ಮೈಸೂರು

ಭಗವದ್ಗೀತೆ ಜೀವನದ ಹೋರಾಟವನ್ನು ಪ್ರತಿನಿಧಿಸುವ ಕೃತಿ : ಪ್ರೊ.ಪದ್ಮಾಶೇಖರ್

ಭಗವದ್ಗೀತೆ ಜೀವನದ ಹೋರಾಟವನ್ನು ಪ್ರತಿನಿಧಿಸುವ ಕೃತಿ ಎಂದು ಬೆಂಗಳೂರು ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಪದ್ಮಾಶೇಖರ್ ಬಣ್ಣಿಸಿದರು.

ಮೈಸೂರಿನ ಶ್ರೀಕಾಂತ ವಿದ್ಯಾಸಂಸ್ಥೆಗಳು, ಶ್ರೀ ಕೆ.ಎನ್.ವರದರಾಜ ಅಯ್ಯಂಗಾರ್ ಮೆಮೋರಿಯಲ್ ಟ್ರಸ್ಟ್ ವತಿಯಿಂದ  ಖಿಲ್ಲೆ ಮೊಹಲ್ಲಾದಲ್ಲಿರುವ ಶ್ರೀಕಾಂತ ವಿದ್ಯಾಸಂಸ್ಥೆಯಲ್ಲಿ ಭಾನುವಾರ ಏರ್ಪಡಿಸಿದ್ದ  ಜಿಲ್ಲಾ ಮಟ್ಟದ 50ನೆಯ ಗೀತಾ ಜಯಂತಿ ಕಾರ್ಯಕ್ರಮವನ್ನು ಪ್ರೊ.ಪದ್ಮಾಶೇಖರ್ ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರು, ಭಗವದ್ಗೀತೆ ಮನುಷ್ಯ ನಿಜವಾದ ಅರ್ಥದಲ್ಲಿ ಮನುಷ್ಯನಾಗುವುದು ಹೇಗೆ ಎನ್ನುವುದನ್ನು ತಿಳಿಸಿದೆ. ಅದರ ಆಶಯವನ್ನೇ ಬಸವಣ್ಣನವರು ಕಾಯಕವೇ ಕೈಲಾಸ ಎಂದು ಪ್ರತಿಪಾದಿಸಿದರು. ಜೀವನವು ಸರಾಗವಾಗಿ ಸಾಗುವುದಿಲ್ಲ. ಅದರಲ್ಲಿ ಹಲವು ಅಂಕುಡೊಂಕುಗಳಿರುತ್ತವೆ. ಅವೆಲ್ಲವನ್ನೂ ಭಗವದ್ಗೀತೆ ತಿಳಿಸಲಿದೆ ಎಂದರು. ಅದು ಕೇವಲ ಕೃತಿಯಲ್ಲ. ಸಮಾಜವನ್ನು ಪರಿಷ್ಕರಿಸಲು ಬಳಸುವ ಸಾಧನ. ನಾವು ಹಲವಾರು ಮಹಾನ್ ವ್ಯಕ್ತಿಗಳ ಜಯಂತಿಯನ್ನು ಮಾಡಿ ಅವಲೋಕನ ಮಾಡುತ್ತೇವೆ. ಹಾಗೇ ಗೀತಾ ಜಯಂತಿಯನ್ನೂ ಆಚರಣೆ ಮಾಡಿ ಯುವಪೀಳೀಗೆಗೆ ಇದರ ಮಹತ್ವ ತಿಳಿಸಿಕೊಡುತ್ತಿರುವುದು ಶ್ಲಾಘನೀಯ ಎಂದರು.

ಕಾರ್ಯಕ್ರಮದ ಅಂಗವಾಗಿ  ಕಿರಿಯ ಹಿರಿಯ ಪ್ರೌಢ ಮೂರು ವಿಭಾಗಗಳಲ್ಲಿ ನಡೆಸಲಾದ ಪ್ರಬಂಧ, ಭಗವದ್ಗೀತೆ ಕಂಠಪಾಠ, ಸ್ತೋತ್ರ, ಸಂಗೀತ ಸ್ಪರ್ಧೆಗಳಲ್ಲಿ ಮೈಸೂರು, ಕೆ.ಆರ್.ನಗರ, ಚಾಮರಾಜನಗರ, ನಂಜಗೂಡಿನಿಂದ ಸುಮಾರು 120 ಮಕ್ಕಳು ಭಾಗವಹಿಸಿದ್ದರು.

ಕಾರ್ಯಕ್ರಮದಲ್ಲಿ ನಿವೃತ್ತ ಪ್ರಾಧ್ಯಾಪಕ ಎಚ್.ವಿ.ನಾಗರಾಜಯ್ಯ, ಕೆ.ಎನ್.ವರದರಾಜ ಅಯ್ಯಂಗಾರ್ ಮೆಮೋರಿಯಲ್ ಟ್ರಸ್ಟ್‍ನ ಅಧ್ಯಕ್ಷ ಆರ್.ಬಿ.ನರಸಿಂಹ ಅಯ್ಯಂಗಾರ್, ಕಾರ್ಯದರ್ಶಿ ಎಂ.ಎಸ್.ಶ್ರೀಕಂಠಯ್ಯ ಮತ್ತಿತರರು ಉಪಸ್ಥಿತರಿದ್ದರು.

Leave a Reply

comments

Related Articles

error: