
ಮೈಸೂರು
ಕಲೆಗೆ ವ್ಯಕ್ತಿತ್ವವನ್ನು ಎತ್ತಿ ಹಿಡಿಯಬಲ್ಲ ಶಕ್ತಿಯಿದೆ : ಪ್ರೊ.ಸಿ.ಪಿ.ಸಿದ್ದಾಶ್ರಮ
ಮನುಷ್ಯನ ವ್ಯಕ್ತಿತ್ವ ಸರಿಯಾದ ನೆಲೆಗಟ್ಟಿನಲ್ಲಿ ರೂಪುಗೊಳ್ಳಬೇಕಾದರೆ ಕಲೆ, ಸಂಸ್ಕೃತಿ, ಸಾಹಿತ್ಯದ ನಿರಂತರ ಅಧ್ಯಯನ ಅಗತ್ಯ ಎಂದು ಸಾಹಿತಿ ಪ್ರೊ.ಸಿ.ಪಿ.ಸಿದ್ದಾಶ್ರಮ ತಿಳಿಸಿದರು.
ಮೈಸೂರಿನ ಕಲಾಮಂದಿರದ ಮನೆಯಂಗಳದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಗಿರಿಜನ ಉಪಯೋಜನೆಯಡಿ ಪರಿಶಿಷ್ಟ ಪಂಗಡಗಳ ಕಲಾವಿದರಿಗೆ ಏರ್ಪಡಿಸಿದ್ದ ಕಲಾಪ್ರಕಾರಗಳ ತರಬೇತಿ ಕಾರ್ಯಾಗಾರದ ಸಮಾರೋಪ ಸಮಾರಂಭದಲ್ಲಿ ಪ್ರೊ.ಸಿ.ಪಿ.ಸಿದ್ದಾಶ್ರಮ ಮಾತನಾಡಿದರು.
ಕೆಲವರು ಅಧಿಕಾರ ಮತ್ತು ಅಂತಸ್ತಿನಿಂದ ವ್ಯಕ್ತಿತ್ವ ರೂಪುಗೊಳ್ಳುತ್ತದೆ ಎಂದು ತಿಳಿದುಕೊಂಡಿರುತ್ತಾರೆ. ಆದರೆ ಕಲೆ, ಸಂಸ್ಕೃತಿ ಹಾಗೂ ಸಾಹಿತ್ಯದ ಅಧ್ಯಯನಗಳಿಂದ ಮಾತ್ರ ಮನುಷ್ಯನ ವ್ಯಕ್ತಿತ್ವ ರೂಪುಗೊಳ್ಳುತ್ತದೆ. ಕಲೆಗೆ ಮಾತ್ರ ವ್ಯಕ್ತಿತ್ವವನ್ನು ಎತ್ತಿ ಹಿಡಿಯಬಲ್ಲ ಶಕ್ತಿಯಿದೆ ಎಂದರು.
ಅಡಂಬರದ ವಿವಾಹಗಳ ಬದಲಿಗೆ ಹಸಿದವರಿಗೆ ಊಟ ಹಾಕುವಂತಾಗಬೇಕು. ಗಿರಿಜನರ ಸರಳ ಬದುಕು ಶ್ರೀಮಂತರಿಗೆ ಮಾದರಿಯಾಗಬೇಕು. ಶ್ರೀಸಾಮಾನ್ಯರು ಮೌಢ್ಯದಿಂದ ತೊಂದರೆ ಅನುಭವಿಸುತ್ತಿದ್ದು ಮೌಢ್ಯ ನಿಷೇಧ ಕಾಯ್ದೆಯನ್ನು ಸರ್ಕಾರ ಜಾರಿಗೆ ತರಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕ ವಿ.ಎನ್.ಮಲ್ಲಿಕಾರ್ಜುನ ಸ್ವಾಮಿ, ಸಹಾಯಕ ನಿರ್ದೇಶಕ ಎಚ್.ಚನ್ನಬಸಪ್ಪ, ಜಾನಪದ ವಿದ್ವಾಂಸ ಸ.ಚ.ಮಹದೇವ ನಾಯಕ, ಗಾಯಕಿಯರಾದ ಸುನೀತಾ ಚಂದ್ರಕುಮಾರ್, ರಾಜೇಶ್ವರಿ ಮತ್ತಿತರರು ಉಪಸ್ಥಿತರಿದ್ದರು.