ಕರ್ನಾಟಕ

ಸಾಮರಸ್ಯ ಕದಡುವುದೇ ರಾಷ್ಟ್ರೀಯ ಪಕ್ಷಗಳ ಕೆಲಸ : ಎ.ಎಂ.ಫಾರೂಖ್ ಆರೋಪ

ರಾಜ್ಯ(ಮಡಿಕೇರಿ) ಮೇ 10 :- ಮತಗಳಿಕೆಗಾಗಿ ಧರ್ಮ ಜಾತಿಗಳ ಮಧ್ಯೆ ಗಲಭೆ ಹುಟ್ಟಿಸಿ, ಬಹುಸಂಖ್ಯಾತ- ಅಲ್ಪಸಂಖ್ಯಾತರ ನಡುವಿನ ಸಾಮರಸ್ಯ ಕದಡುವುದೇ  ರಾಷ್ಟ್ರೀಯ ಪಕ್ಷಗಳ ಬಹುಮುಖ್ಯ ಕೆಲಸವಾಗಿದೆ ಎಂದು ಜಾತ್ಯಾತೀತ ಜನತಾದಳದ ಮಹಾ ಪ್ರಧಾನ ಕಾರ್ಯದರ್ಶಿ ಎ.ಎಂ.ಫಾರೂಖ್ ಆರೋಪಿಸಿದ್ದಾರೆ.

ವೀರಾಜಪೇಟೆಯ ಸುಣ್ಣದ ಬೀದಿಯಲ್ಲಿರುವ ಡಿ.ಹೆಚ್.ಎಸ್. ವಾಣಿಜ್ಯ ಸಂಕೀರ್ಣದ ಸಭಾಂಗಣದಲ್ಲಿ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಮೇರಿಯಂಡ ಸಂಕೇತ್ ಪೂವಯ್ಯ ಅವರ ಪರ ನಡೆದ ಪ್ರಚಾರ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು.  ಕಾಂಗ್ರೆಸ್ ಪಕ್ಷ ಎ  ಮತ್ತು ಬಿ ಎಂದು ವಿಂಗಡಣೆಯಾಗಿದೆ. ಬಿ ಟೀಮ್‍ನಲ್ಲಿ ಮಾತೃ ಪಕ್ಷದಿಂದ ಉಚ್ಛಾಟನೆಯಾಗಿ ಕಾಂಗ್ರೆಸ್‍ನಲ್ಲಿರುವ ಕೆಲವರು  ಅಲ್ಪಸಂಖ್ಯಾತರನ್ನು ಓಲೈಕೆ ಮಾಡುವ ಸಲುವಾಗಿ ಅಪಪ್ರಚಾರ ಮಾಡುತ್ತಿರುವುದಾಗಿ ಆರೋಪಿಸಿದರು. ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ನೇತೃತ್ವದ ಸರ್ಕಾರ  ಆಡಳಿತಕ್ಕೆ ಬಂದಲ್ಲಿ, ಅಲ್ಪಸಂಖ್ಯಾತರ ಏಳಿಗೆಗಾಗಿ ಸಾಚಾರ ವರದಿ, ಅಲಿಘಡ್ ವಿಶ್ವವಿದ್ಯಾನಿಲಯದ ಮಾದರಿಯಲ್ಲಿ ವಿವಿ ಸ್ಥಾಪನೆ, ಬಡ್ಡಿ ರಹಿತ ಸಾಲ ಮತ್ತು ಜನಾಂಗದ ಬಡ ಜನತೆಯನ್ನು ಗುರುತಿಸಿ, ಆರ್ಥಿಕವಾಗಿ ಅವರನ್ನು ಸಬಲರನ್ನಾಗಿಸುವುದು  ಸೇರಿದಂತೆ ಹತ್ತು ಹಲವು ಯೋಜನೆಗಳನ್ನು ಜಾರಿಗೆ ತರಲು ಉದ್ದೇಶಿಸಲಾಗಿದೆ. ಕೊಡಗಿನ ಕಾಫಿ ಬೆಳೆಗಾರರ ಸಮಸ್ಯೆಗಳನ್ನು ಬಗೆಹರಿಸಲು ವಿಧಾನ ಸೌಧದಲ್ಲಿ ದಿನ ನಿಗದಿ ಮತ್ತು ಜಿಲ್ಲೆಯ ಸರ್ವಂಗೀಣ ಅಭಿವೃದ್ಧಿಗೆ ಯೋಜನೆಗಳನ್ನು ಜಾರಿ ಮಾಡಲಾಗುತ್ತದೆಂದರು.

ರಾಜ್ಯದಲ್ಲಿ ಜಯಂತಿ ಆಚರಣೆಯಿಂದ ಕೋಮು ಗಲಭೆಗಳನ್ನು ಸೃಷ್ಟಿಸಿ ಅಲ್ಪಸಂಖ್ಯಾತರನ್ನು ಬಲಿಪಶುಗಳನ್ನಾಗಿ ಮಾಡಲಾಗಿದೆಯೆಂದು  ಆರೋಪಿಸಿದ ಫಾರೂಖ್, ಆರ್‍ಎಸ್‍ಎಸ್ ಇದ್ದಲ್ಲಿ ಮಾತ್ರ ಎರಡು ರಾಷ್ಟ್ರೀಯ ಪಕ್ಷಗಳಿಗೆ ಲಾಭವೆಂದು ವ್ಯಂಗ್ಯವಾಡಿ, ಗಲಭೆಗಳು ಸೃಷ್ಟಿಯಾದರಷ್ಟೆ  ರಾಷ್ಟ್ರೀಯ ಪಕ್ಷಗಳಿಗೆ ಮುಂದೆ ಬರಲು ಸಾಧ್ಯ. ಆದರೆ, ಜಾತ್ಯಾತೀತ ನಿಲುವು ಹೊಂದಿರುವ ಪಕ್ಷ ಮಾತ್ರ ಶಾಂತಿಗಾಗಿ  ಆಗ್ರಹಿಸುತ್ತದೆ. ಇದನ್ನು ಅಲ್ಪಸಂಖ್ಯಾತರು ಮತ್ತು ಬಹುಸಂಖ್ಯಾತರು ಅರ್ಥಮಾಡಿಕೊಂಡು ಜೆಡಿಎಸ್ ಅಭ್ಯರ್ಥಿ ಸಂಕೇತ್ ಪೂವಯ್ಯ ಅವರನ್ನು  ಗೆಲ್ಲಿಸುವಂತೆ ಕರೆ ನೀಡಿದರು.

ಅಭ್ಯರ್ಥಿ ಸಂಕೇತ್ ಪೂವಯ್ಯ ಮಾತನಾಡಿ,  ಕೊಡಗಿನಲ್ಲಿ ರಾಷ್ಟ್ರೀಯ ಪಕ್ಷಗಳ ದಬ್ಬಾಳಿಕೆಯನ್ನು ಕೊನೆಗಾಣಿಸಲು ಕೊಡಗಿನ ಜನತೆ ಜಾತ್ಯಾತೀತ ಪ್ರಾದೇಶಿಕ ಪಕ್ಷದತ್ತ ಒಲವು ತೋರುತ್ತಿದ್ದಾರೆಂದರು.

ವೇದಿಕೆಯಲ್ಲಿ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಮಾಂಗೇರ ಪದ್ಮಿನಿ ಪೊನ್ನಪ್ಪ, ಹೊಸೂರು ಸತೀಶ್ ಜೊಯಪ್ಪ, ಜಿಲ್ಲಾಧ್ಯಕ್ಷ ಇಸಾಖ್ ಖಾನ್ ಮೊದಲಾದವರಿದ್ದರು. (ಕೆಸಿಐ,ಎಸ್.ಎಚ್)

Leave a Reply

comments

Related Articles

error: