
ದೇಶಪ್ರಮುಖ ಸುದ್ದಿವಿದೇಶ
ಮುಷರಫ್ ಉವಾಚ: ಮೋದಿ ಯುದ್ಧ ಪ್ರಚೋದಕ, ಹಫೀಜ್ ಸಯೀದ್ ಉಗ್ರನಲ್ಲ
ಇಸ್ಲಾಮಾಬಾದ್: ಲಷ್ಕರ್-ಎ-ತೊಯ್ಬಾ ಸಂಘಟನೆ ಪಾಕಿಸ್ತಾನದ ಒಂದು ಉತ್ತಮ ಸರ್ಕಾರೇತರ ಸಂಸ್ಥೆಯಾಗಿದ್ದು, ಭಾರತೀಯ ಸೇನಾಪಡೆಯಿಂದ ಹತ್ಯೆಗೀಡಾದ ಬುರ್ಹಾನ್ ವಾನಿ ವೀರಯೋಧ ಎಂದು ಪಾಕಿಸ್ತಾನದ ಮಾಜಿ ಅಧ್ಯಕ್ಷ ಪರ್ವೇಜ್ ಮುಷರಫ್ ಹಾಡಿಹೊಗಳಿದ್ದಾರೆ. ಇದರ ಜೊತೆಗೆ ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಓರ್ವ ‘ಯುದ್ಧ ಪ್ರಚೋದಕ’ ಎಂದು ಟೀಕಿಸಿದ್ದಾರೆ.
ಬುರ್ಹಾನ್ ವಾನಿ ಮತ್ತು ಹಫೀಜ್ ಸಯೀದ್ ನಡುವಿನ ಆಡಿಯೊ ಸಂಭಾಷಣೆ ಬಗ್ಗೆ ಶುಕ್ರವಾರ ಪ್ರತಿಕ್ರಿಯಿಸಿದ ಮುಷರಫ್, ಅವರಿಬ್ಬರೂ ಸಂಪರ್ಕದಲ್ಲಿದ್ದ ವಿಷಯ ಆಶ್ಚರ್ಯಪಡುವಂಥ ವಿಷಯವಲ್ಲ. ಹಫೀಜ್ ಸಯೀದ್ ವೃತ್ತಿಯಲ್ಲಿ ಎಂಜಿನಿಯರ್ ಆಗಿದ್ದು, ರಾಷ್ಟ್ರದಲ್ಲಿ ಪ್ರವಾಹ ಉಂಟಾದಾಗ ಅವರ ನೇತೃತ್ವದ ಲಷ್ಕರ್-ಇ-ತೈಯ್ಬಾ ತ್ವರಿತ ರಕ್ಷಣಾ ಕಾರ್ಯಾಚರಣೆ ಕೈಗೊಂಡಿದೆ. ಹೀಗಾಗಿ ಅದು ಪಾಕ್ನ ಉತ್ತಮ ಎನ್’ಜಿಒ ಎಂದಿದ್ದಾರೆ ಎಂದು ವರದಿಯಾಗಿದೆ.
ಬುರ್ಹಾನ್ ವಾನಿ ಕುಟುಂಬವನ್ನು ಭಾರತದ ಮಿಲಿಟರಿ ಹಿಂಸಿಸಿದ್ದೇ ಆತ ಆಯುಧ ಹಿಡಿಯಲು ಪ್ರೇರೇಪಣೆ. ಹಫೀಜ್ ಭಯೋತ್ಪಾದಕ ಎಂದರೆ ನಾನು ಒಪ್ಪುವುದಿಲ್ಲ. ನಾನು ವಕೀಲನಾಗಿದ್ದರೆ ಹಫೀಜ್ ಪರ ವಕಾಲತ್ತು ಮಾಡುತ್ತಿದ್ದೆ. ದೇಶದ ಅಧ್ಯಕ್ಷನಾಗಿದ್ದರೆ ಆತನ ಪರ ವಿಶ್ವಸಂಸ್ಥೆಯಲ್ಲೂ ಧ್ವನಿಯೆತ್ತುತ್ತಿದ್ದೆ ಎಂದೂ ಅವರು ಹೇಳಿದ್ದಾರೆ.
ಭಾರತೀಯ ಸೇನೆಯ ವಿರುದ್ಧ ಜಿಹಾದ್ ನಡೆಸುವ ಕುರಿತು ಹಫೀಜ್ ಮತ್ತು ಬುರ್ಹಾನ್ ವಾನಿ ಫೋನ್ ಮೂಲಕ ಮಾತನಾಡಿದ ಸಂಭಾಷಣೆಯ ಧ್ವನಿಸಂಗ್ರಹ ಇತ್ತೀಚೆಗೆ ಬಿಡುಗಡೆಯಾಗಿ ಸಾಕಷ್ಟು ಸುದ್ದಿಯಾಗಿತ್ತು.