ಪ್ರಮುಖ ಸುದ್ದಿಮೈಸೂರು

ನನ್ನ ಮೇಲಿನ ಆರೋಪ ಸರಿಯಲ್ಲ: ಶ್ರೀನಿವಾಸ್ ಪ್ರಸಾದ್‍ಗೆ ಧ್ರುವ ನಾರಾಯಣ ಎದಿರೇಟು

ತಮ್ಮನ್ನು ಪುಕ್ಕಲ ಎಂದು ಜರೆದ ಮಾಜಿ ಸಚಿವ ವಿ. ಶ್ರೀನಿವಾಸ್ ಪ್ರಸಾದ್‍ ಅವರನ್ನು ತರಾಟೆಗೆ ತೆಗೆದುಕೊಂಡಿರುವ ಚಾಮರಾಜನಗರ ಸಂಸದ ಧ್ರುವ ನಾರಾಯಣ, “ನಾನು ಪುಕ್ಕಲನಾಗಿದ್ದರೆ ಅವರನ್ನು ಸಚಿವ ಸ್ಥಾನದಿಂದ ಕೈಬಿಟ್ಟಾಗ ಬೆಂಬಲಿಸುತ್ತಿರಲಿಲ್ಲ. ಸಚಿವ ಸ್ಥಾನದಲ್ಲಿ ಮುಂದುವರೆಸುವಂತೆ ಒತ್ತಾಯಿಸಿ ನಿಯೋಗವನ್ನೂ ಕೊಂಡೊಯ್ಯುತ್ತಿರಲಿಲ್ಲ. ಅವರು ಕರೆದ ಸಭೆಗೂ ಹೋಗುತ್ತಿರಲಿಲ್ಲ” ಇದನ್ನು ಅವರು ಅರ್ಥ ಮಾಡಿಕೊಂಡಿದ್ದರೆ ಈ ರೀತಿ ಮಾತನಾಡುತ್ತಿರಲಿಲ್ಲ ಎಂದರು.

“ಹಿರಿಯ ರಾಜಕಾರಣಿ ಆಗಿರುವ ಅವರು, ಇಂತಹ ಪದಗಳನ್ನು ಪ್ರಯೋಗ ಮಾಡಿದರೆ ಅವರ ವ್ಯಕ್ತಿತ್ವಕ್ಕೆ ಕುಂದು ಉಂಟಾಗುತ್ತದೆ. ನಾನು ಪುಕ್ಕಲನಾಗಿದ್ದರೆ ಅವರ ಕಷ್ಟ ಕಾಲದಲ್ಲಿ ಅವರ ಪರವಾಗಿ ನಿಲ್ಲುತ್ತಿರಲಿಲ್ಲ. ದೆಹಲಿಯಲ್ಲಿ ನಾಲ್ವರು ಸಂಸದರ ಜೊತೆ ತೆರಳಿ ಮುಖ್ಯಮಂತ್ರಿಯವರನ್ನು ಸಂಪುಟದಲ್ಲಿ ಉಳಿಸುವಂತೆ ಕೋರಿಕೊಂಡಿದ್ದೇನೆ. ಹೀಗಾಗಿ ಅವರ ಆರೋಪಗಳು ಆಧಾರ ರಹಿತ ಮತ್ತು ಭಾವಾವೇಶದಿಂದ ಕೂಡಿವೆ” ಎಂದು ಸುದ್ದಿಗಾರರಿಗೆ ತಿಳಿಸಿದರು.

ಕೈಕಟ್ಟಿ ನಿಲ್ಲುವ ಅಗತ್ಯ ನನಗಿಲ್ಲ…

ನಾನು ಮುಖ್ಯಮಂತ್ರಿ ಮತ್ತು ಮಹದೇವಪ್ಪ ಅವರ ಮಕ್ಕಳ ಮುಂದೆ ಕೈಕಟ್ಟಿ ನಿಲ್ಲುತ್ತೇನೆ ಎಂದು ಶ್ರೀನಿವಾಸ ಪ್ರಸಾದ್ ಹೇಳಿದ್ದಾರೆ. ಸಿಎಂ ಪ್ರತಿನಿಧಿಸುವ ವರುಣಾ ಕ್ಷೇತ್ರದ ಕಾರ್ಯಕ್ರಮಗಳಿಗೆ ಹಾಜರಾಗಲು ಅವರಿಗೆ ಸಾಧ್ಯವಿಲ್ಲದಿದ್ದಾಗ ನನಗೆ ಸೂಚನೆ ಕೊಡುತ್ತಿದ್ದರು. ಹಾಗೆ ಹೋದಾಗ ಮುಖ್ಯಮಂತ್ರಿಗಳ ಮಗನೂ ಕಾರ್ಯಕ್ರಮಕ್ಕೆ ಆಗಮಿಸುತ್ತಿದ್ದರು. ಇದರಲ್ಲಿ ತಪ್ಪೇನಿದೆ? ಶ್ರೀನಿವಾಸ್ ಪ್ರಸಾದ್ ಅವರಿಗೆ ಅನಾರೋಗ್ಯವಿದ್ದಾಗ ಅವರ ಅಳಿಯನ ಜೊತೆ ನಾನು ಕಾರ್ಯಕ್ರಮಗಳಿಗೆ ಹಾಜರಾಗಿದ್ದುಂಟು. ಆಗ ಯಾಕೆ ಅವರು ಈ ಮಾತು ಹೇಳಲಿಲ್ಲ ಎಂದು ಮರುಪ್ರಶ್ನೆ ಎಸೆದರು.

Leave a Reply

comments

Related Articles

error: