ಪ್ರಮುಖ ಸುದ್ದಿ

ನೇತ್ರಾವತಿ ಹೇಮಾವತಿ ನದಿಗಳ ಜೋಡಣೆ ಮಾಡಿ ರೈತರ ಸಮಸ್ಯೆ ಬಗೆಹರಿಸುತ್ತೇವೆ : ಪ್ರಧಾನಿ ನರೇಂದ್ರ ಮೋದಿ ವಾಗ್ದಾನ

ಕಲ್ಪತರು ನಾಡಲ್ಲಿ ಕಾಂಗ್ರೆಸ್ ವಿರುದ್ಧ ಪ್ರಧಾನಿ ಮೋದಿ ವಾಗ್ದಾಳಿ

ರಾಜ್ಯ(ತುಮಕೂರು)ಮೇ.5:-  ರಾಜ್ಯ ವಿಧಾನಸಭೆ ಚುನಾವಣೆ ಹಿನ್ನೆಲೆ ಕಲ್ಪತರು ನಾಡು ತುಮಕೂರಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅಬ್ಬರದ ಪ್ರಚಾರ ಕೈಗೊಂಡಿದ್ದು, ಕಾಂಗ್ರೆಸ್ ವಿರುದ್ಧ ತಮ್ಮ ವಾಗ್ದಾಳಿಯನ್ನು ಮುಂದುವರೆಸಿದ್ದಾರೆ.

ರೈತರ ಇಂದಿನ ಪರಿಸ್ಥಿತಿಗೆ ಕಾಂಗ್ರೆಸ್‌  ದುರಾಡಳಿತವೇ ಕಾರಣ. ಅವರ ದುರಾಡಳಿತದ ಫಲವೇ ರೈತರ ಈ ಅವಸ್ಥೆಗೆ ಕಾರಣ ಎಂದು ಕಿಡಿಕಾರಿದ್ದಾರೆ. ತುಮಕೂರಿನ ಮಹಾತ್ಮ ಗಾಂಧಿ ಕ್ರೀಡಾಂಗಣದಲ್ಲಿ ಆಯೋಜಿಸಿರುವ ಬಿಜೆಪಿ ಸಮಾವೇಶದಲ್ಲಿ ಪಾಲ್ಗೊಂಡು ಪ್ರಧಾನಿ ನರೇಂದ್ರ ಮೋದಿ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದರು. ಕನ್ನಡದಲ್ಲಿ ಭಾಷಣ ಆರಂಭಿಸಿದ ಪ್ರಧಾನಿ ಮೋದಿ ಕಲ್ಪತರು ನಾಡು ತುಮಕೂರಿನ ಜನತೆಗೆ ನನ್ನ ನಮನಗಳು. ಇಷ್ಟೊಂದು ಉತ್ಸಾಹ ನಾನೆಂದೂ ಕಂಡಿಲ್ಲ. ರಾಜಾರಾಮಣ್ಣ ಈ ನೆಲದ ಸುಪುತ್ರ. ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿದ್ದೆ, ಅವರ ಜತೆ ಮಾತನಾಡುವ ಸೌಭಾಗ್ಯ ಒದಗಿ ಬಂದಿತ್ತು. ಈ ಭಾಗ ಅನೇಕ ಮಠ ಮಂದಿರಗಳಿಗೆ ಹೆಸರುವಾಸಿ, ಸಮಾಜಕ್ಕೆ ಮಠಗಳ ಕೊಡುಗೆ ಅಪಾರ, ಅನ್ನದಾಸೋಹ, ಅಕ್ಷರ ದಾಸೋಹದ ಮೂಲಕ ಜನಾನುರಾಗಿಯಾಗಿವೆ. ಅನೇಕ ಸಾಮಾಜಿಕ ಕಾರ್ಯಗಳನ್ನು ಮಾಡಿ ಜನರಿಗೆ ನೆರವು ನೀಡಿವೆ. ಇದು ಅನನ್ಯವಾದದ್ದು ಎಂದು ಗುಣಗಾನ ಮಾಡಿದರು. ಕಾಂಗ್ರೆಸ್‌ ಪಕ್ಷಕ್ಕೆ ಇಲ್ಲಿನ ಜನ ಇಂದಿರಾಗಾಂಧಿ ಕಾಲದಿಂದಲೂ ಬೆಂಬಲಿಸಿಕೊಂಡು ಬಂದಿದ್ದಾರೆ. ಯಾವಾಗ ದೇಶಕ್ಕೆ ಒಬ್ಬ ಬಡವ ಪ್ರಧಾನಿ ಆದರೋ ಅವತ್ತೆ ಕಾಂಗ್ರೆಸ್‌ ಬಡವರ ಬಗ್ಗೆ ಮಾತನಾಡುವುದನ್ನು ನಿಲ್ಲಿಸಿದೆ. ಕಳೆದ 70 ವರ್ಷಗಳಿಂದ ಕಾಂಗ್ರೆಸ್‌ ಆಡಳಿತ ನಡೆಸಿದೆ. ಕಾಂಗ್ರೆಸ್ ರೈತರಿಗೆ ಯಾವ ಕೊಡುಗೆ ನೀಡಿದೆ. ರೈತರ ಆತ್ಮಹತ್ಯೆ ತಡೆಯಲು ಯಾಕೆ ಸಾಧ್ಯವಾಗಿಲ್ಲ. ಚುನಾವಣೆ ಹತ್ತಿರ ಬಂದಾಗ ರೈತರ ಸಾಲ ಮನ್ನಾದ ಮಾತನಾಡುತ್ತಿದ್ದೀರಿ. ಹಿಂದೆ ಏನಾಗಿತ್ತು. ನಿಮ್ಮದೇ ಆಡಳಿತ ಇತ್ತಲ್ಲವಾ.. ಆವಾಗೆಲ್ಲ ನೀವೆಲ್ಲ ಏನು ಮಾಡಿದಿರಿ ಎಂದು ಪ್ರಶ್ನೆಗಳ ಸುರಿಮಳೆಯನ್ನೇ ಸುರಿಸಿದರು.

ಜೆಡಿಎಸ್‌ ಮೂರನೇ ಸ್ಥಾನ ಗಳಿಸುತ್ತೆ ಎಂದು ಎಲ್ಲ ಸಮೀಕ್ಷೆ ಹೇಳುತ್ತಿವೆ. ಜೆಡಿಎಸ್‌ ಮತ್ತೆ ಅಧಿಕಾರಕ್ಕೆ ಬರಲ್ಲ. ಹಾಗಾಗಿ ಅಧಿಕಾರಕ್ಕೆ ಬರೋದು ಬಿಜೆಪಿ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಇನ್ನು ಕಾಂಗ್ರೆಸ್‌ – ಜೆಡಿಎಸ್‌ ನಡುವೆ ಒಳಒಪ್ಪಂದ ಇದೆ. ಬಿಬಿಎಂಪಿಯಲ್ಲಿ ಜೆಡಿಎಸ್‌- ಕಾಂಗ್ರೆಸ್‌ ಆಡಳಿತ ಇದೆ. ಕಾಂಗ್ರೆಸ್ ಇದಕ್ಕೆ ಉತ್ತರ ನೀಡಬೇಕು. ಇದು ಒಳ ಮೈತ್ರಿಗೆ ಸಾಕ್ಷಿ ಎಂದು ಪ್ರಧಾನಿ ಲೇವಡಿ ಮಾಡಿದರು. ಆದ್ಯತೆ ಮೂಲಕ ನಾವು ನೇತ್ರಾವತಿ  ಹೇಮಾವತಿ ನದಿಗಳ ಜೋಡಣೆ ಮಾಡಿ ರೈತರ ಸಮಸ್ಯೆ ಬಗೆಹರಿಸುತ್ತೇವೆ. ಶೀಘ್ರವೇ ಯೋಜನೆ ಜಾರಿಗೆ ತಂದು ಪೂರ್ಣಗೊಳಿಸುತ್ತೇವೆ. ಇದು ನಾನು ನಿಮಗೆ ನೀಡುವ ವಾಗ್ದಾನ ಎಂದು ಜನತೆಗೆ ಭರವಸೆ ನೀಡಿದರು. ಕರ್ನಾಟಕದಲ್ಲಿ 7 ಸ್ಮಾರ್ಟ್‌ ಸಿಟಿ ಅಭಿವೃದ್ಧಿಗೆ 14 ಸಾವಿರ ಕೋಟಿ ರೂ ಅನುದಾನದಲ್ಲಿ ಯೋಜನೆ ಆರಂಭಕ್ಕೆ 836 ಕೋಟಿ ರೂ. ನೀಡಿದ್ದೇವೆ. ಆದರೆ ಕರ್ನಾಟಕ ಸರ್ಕಾರ ಬಳಸಿಕೊಂಡಿದ್ದು ಕೇವಲ 12 ಕೋಟಿ. ಉಳಿದ ಹಣವನ್ನು ಬಳಸಿಕೊಳ್ಳದೇ ಹಣವನ್ನು ಕೊಳೆಯಿಸುತ್ತಿದೆ. ಭ್ರಷ್ಟಾಚಾರ ತೊಡದು ಹಾಕಲು ನಾವು ಅಭಿಯಾನ ಕೈಗೊಂಡಿದ್ದೇವೆ.  ಆದರೆ ರಾಜ್ಯ ಸರ್ಕಾರದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ.

2014 ರ ಚುನಾವಣೆಯಲ್ಲಿ ಪ್ರಧಾನಿ ಮೋದಿ ಸರ್ಕಾರ ಬಂದರೇ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಮಾಜಿ ಪ್ರಧಾನಿ ದೇವೇಗೌಡರು ಹೇಳಿದ್ದರು.  ಆ ವೇಳೆ ನಾನು ಗೌರವದಿಂದ ಮಾಜಿ ಪ್ರಧಾನಿ ದೇವೇಗೌಡರೇ ಆತ್ಮಹತ್ಯೆ ಮಾಡಿಕೊಳ್ಳುವ ಅವಶ್ಯಕತೆ ಇಲ್ಲ. ನೀವು ಹಿರಿಯರು. ನಿಮ್ಮಂತವರು ನಮ್ಮ ದೇಶಕ್ಕೆ ಬೇಕಿದೆ ಎಂದು ಹೇಳಿದ್ದೆ.  ನಮ್ಮ – ಅವರ ಮಧ್ಯೆ ತೀಕ್ಷ್ಣ ಸ್ಪರ್ಧೆ ಇದ್ದಾಗ ಆ ಮಾತು ಆಡಿದ್ದರು ಎಂದು ಜೆಡಿಎಸ್ ಗೆ ಟಾಂಗ್ ನೀಡಿದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: