ದೇಶಪ್ರಮುಖ ಸುದ್ದಿವಿದೇಶ

ಅಮೃತಸರದಲ್ಲಿ ಹಾರ್ಟ್‍ ಆಫ್‍ ಏಷಿಯಾ ಸಮ್ಮೇಳನ: ಭಾರತ-ಪಾಕ್ ನಾಯಕರ ಮಾತುಕತೆಯತ್ತ ಎಲ್ಲರ ಚಿತ್ತ

ಅಮೃತಸರ: ಸಿಖ್ಖರ ಪವಿತ್ರ ನಗರ ಅಮೃತಸರ ನಗರದಲ್ಲಿ ಎರಡು ದಿನಗಳ ಕಾಲ ಹಾರ್ಟ್‍ ಆಫ್‍ ಏಷಿಯಾ ಸಮ್ಮೇಳನ ನಡೆಯುತ್ತಿದ್ದು, ಪಾಕಿಸ್ಥಾನದ ಗಡಿಯಂಚಿನಲ್ಲಿರುವ ಈ ನಗರಕ್ಕೆ ಏಷಿಯಾದ ನಾಯಕರು ಆಗಮಿಸಿದ್ದಾರೆ.

ಪ್ರಧಾನ ಮಂತ್ರಿ ನರೇಂದ್ರ ಮೋದಿ, ಆಫ್ಘಾನಿಸ್ತಾನ ಅಧ್ಯಕ್ಷ ಅಶ್ರಫ್‍ ಘನಿ ಅವರು ಜಂಟಿಯಾಗಿ ಸಮ್ಮೇಳನವನ್ನು ಉದ್ಘಾಟಿಸಲಿದ್ದಾರೆ. ಪಾಕಿಸ್ತಾನ ವಿದೇಶಾಂಗ ಸಚಿವ ಸರ್ತಾಜ್‍ ಅಜೀಜ್‍ ಅವರು ಕೂಡ ಸಮ್ಮೇಳನದಲ್ಲಿ ಭಾಗವಹಿಸುತ್ತಿದ್ದಾರೆ.

ಏಷ್ಯಾದ ರಾಷ್ಟ್ರಗಳು ಪರಸ್ಪರ ವ್ಯಾಪಾರ, ಹಣಕಾಸು ಹಾಗೂ ಭದ್ರತೆ ಕುರಿತು ಚರ್ಚಿಸಲು ನಡೆಯುವ ಈ ಸಮ್ಮೇಳನವು ಮಹತ್ವ ಪಡೆದುಕೊಳ್ಳುತ್ತದೆ. ಒಟ್ಟು 40 ದೇಶಗಳ ಪ್ರತಿನಿಧಿಗಳು ಸಮ್ಮೇಳನದಲ್ಲಿ ಭಾಗವಹಿಸುತ್ತಿದ್ದಾರೆ.

ತಾಲಿಬಾನ್ ಉಗ್ರರ ಉಪಟಳದಿಂದ ನಲುಗುತ್ತಿರುವ ಅಫ್ಘಾನಿಸ್ತಾನಕ್ಕೆ ಧೈರ್ಯ ತುಂಬುವುದು, ಭಯೋತ್ಪಾದನೆ ಕಡಿವಾಣಕ್ಕೆ ಹಾಕುವುದು, ದಕ್ಷಿಣ ಮತ್ತು ಕೇಂದ್ರ ಏಷಿಯಾ ರಾಷ್ಟ್ರಗಳಿಗೆ ಅಫ್ಘಾನಿಸ್ತಾನವನ್ನು ಸಂಪರ್ಕಿಸುವುದು, ತಾಪಿ- TAPI (ತುರ್ಕಮೆನಿಸ್ತಾನ್-ಅಫ್ಘಾನಿಸ್ತಾನ-ಪಾಕಿಸ್ತಾನ-ಭಾರತ) ಅನಿಲ ಪೈಪ್’ಲೈನ್ ಯೋಜನೆ ಜಾರಿಗೊಳಿಸಲು ಪ್ರಯತ್ನಿಸುವುದು ಈ ಬಾರಿಯ ಸಮ್ಮೇಳನದ ಪ್ರಮುಖ ಆಶಯವಾಗಿದೆ. ಭಾರತೀಯ ವಿದೇಶಾಂಗ ಸಚಿವೆ ಸುಷ್ಮಾ ಸರೋಜ್ ಅವರು ಅನಾರೋಗ್ಯಕ್ಕೆ ಈಡಾಗಿರುವ ಹಿನ್ನೆಲೆಯಲ್ಲಿ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು ಭಾಗಿಯಾಗುತ್ತಿದ್ದಾರೆ.

ಸಮ್ಮೇಳನಕ್ಕೆ ಒಂದು ದಿನ ಮುನ್ನವೇ ಭಾರತಕ್ಕೆ ಆಗಮಿಸಿರುವ ಪಾಕ್ ವಿದೇಶಾಂಗ ಸಲಹೆಗಾರ ಸರ್ತಾಜ್ ಅಜೀಜ್ ಅವರು ಮೂತ್ರಪಿಂಡ ವೈಫಲ್ಯದಿಂದ ಆಸ್ಪತ್ರೆಗೆ ದಾಖಲಾಗಿರುವ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಆರೋಗ್ಯ ಅವರ ವಿಚಾರಿಸಿ ಶೀಘ್ರ ಗುಣಮುಖರಾಗುವಂತೆ ಹಾರೈಸಿದದ್ದಾರೆ. ಅಲ್ಲದೆ ಸಭೆಯಲ್ಲಿ ನಗ್ರೋಟದಲ್ಲಿ ಸೇನಾ ಶಿಬಿರದ ಮೇಲಿನ ದಾಳಿ, ಗಡಿಯುದ್ದದ ಬೆಳವಣೆಗೆಗಳ ಬಗ್ಗೆ ಭಾರತ-ಪಾಕ್ ಮಧ್ಯೆ ದ್ವಿಪಕ್ಷೀಯ ಮಾತುಕತೆಗಳು ನಡೆಯುವ ಸಾಧ್ಯತೆಗಳಿವೆ.

ಪಾಕಿಸ್ತಾನ, ಕಿರ್ಗಿಸ್ತಾನ, ಇರಾನ್, ಆಫ್ಘಾನಿಸ್ತಾನ ಮತ್ತು ಸ್ಲೊವಾಕಿಯಾ ದೇಶಗಳ ವಿದೇಶಾಂಗ ಸಚಿವರುಗಳು ಪ್ರಧಾನಿ ಮೋದಿಯವರನ್ನು ಭೇಟಿ ಮಾಡಿ ಈಗಾಗಲೇ ಚರ್ಚಿಸಿದ್ದಾರೆ. ಈ ವೇಳೆ ಪ್ರಧಾನಿ ಮೋದಿಯವರು ಭಯೋತ್ಪಾದನೆ ದಮನ ಕಾರ್ಯದಲ್ಲಿ ಈ ರಾಷ್ಟ್ರಗಳ ಸಹಕಾರ ಕೋರಿದ್ದಾರೆ.

ಉಗ್ರ ಚಟುವಟಿಕೆಗಳ ಕೆಂದ್ರಸ್ಥಾನವೆಂದೇ ಕುಖ್ಯಾತಿ ಪಡೆದಿರುವ ಪಾಕಿಸ್ತಾನಕ್ಕೆ ಸಭೆಯಲ್ಲಿ ಭಾರತ ಮತ್ತು ಇತರೆ ರಾಷ್ಟ್ರಗಳು ಯಾವ ರೀತಿಯ ಒತ್ತಡ ಹೇರುತ್ತವೆ? ಭಾರತ-ಪಾಕ್ ವ್ಯಾಪಾರ ಮತ್ತು ಶಾಂತಿ ಪ್ರಕ್ರಿಯೆಗಳು ಪ್ರಗತಿ ಕಾಣುತ್ತವೆಯೇ ಎಂಬುದು ಸಮ್ಮೇಳನದ ಕುರಿತು ಭಾರತೀಯರಿಗಿರುವ ನಿರೀಕ್ಷೆ.

Leave a Reply

comments

Related Articles

error: