ಮೈಸೂರು

ವಚನ ದುಂಧುಬಿ ಲೋಕಾರ್ಪಣೆ : ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪ್ರದಾನ

rotaryಮೈಸೂರು ಸಾಹಿತ್ಯ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನದ ವತಿಯಿಂದ ಭಾನುವಾರ ಐಡಿಯಲ್ ಜಾವಾ ರೋಟರಿ ಶಾಲೆಯಲ್ಲಿ 61 ನೇ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಕವಿ,ಕಾದಂಬರಿಕಾರ ಎಂ.ಬಿ.ಸಂತೋಷ್ ಅವರ ‘ವಚನ ದುಂಧುಬಿ’ ಕೃತಿ ಲೋಕಾರ್ಪಣೆ, ‘ಹರಟೆಕಟ್ಟೆ’ ಕಾರ್ಯಕ್ರಮ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು.

ಮಾನಸಗಂಗೋತ್ರಿಯ ಮನೋವಿಜ್ಞಾನ ವಿಭಾಗದ ಪ್ರಾಧ್ಯಾಪಕ ಡಾ.ಜಿ.ವೆಂಕಟೇಶಕುಮಾರ್ ಕಾರ್ಯಕ್ರಮವನ್ನು ಉದ್ಘಾಟಿಸಿ, ಕೃತಿ ಲೋಕಾರ್ಪಣೆಗೊಳಿಸಿದರು. ಬಳಿಕ ಮಾತನಾಡಿದ ಅವರು, ಈ ಕೃತಿಯಲ್ಲಿನ ವಚನಗಳು ಆಧುನಿಕ ಸಮಾಜಕ್ಕೆ ಪ್ರಸ್ತುತವಾಗಿವೆ. ಚಿಕ್ಕ ಮಕ್ಕಳಿಂದ ಹಿಡಿದು ವೃದ್ಧರು ಸಹ ಓದಿ ಅರ್ಥಮಾಡಿಕೊಳ್ಳಬಹುದಾದ ಸರಳ ಆಡುಭಾಷೆ ಈ ವಚನಗಳಲ್ಲಿವೆ. ಇಂದಿನ ಪೀಳಿಗೆಯ ಜನರು ಈ ವಚನಗಳನ್ನು ಓದಿದರೆ ವೃದ್ಧಾಶ್ರಮಗಳ ಸಂಖ್ಯೆ ಕಡಿಯಾಗಿ, ಪ್ರೀತಿ – ಸಂಬಂಧಗಳು ಹೆಚ್ಚಾಗುತ್ತವೆ ಎಂದರು. ಅಂತಹ ಪರಿಣಾಮಕಾರಿ ಮನಮುಟ್ಟುವಂತಹ ವಚನಗಳನ್ನು ರಚಿಸಿದ್ದಾರೆ. ಸಮಾಜದ ಓರೆ-ಕೋರೆಗಳನ್ನು ತಿದ್ದುವ ಕಾರ್ಯ ಈ ಕೃತಿಯಲ್ಲಿ ನಡೆದಿದೆ. ಯಾರೇ ಆಗಲಿ ಈ ಕೃತಿಯನ್ನು ಒಂದು ಬಾರಿ ಓದಿದರೆ ಆಪ್ತ ಸಲಹೆಗಾರರಾಗುವುದರಲ್ಲಿ ಸಂಶಯವೇ ಇಲ್ಲ ಎಂದು ಕೃತಿ ಕುರಿತಾಗಿ ಹೇಳಿದರು.

ಮೈಸೂರು ಸಾಹಿತ್ಯ ವೇದಿಕೆಯ ಅಧ್ಯಕ್ಷೆ ಡಾ.ಸಿ.ತೇಜೋವತಿ ಸಂತೋಷ್ ಅವರ ಆಧುನಿಕ ವಚನಗಳ ಸಂಕಲನವನ್ನು ಕುರಿತು ಮಾತನಾಡಿದರು. ನನ್ನನ್ನು ತಲೆ ತಗ್ಗಿಸಿ ನೋಡು, ನಾನು ನಿನ್ನನ್ನು ತಲೆ ಎತ್ತುವಂತೆ ಮಾಡುತ್ತೇನೆ ಎಂದು ಪುಸ್ತಕ ಹೇಳುತ್ತದೆ. ಆದರೆ ಸಾಮಾಜಿಕ ಜಾಲತಾಣಗಳು ಎಂದಿಗೂ ತಲೆ ಎತ್ತದಂತೆ ಮಾಡುತ್ತವೆ. ಆದ್ದರಿಂದ ವಿದ್ಯಾರ್ಥಿಗಳು ಈ ವಾಟ್ಸಾಪ್ ಲೋಕದಿಂದ ಹೊರಬಂದು ಪುಸ್ತಕಗಳನ್ನು ಹೆಚ್ಚು ಓದುವಂತಾಗಬೇಕು ಎಂದು ಕಿವಿಮಾತು ಹೇಳಿದರು.

ವಚನಗಳು ಪದ್ಯದಷ್ಟು ಬಿಗಿಯಾಗಿಲ್ಲ, ಗದ್ಯದಷ್ಟು ಸಡಿಲವೂ ಇಲ್ಲ. ಕನ್ನಡದ ಒಂದೊಂದು ಅಕ್ಷರಕ್ಕೂ ಕಾವ್ಯವಾಗುವ ಶಕ್ತಿಯಿದೆ.  ಸ್ವಯಂ ಕನ್ನಡದ ಆಸ್ತಿ ಎಂದರೆ ವಚನಗಳು. ಆಡುಭಾಷೆಯಲ್ಲಿ ರಚಿತವಾಗಿ ಜನಸಾಮಾನ್ಯರಿಗೆ ಬಹುಬೇಗ ತಲುಪುತ್ತವೆ. ಲೋಕದ ಅಂಕು-ಡೊಂಕುಗಳನ್ನು ತಿದ್ದುವ ವ್ಯಂಗ್ಯ ರೀತಿಯ ವಚನಗಳನ್ನು ಸಂತೋಷ್ ಅವರ ಕೃತಿಯಲ್ಲಿ ಕಾಣಬಹುದಾಗಿದೆ. ಇವರ ಒಂದೊಂದು ವಚನವು ಒಬ್ಬೊಬ್ಬ ಕವಿಯನ್ನು ನೆನಪಿಸುತ್ತವೆ. ಗಂಡ-ಹೆಂಡತಿ, ತಾಯಿ-ಮಗು, ತಂದೆ-ತಾಯಿ, ಸಂಸಾರ ಹೀಗಿ ಅನೇಕ ಭಾವನಾತ್ಮಕ ಸಂಬಂಧಗಳ  ಕುರಿತಾಗಿ ವಚನ ರಚಿಸಿದ್ದಾರೆ.  ಸರ್ವಜ್ಞ, ಬಸವಣ್ಣ, ಅಕ್ಕಮಹಾದೇವಿ ಅವರ ವಚನಗಳು ಇಂದಿಗೂ ಹಸಿರಾಗಿ ಉಳಿದಿವೆ. ದಾಸ ಪಂಥದ ಕನಕದಾಸ ಮತ್ತು ಪುರಂದರದಾಸರು ಕನ್ನಡದ ಅಶ್ವಿನಿ ದೇವತೆಗಳಾಗಿದ್ದಾರೆ ಎಂದು ಹೇಳಿದರು.

ನಮ್ಮ ಜೀವನದಲ್ಲಿ ತಾಯಿಗೆ ಹೆಚ್ಚಿನ ಸ್ಥಾನಮಾನ ನೀಡಬೇಕು. ಅವಳು ಕಾಶಿಯಷ್ಟೇ ಪವಿತ್ರಳಾದವಳು. ಅವರನ್ನು ಪೂಜಿಸಿ, ಆರಾಧಿಸಿ ಆದರೆ ಕಡೆಗಣಿಸಬೇಡಿ. ಗೆಲುವು ಪ್ರಿಯತಮೆಯಾದರೆ, ಸೋಲು ತಾಯಿ. ಸೋತರೂ ಸಹ ಗೆಲುವಿನೆಡೆಗೆ ಕರೆದೊಯ್ಯುವವಳು ತಾಯಿ. ಆದರೆ ಇಂದು ಮಾತೃಭಕ್ತಿ ಕಡಿಮೆಯಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಬಾಲಶ್ರೀ/ ಯುವಶ್ರೀ ಪ್ರಶಸ್ತಿ, ಸಾಧನಶ್ರೀ ಪ್ರಶಸ್ತಿ, ಯೋಗರತ್ನ ಪ್ರಶಸ್ತಿ, ಸಾಂಸ್ಕೃತಿಕ ಸೇವಾರತ್ನ ಪ್ರಶಸ್ತಿಗೆ ಭಾಜನರಾದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಮೈಸೂರು ಆಕಾಶವಾಣಿಯ ನಿವೃತ್ತ ಸಹಾಯಕ ನಿರ್ದೇಶಕ ಕರ್ನಾಟಕ ಕಲಾಶ್ರೀ ಜಿ.ರಾಜಲಕ್ಷ್ಮಿ ಶ್ರೀಧರ್ ಕೃತಿ ರಚನಕಾರ ಹಾಗೂ ಮೈಸೂರು ಸಾಹಿತ್ಯ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ ಎಂ.ಬಿ.ಸಂತೋಷ್, ಸಹಕಾರ್ಯದರ್ಶಿ ಎಂ.ಎನ್.ಜಯಂತಿ, ಎಂ.ಎಸ್.ಭಾರತಿ ಮತ್ತಿತರರು ಉಪಸ್ಥಿತರಿದ್ದರು.

Leave a Reply

comments

Related Articles

error: