ಪ್ರಮುಖ ಸುದ್ದಿಮೈಸೂರು

ಪ್ರಾಣಿಗಳ ಸರಣಿ ಸಾವಿಗೆ ಅನಾರೋಗ್ಯವೇ ಕಾರಣ : ಕಮಲಾ ಕರಿಕಾಳನ್ ಸ್ಪಷ್ಟನೆ

ಮೈಸೂರು ಶ್ರೀ ಚಾಮರಾಜೇಂದ್ರ ಮೃಗಾಲಯದಲ್ಲಿ ಪ್ರಾಣಿಗಳ ಸರಣಿ ಸಾವಿಗೆ ನೌಕರರ ಅಸಹಕಾರ ಹಾಗೂ ಸರಿಯಾಗಿ ನೋಡಿಕೊಳ್ಳದಿರುವುದೇ ಕಾರಣ ಎಂಬುದು ಸತ್ಯಕ್ಕೆ ದೂರವಾಗಿದ್ದು ಎಲ್ಲಾ ಪ್ರಾಣಿಗಳು ನೈಸರ್ಗಿಕ ಅನಾರೋಗ್ಯದಿಂದ ಸಾವನ್ನಪ್ಪಿವೆ ಎಂದು ಮೃಗಾಲಯ ನಿರ್ದೇಶಕಿ ಕಮಲಾ ಕರಿಕಾಳನ್ ಸ್ಪಷ್ಟಪಡಿಸಿದರು.

ಈ ಸಂಬಂಧ ಭಾನುವಾರ ಮೃಗಾಲಯದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಮೃಗಾಲಯ ಎಂದ ಮೇಲೆ ಹುಟ್ಟು ಸಾವು ಸಹಜ. ಅದಕ್ಕೆ ಇಲ್ಲ ಸಲ್ಲದ ಕತೆ ಕಟ್ಟುವ ಅಗತ್ಯವಿಲ್ಲ. ಕಳೆದ 20 ದಿನಗಳಲ್ಲಿ 6 ಪ್ರಾಣಿಗಳು ಸಾವನ್ನಪ್ಪಿದ್ದು ಎಲ್ಲವೂ ಅನಾರೋಗ್ಯದಿಂದ ಸಾವನ್ನಪ್ಪಿವೆಯೇ ಹೊರತು ಅವುಗಳನ್ನು ಯಾರೂ ಕೊಂದಿಲ್ಲ. ಕೆಲವರು ಮೃಗಾಲಯದ ಅಭಿವೃದ್ಧಿಯನ್ನು ಸಹಿಸದೆ ಹೆಸರು ಕೆಡಿಸಲು ಹುನ್ನಾರ ನಡೆಸುತ್ತಿದ್ದಾರೆ ಎಂದು ಆರೋಪಿಸಿದರು.

ಹೆಣ್ಣು ಝೀಬ್ರಾ ರಿದ್ಧಿ ನ.7ರಂದು ಗ್ಯಾಸ್ಟ್ರಿಕ್ ಸಮಸ್ಯೆಯಿಂದ ಸಾವನ್ನಪ್ಪಿದ್ದರೆ, ಕನಕ ಎಂಬ ಕಾಡೆಮ್ಮೆ ಹೊಟ್ಟೆಯಲ್ಲೆ  ಕರು ಸತ್ತಿದ್ದರಿಂದ ಅನಾರೋಗ್ಯಕ್ಕೆ ತುತ್ತಾಗಿ ನ.24ರಂದು ಸಾವನ್ನಪ್ಪಿದೆ. ಇನ್ನು ನಾಗಾ ಎಂಬ 9 ವರ್ಷದ ಹೈನಾ ಕಳೆದ 4 ವರ್ಷಗಳಿಂದಲೂ ಅನಾರೋಗ್ಯದಿಂದ ಬಳಲುತ್ತಿತ್ತು. ಜತೆಗಾರರೊಂದಿಗೆ ಜಗಳ ಮಾಡುವ ಸಂದರ್ಭದಲ್ಲಿ ಗಾಯಗೊಂಡು ಚೇತರಿಸಿಕೊಂಡಿರಲಿಲ್ಲ. ಅಲ್ಲದೆ ಕಳೆದ 5 ದಿನಗಳಿಂದ ಆಹಾರ ತ್ಯಜಿಸಿತ್ತು. ನ.25ರಂದು ತೀವ್ರ ಅನಾರೋಗ್ಯದಿಂದ ಸಾವನ್ನಪ್ಪಿದೆ ಎಂದು ಮಾಹಿತಿ ನೀಡಿದರು.

