ಪ್ರಮುಖ ಸುದ್ದಿಮೈಸೂರು

ರಾಜ್ಯದ ಮುಖ್ಯಮಂತ್ರಿ ಸುಳ್ಳು ವದಂತಿಗಳ ಮುಖಾಂತರ ದಲಿತರ ಮತಗಳನ್ನು ಸೆಳೆಯುತ್ತಿದ್ದಾರೆ : ವಿ.ಶ್ರೀನಿವಾಸ್ ಪ್ರಸಾದ್ ಆರೋಪ

ಮೈಸೂರು,ಮೇ.8:- ರಾಜ್ಯದ ಮುಖ್ಯಮಂತ್ರಿ ಸುಳ್ಳು ವದಂತಿಗಳ ಮುಖಾಂತರ ದಲಿತರ ಮತಗಳನ್ನು ಸೆಳೆಯುತ್ತಿದ್ದಾರೆ ಎಂದು ಬಿಜೆಪಿ ಮುಖಂಡ ವಿ.ಶ್ರೀನಿವಾಸ್ ಪ್ರಸಾದ್ ಆರೋಪಿಸಿದ್ದಾರೆ.

ಮೈಸೂರಿನ ಖಾಸಗಿ ಹೋಟೆಲ್ ನಲ್ಲಿಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ರಾಹುಲ್ ಗಾಂಧಿ ಸಂವಿಧಾನವನ್ನು ನಾವು ಬದಲಾಯಿಸಲು ಬಿಡುವುದಿಲ್ಲ ಎನ್ನುತ್ತಾರೆ. ಆದರೆ ಬಿಜೆಪಿ ಎಲ್ಲೂ ಕೂಡಾ ಸಂವಿಧಾನವನ್ನು ಬದಲಾಯಿಸುತ್ತೇವೆಂದು ಹೇಳಿಲ್ಲ. ಅನಂತ್ ಕುಮಾರ್ ಹೇಳಿಕೆ ನೀಡಿದ್ದರಾದರೂ, ಬಳಿಕ ಕ್ಷಮೆಯನ್ನು ಕೂಡಾ ಕೇಳಿ ಆಗಿದೆ. ನರೇಂದ್ರ ಮೋದಿಯವರೇ  ಸಂವಿಧಾನವನ್ನು ಭಾರತದ ಶ್ರೇಷ್ಠ ಗ್ರಂಥ ಎಂದು ಹೇಳುತ್ತಾರೆ. ಭಾರತದ ಸಂವಿಧನವನ್ನು ಯಾರೂ ಕೂಡಾ ಬದಲಾಯಿಸಲಾಗುವುದಿಲ್ಲ. ಆದರೆ ಕಾಂಗ್ರೆಸ್ ನವರು ಈ ಸುಳ್ಳು ವದಂತಿಯಿಂದ ಜನರ ದಾರಿ ತಪ್ಪಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪ್ರಗತಿಪರರು, ಸಮಾಜವಾದಿಗಳು, ಡೋಂಗಿಗಳು ಇವರೆಲ್ಲಾ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ನ ಚೇಲಾಗಳಾಗಿದ್ದು,ಇಲ್ಲ ಸಲ್ಲದ ಸುಳ್ಳು ವದಂತಿಗಳನ್ನು ಹಬ್ಬಿಸುತ್ತಿದ್ದಾರೆ ಎಂದು ಕಿಡಿಕಾರಿದರು. ಸಿಎಂಗೆ ಚಾಮುಂಡೇಶ್ವರಿಯಲ್ಲಿ ಗೆಲ್ಲುವ ವಿಶ್ವಾಸ ಇದ್ದಿದ್ದರೆ ಯಾಕೆ ಬದಾಮಿಯಲ್ಲಿ ಸ್ಪರ್ಧಿಸಬೇಕಿತ್ತು. ಸಿದ್ದರಾಮಯ್ಯ ಇದು ನನ್ನ ಕೊನೆಯ ಚುನಾವಣೆ ಅಂತ ಹೇಳಿಕೊಂಡು ಬರುತ್ತಿದ್ದಾರೆ,ಅದೆಷ್ಟು ಬಾರಿ ಈ ರೀತಿ ಹೇಳಿದ್ದಾರೋ ಗೊತ್ತಿಲ್ಲ. ಚಾಮುಂಡೇಶ್ವರಿಯಲ್ಲಿ ಅಲ್ಲಿನ ಜನರೇ ಅವರನ್ನು ಸೋಲಿಸೋದಕ್ಕೆ ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಚಾಮುಂಡೇಶ್ವರಿಯಲ್ಲಿ ಸೋಲಿನ ಭಯದಿಂದ ಬದಾಮಿಗೆ ಪಲಾಯನ ಮಾಡಿದ್ದು, ಪದೇ ಪದೇ ಸಿದ್ದರಾಮಯ್ಯ ಅವರಪ್ಪನಾಣೆ, ಅವ್ವನಾಣೆ  ಅಂತಾರೆ. ಅವರ ಮಾತುಗಳಿಂದಲೇ ಅವರ ವ್ಯಕ್ತಿತ್ವ ಗೊತ್ತಾಗುತ್ತೆ. ಸಿಎಂ ಆಗಿ ಈ ರೀತಿ ಮಾತನಾಡುತ್ತಾರೆ ಅಂದರೆ ಅವರಿಗೆ ಏನು ಹೇಳಬೇಕು. ಕುಮಾರಸ್ವಾಮಿ ಅವರಪ್ಪನಾಣೆ ಗೆಲ್ಲಲ್ಲ ಅಂತಾರೆ. ಮುಖ್ಯಮಂತ್ರಿಯಾಗಿ ಯಾವ ರೀತಿ ಮಾತನಾಡಬೇಕು ಎನ್ನುವ ಸಹಜ ನೈತಿಕತೆ ಗೊತ್ತಿಲ್ಲ. ಸಿದ್ದರಾಮಯ್ಯ 100%ದಲಿತ ವಿರೋಧಿ. ಬಿಜೆಪಿಯವರು ದಲಿತ ವಿರೋಧಿಗಳಲ್ಲ ಎಂದು ಸ್ಪಷ್ಟಪಡಿಸಿದರು.

ಖರ್ಗೆಯವರಿಗೆ ರೋಡ್ ಶೋ ವೇಳೆ ಜನರೇ ಬುದ್ಧಿ ಹೇಳಿದ್ದಾರೆ. ದಲಿತರನ್ನು ಕಡೆಗಣಿಸಿದ್ದಕ್ಕೆ ತಕ್ಕ ಉತ್ತರವನ್ನು ನೀಡಿದ್ದಾರೆ. ಮುಂದಿನ ಸಿಎಂರನ್ನು ಹೈಕಮಾಂಡ್ ನಿರ್ಧರಿಸಲಿದೆ ಎಂದು ಖರ್ಗೆ ಹೇಳುತ್ತಾರೆ. ಆದರೆ ಸಿದ್ದರಾಮಯ್ಯ ಹೋದಲೆಲ್ಲ ನಾನೇ ಸಿಎಂ ಎನ್ನುತ್ತಾರೆ. ಇಲ್ಲಿ ಖರ್ಗೆಯ ಅಸಹಾಯಕತೆ ಎದ್ದು ಕಾಣಿಸುತ್ತಿದೆ ಎಂದು ವ್ಯಂಗ್ಯವಾಡಿದರು.

ಸುದ್ದಿಗೋಷ್ಠಿಯಲ್ಲಿ ಬಿಜೆಪಿಯ ಪ್ರಮುಖರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: