಾಂಕ್‍ ಮುಂದೆ ಹಣ ಪಡೆಯಲು ಬಂದು ಸರದಿಯ ಸಾಲಿನಲ್ಲಿ ನಿಂತಿದ್ದ ಮಹಿಳೆಗೆ ಬ್ಯಾಂಕ್‍ನಲ್ಲೇ ಹೆರಿಗೆಯಾದ ಘಟನೆಯೊಂದು ವರದಿಯಾಗಿದೆ.

ಕಾನ್ಪುರದ ಸರ್ದಾಪುರದ ಮರ್ಜಾ ಶಾಪುರ್ ದೇರಾ ಪ್ರದೇಶದ ಸರ್ವೇಶಾ ದೇವಿ ಕ್ಯೂನಲ್ಲಿ ನಿಂತಿದ್ದ ವೇಳೆ ಪ್ರಸವ ವೇದನೆ ಕಾಣಿಸಿಕೊಂಡಿದೆ. ಗ್ರಾಹಕರು ಸಮಯೋಚಿತವಾಗಿ ಸಹಾಯಕ್ಕೆ ಧಾವಿಸಿದ್ದರಿಂದ ಯಾವುದೇ ಅಪಾಯವಿಲ್ಲದೇ ಮುದ್ದಾದ ಗಂಡುಮಗುವಿಗೆ ಜನ್ಮ ನೀಡಿದ್ದಾರೆ. ಶೀಘ್ರವೇ ವೈದ್ಯರಿಂದ ಹೆಚ್ಚಿನ ಚಿಕಿತ್ಸೆ ಕೊಡಿಸಲಾಯಿತು. ಆಕೆಗೆ ಇದು 5ನೇ ಮಗುವಾಗಿದೆ ಎಂದು ತಿಳಿದುಬಂದಿದೆ.

ಮಹಿಳೆಯು ಸಾಲ ತೀರಿಸುವ ಸಲುವಾಗಿ ಹಣ ಡ್ರಾ ಮಾಡಲು ಬೆಳಿಗ್ಗೆ 11ಕ್ಕೆ ಬ್ಯಾಂಕಿಗೆ ಬಂದಿದ್ದಾರೆ. ಹಣ ಪಡೆಯಲು ತಡವಾದ್ದರಿಂದ ಮಧ್ಯಾಹ್ನ ಸುಮಾರು 3.45 ರ ಸುಮಾರಿಗೆ ಹೆರಿಗೆ ನೋವು ಕಾಣಿಸಿಕೊಂಡಿದ್ದರಿಂದ ಅಲ್ಲೇ ಮಗುವಿಗೆ ಜನ್ಮ ನೀಡುವ ಪರಿಸ್ಥಿತಿ ಬಂದಿದೆ. ಮಗು ಹಾಗೂ ತಾಯಿ ಇಬ್ಬರೂ ಆರೋಗ್ಯದಿಂದಿದ್ದಾರೆ.

ಕೇಂದ್ರ ಸರ್ಕಾರವೂ ನೋಟು ಅಮಾನ್ಯಗೊಳಿಸಿದ ಹಿನ್ನೆಲೆಯಲ್ಲಿ ದೇಶದಲ್ಲಿ ಜನ ಬ್ಯಾಂಕ್‍ಗಳ ಮುಂದೆ ಸಾಲುಗಟ್ಟಿ ನಿಲ್ಲುವುದು ಸಾಮಾನ್ಯವಾಗಿದೆ. ಈ ಸಂದರ್ಭ ಹಲವಾರು ಅಹಿತಕರ ಘಟನೆಗಳು ನಡೆದಿವೆ. ಸರದಿ ಸಾಲಿನಲ್ಲಿ ನಿಂತಿದ್ದ ವೃದ್ಧರು ಮೃತಪಟ್ಟ ಘಟನೆಗಳೂ ನಡೆದಿವೆ. ಈ ದೃಷ್ಟಿಯಿಂದ ವೃದ್ಧರು, ಅಂಗವಿಕಲರು, ಅನಾರೋಗ್ಯವಂತರು ಮತ್ತು ಗರ್ಭಿಣಿಯರು ಬ್ಯಾಂಕಿಗೆ ಆಗಮಿಸಿದಾಗ ಹೆಚ್ಚಿನ ಶ್ರಮವಾಗದಂತೆ ಎಚ್ಚರ ವಹಿಸಿದರೆ ಒಳಿತು.

ಕೇಂದ್ರ ಸರ್ಕಾರ ಈ ನಿಟ್ಟಿನಲ್ಲಿ ಪ್ರತ್ಯೇಕ ಸಾಲಿನಲ್ಲಿ ಆದ್ಯತೆ ನೀಡುವಂತೆ ಸೂಚನೆ ನೀಡಿದೆಯಾದರೂ ಹಣ ಪಡೆಯಲು ಜನರ ನೂಕು ನುಗ್ಗಲು ನಿಯಂತ್ರಿಸುವಲ್ಲಿ ಬ್ಯಾಂಕುಗಳು ವಿಫಲವಾಗಿವೆ.

Leave a Reply

comments

Related Articles

error: