ಕರ್ನಾಟಕಪ್ರಮುಖ ಸುದ್ದಿ

ಪ್ರಯಾಣಿಕರೇ ಎಚ್ಚರ: ಚುನಾವಣೆ ದಿನ ಬಸ್‌ ಸೇವೆಯಲ್ಲಿ ವ್ಯತ್ಯಯ ಸಂಭವ

ಬೆಂಗಳೂರು (ಮೇ 11): ವಿಧಾನಸಭಾ ಚುನಾವಣೆ ಕರ್ತವ್ಯಕ್ಕೆ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ – ಕೆಎಸ್‍ಆರ್‍ಟಿಸಿ ಬಸ್‍ಗಳನ್ನು ಬಳಸಿಕೊಳ್ಳುವುದರಿಂದ ಸಾರ್ವಜನಿಕ ಸಂಚಾರ ಸೇವೆಯಲ್ಲಿ ವ್ಯತ್ಯಯವಾಗುವ ಸಾಧ್ಯತೆ ಇದೆ.

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ – ಬಿಎಂಟಿಸಿಯಿಂದಲೇ 1,493 ಬಸ್‌ಗಳನ್ನು ಬಾಡಿಗೆ ಪಡೆದಿರುವ ಕಾರಣ ಮೇ 11 ಮತ್ತು 12ರಂದು ರಾಜಧಾನಿ ಬೆಂಗಳೂರಿನಲ್ಲೂ ಪ್ರಯಾಣಿಕರಿಗೆ ತೊಂದರೆಯಾಗುವ ಸಾಧ್ಯತೆ ಇದೆ.

ಕಡಿಮೆ ಆದಾಯವಿರುವ ಮತ್ತು ಪ್ರಯಾಣಿಕರ ದಟ್ಟಣೆ ಇಲ್ಲದಿರುವ ಮಾರ್ಗದ ಟ್ರಿಪ್‌ಗಳನ್ನು ಎರಡು ದಿನ ರದ್ದುಗೊಳಿಸಲು ನಿರ್ಧರಿಸಲಾಗಿದೆ. ಹೀಗಾಗಿ ಕೆಲ ಮಾರ್ಗಗಳಲ್ಲಿ ಬಸ್‌ಗಾಗಿ ಕಾಯುವ ಸ್ಥಿತಿ ಬರಲಿದೆ. ಪ್ರಸ್ತುತ ನಮ್ಮ ಮೆಟ್ರೋ ಮೊದಲನೇ ಹಂತದ ಹಲವು ಮೆಟ್ರೋ ನಿಲ್ದಾಣಗಳಲ್ಲಿ ನೂರಕ್ಕೂ ಅಧಿಕ ಕರ್ನಾಟಕ ರಾಜ್ಯ ಕೈಗಾರಿಕಾ ಭದ್ರತಾ ಪಡೆಯ ಸಶಸ್ತ್ರ ಸಿಬ್ಬಂದಿಯನ್ನು ಭದ್ರತೆಗಾಗಿ ನೇಮಿಸಲಾಗಿದೆ. ಈ ಸಿಬ್ಬಂದಿಯನ್ನೂ ಚುನಾವಣಾ ಭದ್ರತಾ ಕರ್ತವ್ಯಕ್ಕೆ ನಿಯೋಜಿಸಲಾಗಿದೆ.

ಹೀಗಾಗಿ ಮೇ 12ರಂದು ಮೆಟ್ರೋ ನಿಲ್ದಾಣಗಳಲ್ಲಿ ಭದ್ರತಾ ಸಿಬ್ಬಂದಿ ಸಂಖ್ಯೆಯೂ ಕಡಿಮೆ ಇರಲಿದೆ. ಖಾಸಗಿ ಭದ್ರತಾ ಸಿಬ್ಬಂದಿಯಷ್ಟೇ ಕಾರ್ಯನಿರ್ವಹಿಸುವುದರಿಂದ ನಿಲ್ದಾಣಗಳಲ್ಲಿ ಒಂದೆರೆಡು ಪ್ರವೇಶದ್ವಾರ ಮಾತ್ರ ತೆರೆದಿರುತ್ತದೆ. ಸೀಮಿತ ದ್ವಾರಗಳಲ್ಲಿ ಪ್ರಯಾಣಿಕರ ದಟ್ಟಣೆ ಹೆಚ್ಚಾಗುವ ಸಾಧ್ಯತೆ ಇದೆ. ಕರ್ನಾಟಕ ವಿಧಾನಸಭಾ ಚುನಾವಣೆಯು ಮೇ 12ರಂದು ಶನಿವಾರ ನಡೆಯಲಿದ್ದು, ಮೇ 15ರಂದು ಮಂಗಳವಾರ ಫಲಿತಾಂಶ ಹೊರಬೀಳಲಿದೆ. (ಎನ್.ಬಿ)

Leave a Reply

comments

Related Articles

error: