ದೇಶಪ್ರಮುಖ ಸುದ್ದಿ

ಪೆಟ್ರೋಲಿಯಂ ಕೋಕ್ ನಿಷೇಧ ಕುರಿತು ಜೂನ್ 30ರೊಳಗೆ ನಿರ್ಧರಿಸಿಸಲು ಸೂಚನೆ

ನವದೆಹಲಿ (ಮೇ 11): ಪೆಟ್ರೋಲಿಯಂ ಕೋಕ್‌ ಆಮದು ನಿಷೇಧಿಸುವ ಕುರಿತು ಜೂನ್ 30ರೊಳಗೆ ನಿರ್ಣಯ ಕೈಗೊಳ್ಳುವಂತೆ ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಆದೇಶಿಸಿದೆ.

ಕಲ್ಲಿದ್ದಲು ಬಳಸುವಲ್ಲಿ ಪರ್ಯಾಯವಾಗಿ ಬಳಕೆಯಾಗುವ ಈ ಪೆಟ್ರೋಲಿಯಂ ಕೋಕ್‌ನಿಂದ ಅತಿಯಾದ ಮಾಲಿನ್ಯವಾಗುತ್ತದೆ. ದೆಹಲಿ ಮತ್ತು ರಾಷ್ಟ್ರ ರಾಜಧಾನಿ ವಲಯದಲ್ಲಿ (ಎನ್‌ಸಿಆರ್) ಇದರ ಬಳಕೆ ಮತ್ತು ಮಾರಾಟವನ್ನು ಸುಪ್ರೀಂ ಕೋರ್ಟ್ ಕಳೆದ ಅಕ್ಟೋಬರ್‌ನಲ್ಲಿ ನಿಷೇಧಿಸಿದೆ.

ಪೆಟ್ರೋಲಿಯಂ ಕೋಕ್ ಬಳಕೆಗೆ ದೇಶಾದ್ಯಂತ ನಿಷೇಧಿಸುವುವ ಕುರಿತು ಚಿಂತನೆ ನಡೆಸಲಾಗಿದೆ ಎಂದು ಕೇಂದ್ರ ಸರ್ಕಾರವು ಏಪ್ರಿಲ್‌ನಲ್ಲಿ ಸುಪ್ರೀಂ ಕೋರ್ಟ್’ಗೆ ತಿಳಿಸಿತ್ತು.

ದೆಹಲಿಯಲ್ಲಿ ವಾಯುಮಾಲಿನ್ಯದಿಂದ ಜನರು ತೀವ್ರ ತೊಂದರೆ ಎದುರಿಸುತ್ತಿದ್ದಾರೆ. ರಾಷ್ಟ್ರೀಯ ವಾಯು ಶುದ್ಧೀಕರಣ ಕಾರ್ಯಕ್ರಮವನ್ನು ಮೊದಲು ದೆಹಲಿಯಲ್ಲಿ ಅನುಷ್ಠಾನಕ್ಕೆ ತರುವ ಕುರಿತೂ ಸರ್ಕಾರ ಪರಿಶೀಲಿಸಬೇಕು ಎಂದು ನ್ಯಾಯಮೂರ್ತಿಗಳಾದ ಮದನ್ ಬಿ.ಲೋಕೂರ್ ಹಾಗೂ ದೀಪಕ್ ಗುಪ್ತಾ ಅವರನ್ನೊಳಗೊಂಡ ನ್ಯಾಯಪೀಠ ಸೂಚನೆ ನೀಡಿದೆ.

ನೀವು ಸಾಕಷ್ಟು ಯೋಜನೆಗಳನ್ನು ಹೊಂದಿದ್ದೀರಿ. ದೆಹಲಿಯಲ್ಲಿಯೇ ನಿಮಗೆ ಯೋಜನೆ ಅನುಷ್ಠಾನಗೊಳಿಸಲಾಗುತ್ತಿಲ್ಲ. ಬದಲಿಗೆ ಇಡೀ ದೇಶದ ಕುರಿತು ಮಾತನಾಡುತ್ತೀರಿ ಎಂದು ಪರಿಸರ ಸಚಿವಾಲಯ, ಅರಣ್ಯ ಮತ್ತು ಹವಾಮಾನ ಬದಲಾವಣೆ ‍ಸಚಿವಾಲಯಗಳ ಪರವಾಗಿ ವಾದ ಮಂಡಿಸುತ್ತಿದ್ದ ಹೆಚ್ಚುವರಿ ಸಾಲಿಸಿಟರ್ ಜನರಲ್ ಎ.ಎನ್‌.ಎಸ್‌. ನಾಡಕರ್ಣಿ ಅವರಿಗೆ ಪೀಠ ಹೇಳಿದೆ.

ದೆಹಲಿ-ಎನ್‌ಸಿಆರ್ ವಲಯದಲ್ಲಿ ವಾಯುಮಾಲಿನ್ಯ ನಿಯಂತ್ರಿಸಲು ಕೈಗೊಳ್ಳಲಾದ ಸಮಗ್ರ ಕ್ರಿಯಾ ಯೋಜನೆಯ ಕೆಲವು ಅಂಶಗಳನ್ನು ಈಗಾಗಲೇ ಅನುಷ್ಠಾನಗೊಳಿಸಲಾಗಿದೆ. ಸಮಗ್ರ ವರದಿಯನ್ನು ಇನ್ನು ನಾಲ್ಕು ವಾರಗಳ ಒಳಗಾಗಿ ನ್ಯಾಯಪೀಠಕ್ಕೆ ಸಲ್ಲಿಸಲಾಗುವುದು ಎಂದು ನಾಡಕರ್ಣಿ ತಿಳಿಸಿದ್ದಾರೆ. (ಎನ್.ಬಿ)

Leave a Reply

comments

Related Articles

error: