ಕರ್ನಾಟಕಪ್ರಮುಖ ಸುದ್ದಿಮೈಸೂರು

ಕೋಮುವಾದಕ್ಕೆ ತುಪ್ಪ ಸುರಿಯುವುದು ದೇಶ ದ್ರೋಹ: ಯೋಗೇಂದ್ರ ಯಾದವ್

ಮೈಸೂರು, ಮೇ.8 : ದೇಶದಲ್ಲಿ ಇಂದು ಜಾತ್ಯತೀತ ಪರಿಕಲ್ಪನೆಗೆ ದೊಡ್ಡ ಹೊಡೆತ ಬಿದ್ದಿದ್ದು, ಹಿಂದೂ- ಮುಸ್ಲಿಂ ಕೋಮು ದಳ್ಳುರಿಗೆ ತುಪ್ಪ ಸುರಿಯುವುದು ಬಹು ದೊಡ್ಡ ದೇಶ ದ್ರೋಹವಾಗಿದೆ ಎಂದು ಸ್ವರಾಜ್ ಇಂಡಿಯಾ ವರಿಷ್ಠ ಯೋಗೇಂದ್ರ ಯಾದವ್ ನುಡಿದರು.

ನಗರದ ಜಿಲ್ಲಾ ಪತ್ರಕರ್ತರ ಭವನದಲ್ಲಿ ಆಯೋಜಿಸಿದ್ದ ಸಂವಾದದಲ್ಲಿ  ಮಾತನಾಡಿ, ದೇಶದ ತಳಹದಿಗೆ ಇಂದಿನ ಪರಿಸ್ಥಿತಿಯಲ್ಲಿ ಅಪಾಯವೊದಗಿದ್ದು, ಭಾರತದ ಪರಿಕಲ್ಪನೆಗೆ ದೊಡ್ಡ ಸವಾಲು ಎದುರಾಗಿದೆ. ಆದರೂ ಯಾವ ಪಕ್ಷವೂ ಇದಕ್ಕೆ ಪ್ರತಿರೋಧ ಒಡ್ಡುವುದನ್ನು ಗಂಭೀರವಾಗಿ ಪಗಿಗಣಿಸಿಲ್ಲವೆಂದು ಆತಂಕ ವ್ಯಕ್ತಪಡಿಸಿದರು.

ದೇಶದಲ್ಲಿ ರೈತರು, ದಲಿತರು, ಹಿಂದುಳಿದವರು, ಅಲ್ಪ ಸಂಖ್ಯಾತರು ಮೊದಲಾದವರು ಎದುರಿಸುತ್ತಿರುವ ಸಮಸ್ಯೆ ಹೋಗಲಾಡಿಸುವ ನಿಟ್ಟಿನಲ್ಲಿ ಎಲ್ಲ ರಾಷ್ಟ್ರೀಯ ಪಕ್ಷಗಳು ವಿಫಲವಾಗಿರುವ ಹಿನ್ನೆಲೆಯಲ್ಲಿ ಹೊಸದೊಂದು ಪಕ್ಷ ಅಗತ್ಯ ಎಂಬ ಕಾರಣದಿಂದ ತಮ್ಮ ಪಕ್ಷ ಹುಟ್ಟಿಕೊಂಡಿದೆ ಎಂದು ವಿವರಣೆ ನೀಡಿದರ ಅವರು, ಈಗ ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ಬಂದಿದ್ದು, ಈ ವೇಳೆ ಇಲ್ಲಿನ ಸರ್ಕಾರ ಏನು ಮಾಡಿದೆ ಎಂಬ ಬಗ್ಗೆ ಮೌಲ್ಯ ಮಾಪನ ನಡೆಯಬೇಕಾದ ಹಿಂದೆಯೇ, ಈ ನಾಲ್ಕು ವರ್ಷಗಳಲ್ಲಿ ಕೇಂದ್ರದಲ್ಲಿನ ಸರ್ಕಾರ ಏನು ಮಾಡಿದೆ ಎಂಬ ಚಿಂತನೆಯೂ ನಡೆಯಬೇಕಾಗಿತ್ತು. ಆದರೆ ಈ ರೀತಿ ಆಗದಿರುವುದು ಬೇಸರದ ಸಂಗತಿಯೆಂದರು.

ಈ ಚುನಾವಣೆಯಲ್ಲಿ ಎಲ್ಲರೂ ಭ್ರಷ್ಟಾಚಾರದ ಬಗ್ಗೆಯೇ ಮಾತನಾಡುತ್ತ ಗಂಭೀರ ವಿಷಯಗಳ ಬಗ್ಗೆ ಗಮನ ಸೆಳೆಯುವುದನ್ನು ಮರೆತಿದ್ದಾರೆ ಎಂದು ಟೀಕಿಸಿದ ಅವರು, ಇನ್ನು ಭ್ರಷ್ಟಾಚಾರಕ್ಕೆ ಚಿನ್ನದ ಪದಕ ನೀಡುವುದಿದ್ದಲ್ಲಿ ಅದನ್ನು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯುರಪ್ಪ ಅವರಿಗೇ ನೀಡಬೇಕು ಎಂದು ಲೇವಡಿ ಮಾಡಿದರಲ್ಲದೆ, ರೆಡ್ಡಿ ಸಹೋದರರ ಲೂಟಿ ಬಗ್ಗೆ ಯಾರೂ ಏಕೆ ಗಮನ ಹರಿಸುತ್ತಿಲ್ಲ ಎಂದು ಸಹಾ ಪ್ರಶ್ನಿಸಿದರು.

ಜೊತೆಗೆ, ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿ, ಇಲ್ಲಿ ಲೋಕಾಯುಕ್ತ ಏಕೆ ದುರ್ಬಲ ಗೊಳಿಸಲಾಯಿತೆಂದು ಕೇಳಿದರಲ್ಲದೆ, ಬತ್ತದ ಕಣಜ ಎಂದೇ ಕರೆಯುವ ಮಂಡ್ಯದಲ್ಲಿಯೂ ಏಕೆ ರೈತರು ಆತ್ಮಹತ್ಯೆ ಮಾಡಿಕೊಂಡರು, ಇಲ್ಲಿ ಉದ್ಯೋಗ ಸೃಷ್ಟಿ ಎಷ್ಟಾಗಿದೆ, ಕೇಂದ್ರ ಸರ್ಕಾರ ಭರವಸೆ ನೀಡಿದ್ದಂತೆ ಉದ್ಯೋಗ ಸೃಷ್ಟಿ ಆಗಿದೆಯೇ ಎಂಬ ಬಗ್ಗೆಯೂ ಚಿಂತಿಸಬೇಕಾಗಿದೆ ಎಂದರಲ್ಲದೆ, ಈ ರೀತಿಯ ಎಲ್ಲ ಸಮಸ್ಯೆಗಳಿಗೆ ಪರ್ಯಾಯವಾಗಿ ತಮ್ಮ ಪಕ್ಷ ಅಸ್ತಿತ್ವಕ್ಕೆ ಬಂದಿದೆ ಎಂದು ನುಡಿದರು.

ತಮ್ಮ ಪಕ್ಷ ಈ ಚುನಾವಣೆಯಲ್ಲಿ ಭ್ರಷ್ಟಾಚಾರ ಮುಕ್ತ, ರೈತರ ಆತ್ಮಹತ್ಯೆ ಮುಕ್ತ, ನಿರುದ್ಯೋಗ ಮುಕ್ತ ಕರ್ನಾಟಕ ಭರವಸೆಯೊಡನೆ ಸ್ಪರ್ಧಿಸಿದ್ದು, ರೈತ ಸಂಘ, ದಲಿತ ಸಂಘರ್ಷ ಸಮಿತಿ, ಭ್ರಷ್ಟಾಚಾರ ಮುಕ್ತ ಕರ್ನಾಟಕ ಸಂಘಟನೆಗಳು, ಪ್ರಗತಿಪರರು, ಚಿಂತಕರ ಬೆಂಬಲವಿದೆ ಎಂದು ಮಾಹಿತಿ ನೀಡಿದರು.

ಅಲ್ಲದೇ ಪಕ್ಷದಿಂದ ಏಳು ಮುಕ್ತಕ್ಕಾಗಿ ವಿಶೇಷ ಕಾರ್ಯಸೂಚಿಯೂ ರಾಜ್ಯಕ್ಕೆ ಅಗತ್ಯವಿದೆ ಎಂದರು.

ಸಂವಾದದಲ್ಲಿ ಪ್ರೊ. ಶಬ್ಬೀರ್, ಚಾಮರಸ ಪಾಟೀಲ್, ಅಬ್ದುಲ್ ಪಾಷ, ಇತರರು ಇದ್ದರು. (ವರದಿ : ಕೆ.ಎಂ.ಆರ್)

Leave a Reply

comments

Related Articles

error: