ಕರ್ನಾಟಕಪ್ರಮುಖ ಸುದ್ದಿ

ಟಿಪ್ಪು ಮಾತ್ರವಲ್ಲ, 30 ಮಹನೀಯರ ಜಯಂತಿ ಮಾಡ್ತೀವಿ: ಪ್ರಧಾನಿಗೆ ಸಿದ್ದರಾಮಯ್ಯ ಮಾರುತ್ತರ

ಬೆಂಗಳೂರು (ಮೇ 6): ಕಾಂಗ್ರೆಸ್ ಪಕ್ಷ ಮತಬ್ಯಾಂಕ್ ರಾಜಕೀಯಕ್ಕಾಗಿ ಸುಲ್ತಾನರ ಜಯಂತಿಗಳನ್ನು ಮಾಡುತ್ತಿದೆ ಎಂಬ ಪ್ರಧಾನಿ ನರೇಂದ್ರ ಮೋದಿ ಅವರ ಹೇಳಿಕೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾರುತ್ತರ ನೀಡಿದ್ದಾರೆ.

ಚಿತ್ರದುರ್ಗದಲ್ಲಿ ಭಾನುವಾರ ಚುನಾವಣಾ ಪ್ರಚಾರ ನಡೆಸಿದ ಪ್ರಧಾನಿ ನರೇಂದ್ರ ಮೋದಿ ಅವರು, ಸಿದ್ದರಾಮಯ್ಯ ಅವರ ಸರ್ಕಾರವು ಮತ ಬ್ಯಾಂಕ್ ರಾಜಕೀಯಕ್ಕಾಗಿ ಸುಲ್ತಾನರ ಜಯಂತಿಗಳನ್ನು ಆಚರಿಸುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದರು. ಮಾತ್ರವಲ್ಲ ಕಾಂಗ್ರೆಸ್‌ ಪಕ್ಷವು ಪೀಳಿಗೆಯಿಂದ ಪೀಳಿಗೆಗೆ ನಮಗೆ ಸ್ಫೂರ್ತಿಯಾದ ವ್ಯಕ್ತಿಗಳ ಜಯಂತಿಯನ್ನು ಗೌರವದಿಂದ ಆಚರಿಸಬೇಕಿತ್ತು. ಆದರೆ ಇಂತಹವರ ಜಯಂತಿಗಳನ್ನು ಆಚರಿಸುವ ಬಗ್ಗೆ ಅವರು ಯೋಚನೆಯನ್ನೂ ಮಾಡಲಾರರು. ವೀರ ಮದಕರಿ ಮತ್ತು ಒನಕೆ ಓಬವ್ವ ಅವರನ್ನು ಮರೆತಿದ್ದಾರೆ. ಆದರೆ ಮತ ಬ್ಯಾಂಕ್ ರಾಜಕಾರಣಕ್ಕಾಗಿ ಅವರು ಸುಲ್ತಾನರ ಜಯಂತಿಗಳನ್ನು ಆಚರಿಸುತ್ತಿದ್ದಾರೆ ಎಂದು ಟೀಕಿಸಿದ್ದರು.

ಇದಕ್ಕೆ ಟ್ವಿಟ್ಟರ್‌ನಲ್ಲಿ ಉತ್ತರಿಸಿರುವ ಸಿದ್ದರಾಮಯ್ಯ ಅವರು, ನಾಯಕರು, ಸಾಧುಗಳು ಮತ್ತು ಕರ್ನಾಟಕವನ್ನು ನಿರ್ಮಿಸಿದ ಸುಮಾರು 30 ಮಂದಿ ಮಹನೀಯರ ಜಯಂತಿಗಳನ್ನು ನಾವು ಆಚರಿಸುತ್ತಿದ್ದೇವೆ. ಆದರೆ ಮತಗಳ ಮೇಲೆ ಕಣ್ಣಿಟ್ಟಿರುವ ಪ್ರಧಾನಿ ಮೋದಿ ಅವರು, ಮಹನೀಯರಲ್ಲಿ ಒಬ್ಬರಾದ ಟಿಪ್ಪು ಸುಲ್ತಾನ್ ಹೆಸರನ್ನು ಬಿಂಬಿಸುವ ಮೂಲಕ ನಮ್ಮ ಸಮಾಜವನ್ನು ಧ್ರುವೀಕರಿಸಲು ಪ್ರಯತ್ನಿಸುತ್ತಿದ್ದಾರೆ. ಈಗ ಮತಬ್ಯಾಂಕ್ ರಾಜಕಾರಣ ಮಾಡುತ್ತಿರುವುದು ಯಾರು? ಎಂದು ಸಿಎಂ ಟ್ವೀಟ್ ಮಾಡಿದ್ದಾರೆ. (ಎನ್.ಬಿ)

Leave a Reply

comments

Related Articles

error: