ಕರ್ನಾಟಕ

ಜನಾರ್ದನ ಪೂಜಾರಿ ಅವರನ್ನು ಕಾಂಗ್ರೆಸ್ ಮತ್ತೆ ಅವಮಾನಿಸಿದೆ: ಹರಿಕೃಷ್ಣ ಬಂಟ್ವಾಳ್ ಆರೋಪ

ಮಂಗಳೂರು (ಮೇ 8): ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರಾಗಿರುವ ಬಿ.ಜನಾರ್ದನ ಪೂಜಾರಿ ಅವರ ಕುರಿತು ಸುಳ್ಳು ಸುದ್ದಿ ಹರಡಿಸಿ ಕಾಂಗ್ರೆಸ್ ಮತ್ತೊಮ್ಮೆ ಅವರನ್ನು ಅವಮಾನಿಸಿದೆ ಎಂದು ಬಿಜೆಪಿ ಮುಖಂಡ ಹರಿಕೃಷ್ಣ ಬಂಟ್ವಾಳ ಕಿಡಿಕಾರಿದ್ದಾರೆ.

ಮಂಗಳೂರಿನಲ್ಲಿ ಇಂದು ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಚುನಾವಣೆ ಸಂದರ್ಭದಲ್ಲಿ ಜನಾರ್ದನ ಪೂಜಾರಿ ಕುರಿತು ಸುಳ್ಳು ಸುದ್ದಿ ಹರಡಿಸುವುದು ಕಾಂಗ್ರೆಸಿಗರ ಷಡ್ಯಂತ್ರ ಎಂದು ಆರೋಪಿಸಿದ್ದಾರೆ. ಕನ್ನಡ ದಿನ ಪತ್ರಿಕೆಯೊಂದರಲ್ಲಿ ಸುಳ್ಳು ಸುದ್ದಿಯೊಂದನ್ನು ಪೂಜಾರಿ ಅವರ ಕುರಿತು ಸೃಷ್ಠಿಸಲಾಗಿದ್ದು, ‘ಬಿಜೆಪಿಯನ್ನು ಸೋಲಿಸಲು ಕರೆ ಕೊಟ್ಟ ಪೂಜಾರಿ’ ಎಂಬ ಹೆಡ್ ಲೈನ್ ನೊಂದಿಗೆ ನವರಾತ್ರಿ ಸಂದರ್ಭದಲ್ಲಿ ತೆಗೆದ ಪೋಟೋ ಒಂದನ್ನು ಪ್ರಕಟಿಸಿ ಸಾಮಾಜಿಕ ಜಾಲತಾಣದಲ್ಲಿ ಹರಿ ಬಿಡಲಾಗಿದೆ.

ಬಿಜೆಪಿಯನ್ನು ಸೋಲಿಸುವುದೇ ನನ್ನ ಜೀವನದ ಕೊನೆಯ ಆಸೆ ಎಂದ ಬಿಲ್ಲವ ನಾಯಕ ಎಂದು ಪ್ರಕಟಿಸಲಾಗಿದೆ. ಬಿಜೆಪಿಯನ್ನು ಸೋಲಿಸಿ ಎಂದು ಬಿಲ್ಲವರಿಗೆ ಪೂಜಾರಿ ಕರೆ ನೀಡಿದ್ದಾರೆ ಎಂದು ಪ್ರಕಟಿಸಿ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಡಲಾಗಿದೆ ಎಂದು ಅವರು ಆರೋಪಿಸಿದರು.

ಪೂಜಾರಿ ಅವರ ಬಗೆಗಿನ ಈ ಅಪಪ್ರಚಾರದ ಹಿಂದೆ ರಮಾನಾಥ ರೈ ಕೈವಾಡವಿದೆ ಎಂದು ಅವರು ಆರೋಪಿಸಿದರು. ಇದಲ್ಲದೇ ಸಂಸದ ನಳಿನ್ ಕುಮಾರ್ ಕಟೀಲ್ ಬಗ್ಗೆಯೂ ಸುಳ್ಳು ಸುದ್ದಿಯನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯ ಬಿಡಲಾಗಿದೆ. ಪೂಜಾರಿ ಅವರಿಗೆ ಸಂಸದ ನಳಿನ್ ಕುಮಾರ್ ಕಟೀಲ್ ನೀಡಿದಷ್ಟು ಗೌರವ , ಸಚಿವ ರಮಾನಾಥ ರೈ ತಮ್ಮ ಜನ್ಮದಲ್ಲಿ ಪೂಜಾರಿ ಅವರಿಗೆ ನೀಡಿಲ್ಲ ಎಂದು ಕಿಡಿಕಾರಿದರು. (ಎನ್.ಬಿ)

Leave a Reply

comments

Related Articles

error: