
ಬೆಳಗಾವಿ: ಗ್ರಾಮೀಣ ಭಾಗದಲ್ಲೂ ಮದ್ಯದಂಗಡಿ ತೆರಯಲಾಗುತ್ತದೆ ಎಂದು ಅಬಕಾರಿ ಸಚಿವ ಎಚ್.ವೈ. ಮೇಟಿ ಹೇಳಿದ್ದಾರೆ. ನೂತನ ಅಂಗಡಿಗಳನ್ನು ತೆರೆಯಲು ಸರ್ಕಾರದಿಂದ ಅನುಮತಿ ನೀಡುತ್ತಿರುವುದಾಗಿ ಅವರು ತಿಳಿಸಿದರು.
ವಿಧಾನ ಪರಿಷತ್ತಿನಲ್ಲಿ ಎಸ್. ನಾಗರಾಜ್ ಅವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಸರ್ಕಾರಿ ಮದ್ಯದಂಗಡಿಗಳಿಂದ ಮದ್ಯ ಖರೀದಿಸುವ ಮಧ್ಯವರ್ತಿಗಳು ಗ್ರಾಮೀಣ ಪ್ರದೇಶಗಳಲ್ಲಿ ನಿಗದಿತ ದರಕ್ಕಿಂತ ಹೆಚ್ಚಿನ ಬೆಲೆಯಲ್ಲಿ ಮಾರಾಟ ಮಾಡುತ್ತಿದ್ದಾರೆ. ಇದನ್ನು ತಪ್ಪಿಸಬೇಕಾದರೆ ಈ ಕ್ರಮ ಅಗತ್ಯವಾಗಿದೆ ಎಂದು ಹೇಳಿದ್ದಾರೆ.
ಅಕ್ರಮ ಕಲಬೆರಕೆ ಮದ್ಯ ಸೇವಿಸಿ ಸಾವಿಗೀಡಾದ ಯಾವುದೇ ಘಟನೆ ಕಳೆದ ವರ್ಷ ವರದಿಯಾಗಿಲ್ಲ. ಹುಣಸೂರು ಸಮೀಪ ಕೊಟ್ಟಿಗೆ ಕಾವಲ್ ಹಾಡಿಯಲ್ಲಿ ವಯಸ್ಸಾದ ಕಾರಣ ಹಾಗೂ ಕಾಯಿಲೆಯಿಂದ ಅಸುನೀಗಿದ್ದಾರೆಯೇ ಹೊರತು ಮದ್ಯ ಸೇವನೆಯಿಂದ ಯಾವುದೇ ಸಾವು ಸಂಭವಿಸಿಲ್ಲ ಎಂದು ಅವರು ತಿಳಿಸಿದರು.
ಮೈಸೂರು ಭಾಗದಲ್ಲಿ ನೋಡುವುದಾದರೆ ಮೈಸೂರು ಜಿಲ್ಲೆಯಲ್ಲಿ 2015 ರ ಸೆಪ್ಟೆಂಬರ್ನಿಂದ ಈವರೆಗೆ ಅಕ್ರಮ ಮದ್ಯ ಮಾರಾಟದ ಒಂಬತ್ತು ಪ್ರಕರಣಗಳನ್ನು ಪತ್ತೆ ಹಚ್ಚಲಾಗಿದೆ. ಚಾಮರಾಜನಗರ ಜಿಲ್ಲೆಯಲ್ಲಿ ಜುಲೈನಿಂದ ಇಲ್ಲಿಯವರೆಗೆ 23 ಪ್ರಕರಣಗಳು ಬೆಳಕಿಗೆ ಬಂದಿವೆ ಎಂದು ಎಂದು ಸಚಿವರು ತಿಳಿಸಿದ್ದಾರೆ.