
ದೇಶಪ್ರಮುಖ ಸುದ್ದಿ
ನವದೆಹಲಿಯಲ್ಲಿ 70 ಕಿ.ಮೀ ವೇಗದಲ್ಲಿ ಅಬ್ಬರಿಸಿದ ಧೂಳು ಬಿರುಗಾಳಿ
ನವದೆಹಲಿ,ಮೇ 8-ದೆಹಲಿ ಹಾಗೂ ಚಂಡೀಗಢದ ಹಲವೆಡೆ ಧೂಳು ಬಿರುಗಾಳಿ ಸೋಮವಾರ ರಾತ್ರಿ ಅಬ್ಬರಿಸಿದೆ. ರಾತ್ರಿ 11.20ರ ಸುಮಾರಿಗೆ ರಾಷ್ಟ್ರ ರಾಜಧಾನಿ ದೆಹಲಿ ಭಾಗದಲ್ಲಿ ಗಂಟೆಗೆ 70 ಕಿ.ಮೀ. ವೇಗದಲ್ಲಿ ಬಿರುಗಾಳಿ ಬೀಸಿದೆ.
ಧೂಳು ಬಿರುಗಾಳಿಯ ಅಬ್ಬರಕ್ಕೆ ವಿದ್ಯುತ್ ಕಂಬಗಳು, ಮರಗಳು ಧರೆಗುರುಗಳಿದ್ದು, ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಗಾಜಿಯಾಬಾದ್ ಹಾಗೂ ನೋಯಿಡಾದ ಹಲವೆಡೆ ಶಾಲೆಗಳಿಗೆ ರಜೆ ಘೋಷಿಸಲಾಗಿದೆ.
ಈ ಸಂದರ್ಭದಲ್ಲಿ ಸಾರ್ವಜನಿಕರು ಅನುಸರಿಸಬೇಕಾದ ಕ್ರಮಗಳ ಬಗ್ಗೆ ಆಡಳಿತ ಸೂಚನಾ ಪಟ್ಟಿ ಹೊರಡಿಸಿದೆ. ಸಂಚಾರದ ವೇಳೆ ಎಚ್ಚರಿಕೆ ವಹಿಸುವಂತೆ ದೆಹಲಿ ಟ್ರಾಫಿಕ್ ಪೊಲೀಸರು ತಿಳಿಸಿದ್ದು, ಗುಡುಗು ಸಹಿತ ಭಾರೀ ಮಳೆಯ ಮುನ್ಸೂಚನೆ ಇರುವುದಾಗಿ ದೆಹಲಿ ಮೆಟ್ರೊ ಹೇಳಿದೆ. ಬಿರುಗಾಳಿ ವೇಗ 90 ಕಿ.ಮೀ. ತಲುಪಿದರೆ ಮೆಟ್ರೊ ಸಂಚಾರ ಸ್ಥಗಿತಗೊಳಿಸಲು ನಿರ್ಧರಿಸಲಾಗಿದೆ.
ಮನೆಯ ಮೇಲ್ಛಾವಣೆ, ಕಿಟಕಿ-ಬಾಗಿಲುಗಳ ಭದ್ರತೆ ಬಗ್ಗೆ ಗಮನವಹಿಸಬೇಕು, ಹೂವಿನ ಕುಂಡಗಳನ್ನು ಬೀಳದ ಜಾಗದಲ್ಲಿ ಇರಿಸಬೇಕು. ಕಾರಿನಲ್ಲಿ ಸಂಚರಿಸುವಾಗ ಬಿರುಗಾಳಿ ಬೀಸಿದರೆ ಸಹಾಯ ಸಿಗುವವರೆಗೂ ಕಾರಿನಲ್ಲಿಯೇ ಇರಬೇಕು. ಗುಡುಗು, ಮಳೆ ಹಾಗೂ ಬಿರುಗಾಳಿ ಎದ್ದಾಗ ಎಲ್ಲ ಎಲೆಕ್ಟ್ರಿಕ್ ಸಲಕರಣೆಗಳನ್ನು ಸ್ವಿಚ್ ಆಫ್ ಮಾಡಬೇಕು ಹಾಗೂ ನೀರು, ಕಬ್ಬಿಣದ ಸರಳುಗಳನ್ನು ಮುಟ್ಟದಂತೆ ಎಚ್ಚರ ವಹಿಸುವಂತೆ ಸರ್ಕಾರ ತಿಳಿಸಿದೆ. ಅಪಾಯಕ್ಕೆ ಸಿಲುಕಿದರೆ 1077 ಸಹಾಯವಾಣಿಗೆ ಕರೆ ಮಾಡಬಹುದಾಗಿದೆ ಎಂದು ತಿಳಿಸಲಾಗಿದೆ.
ಬಿರುಗಾಳಿ ಬೀಸುವುದಕ್ಕೂ ಮುನ್ನ ದೆಹಲಿ-ಚಂಡೀಗಢ ಪ್ರದೇಶದಲ್ಲಿ ದಿನದ ಉಷ್ಣಾಂಶ 39.6 ಡಿಗ್ರಿ ಸೆಲ್ಸಿಯಸ್ ತಲುಪಿತ್ತು. ಈ ಕಾಲದ ಸರಾಸರಿ ಉಷ್ಣತೆಗಿಂತಲೂ ಸೋಮವಾರ ಉಷ್ಣಾಂಶ ಹೆಚ್ಚಿತ್ತು ಎನ್ನಲಾಗಿದೆ.
ಉತ್ತರ ಭಾರತ ಸೇರಿ ದೇಶದ ಹಲವು ಭಾಗಗಳಲ್ಲಿ ಸೋಮವಾರ ಬಿರುಗಾಳಿ ಮತ್ತು ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ನೀಡಿದ್ದ ಮಾಹಿತಿ ಮೇರೆಗೆ ಭಾನುವಾರ ಗೃಹಸಚಿವಾಲಯ ಮುನ್ಸೂಚನೆ ಪ್ರಕಟಣೆ ಹೊರಡಿಸಿತ್ತು. ಮೇ 6ರಿಂದ ಮೇ 9ರ ವರೆಗೂ ಬಿರುಗಾಳಿ ಹಾಗೂ ಭಾರೀ ಮಳೆಯ ಮುನ್ಸೂಚನೆ ನೀಡಲಾಗಿದೆ.
ಚಂಡಮಾರುತದ ಜೋರು ಗಾಳಿ ಹಾಗೂ ಮಿಂಚು-ಗುಡುಗಿಗೆ ಕಳೆದ ವಾರ ಐದು ರಾಜ್ಯಗಳಲ್ಲಿ 124 ಜನ ಸಾವಿಗೀಡಾಗಿದ್ದರೆ, 300ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದರು. (ಎಂ.ಎನ್)