ಇನ್ನು ಹನ್ನೆರಡುವರೆ ವರ್ಷದ ಕಿಂಗ್ ಕೋಬ್ರಾವನ್ನು ಉಜಿರೆಯಿಂದ ಸಂರಕ್ಷಿಸಿ ತರಲಾಗಿತ್ತು. ಅದು ಬಲಹೀನತೆಯಿಂದ ಬಳಲುತ್ತಿತ್ತು. ಅಲ್ಲದೆ ಕಳೆದ ಮೂರು ತಿಂಗಳಿನಿಂದ ಆಹಾರ ಸೇವಿಸುತ್ತಿರಲಿಲ್ಲ. ಇದರಿಂದ ಅನಾರೋಗ್ಯಕ್ಕೆ ತುತ್ತಾಗಿ ಸಾವನ್ನಪ್ಪಿದೆ. ಸಿಂಹಬಾಲದ ಕೋತಿ ಅಪ್ಪು ಕಳೆದ 8 ತಿಂಗಳಿನಿಂದ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ. ಅಲ್ಲದೆ ಎರಡು ಬಾರಿ ಈ ತೊಂದರೆಯಿಂದ ಚೇತರಿಸಿಕೊಂಡಿದ್ದ. ಆದರೆ ಕಳೆದ 5 ದಿನಗಳಿಂದ ಉಸಿರಾಟದ ತೊಂದರೆ ಹೆಚ್ಚಾಗಿ ಆಹಾರವನ್ನೂ ತ್ಯಜಿಸಿದ್ದ. ಕೊನೆಗೆ ನ.28ರಂದು ನ್ಯುಮೋನಿಯಾದಿಂದ ಸಾವನ್ನಪ್ಪಿದ್ದಾನೆ. ಹೆಬ್ಬಾವು ಅಜೀರ್ಣ ಸಮಸ್ಯೆಯಿಂದ ಸಾವನ್ನಪ್ಪಿದ್ದು ಇದರಲ್ಲಿ ಯಾರ ಕೈವಾಡವೂ ಇಲ್ಲ ಎಂದು ಸ್ಪಷ್ಟಪಡಿಸಿದರು.

ಜನನ, ಮರಣ ಸಾಮಾನ್ಯ: ಮೃಗಾಲಯದಲ್ಲಿ ಸರಣಿ ಸಾವುಗಳಾಗುತ್ತಿರುವುದು ಇದೇ ಮೊದಲೇನಲ್ಲ. ಹಲವಾರು ಬಾರಿ ಸರಣಿ ಸಾವುಗಳು ಸಂಭವಿಸಿವೆ. 2015-16ರಲ್ಲಿ 27 ಪ್ರಾಣಿಗಳು ಜನಿಸಿದ್ದರೆ 17 ಪ್ರಾಣಿಗಳು ಸಾವನ್ನಪ್ಪಿವೆ. 2016ರಲ್ಲಿ 45 ಪ್ರಾಣಿಗಳು ಜನಿಸಿದ್ದರೆ, ಅವುಗಳಲ್ಲಿ 23ರಿಂದ 25 ಪ್ರಾಣಿಗಳು ಅಸು ನೀಗಿವೆ. ಪ್ರತಿವರ್ಷವೂ ಶೇ.50ರಷ್ಟು ಜನನವಾದರೆ ಶೇ.20ರಷ್ಟು ಪ್ರಾಣಿಗಳು ಸಾವನ್ನಪ್ಪುತ್ತವೆ. ಈ ಎಲ್ಲಾ ಮಾಹಿತಿಯನ್ನು ಇಲಾಖೆಯ ವೆಬ್‍ಸೈಟ್‍ನಲ್ಲಿ ಪ್ರತಿ ತಿಂಗಳೂ ಹಾಕಲಾಗುತ್ತಿದ್ದು, ಮುಚ್ಚುಮರೆ ಮಾಡುವ ಯಾವ ಅಗತ್ಯತೆಯೂ ಇಲ್ಲ. ಮೃಗಾಲಯದ ಒಳಗೆ ಯಾವ ಅಕ್ರಮವೂ ನಡೆಯುತ್ತಿಲ್ಲ ಎಂದು ತಿಳಿಸಿದರು.

ನೌಕರರ ವೇತನ ಹೆಚ್ಚಳ: ನಾನು ನಿರ್ದೇಶಕಿಯಾಗಿ ಅಧಿಕಾರ ವಹಿಸಿಕೊಂಡ ಮೇಲೆ ನೌಕಕರಿಗೆ ಹಲವಾರು ಸವಲತ್ತುಗಳನ್ನು ಕಲ್ಪಿಸಿದ್ದೇನೆ. ಎಲ್ಲಾ ನೌಕರರಿಗೂ ಸಮವಸ್ತ್ರ, ಶೂ, ಮಾಸ್ಟರ್ ಹೆಲ್ತ್‍ ಚೆಕಪ್ ಮಾಡಿಸಿದ್ದು ಗುತ್ತಿಗೆ ನೌಕರರ ದಿನದ ವೇತನವನ್ನು 261 ರೂ.ಗಳಿಂದ 290ರೂ.ಗೆ ಏರಿಸಲಾಗಿದೆ.  ಅಲ್ಲದೆ ಕ್ಯಾಂಟೀನ್ ಸೌಲಭ್ಯ ಕಲ್ಪಿಸಿ ಕಡಿಮೆ ದರದಲ್ಲಿ ಊಟದ ಸೌಲಭ್ಯ ಕಲ್ಪಿಸಲಾಗಿದ್ದು, ನೌಕರರನ್ನು ಕಡೆಗಣಿಸುವ ಯಾವ ಕೆಲಸವನ್ನೂ ಮಾಡಿಲ್ಲ. ಮೃಗಾಲಯದ ನಿಯಮಗಳಿಗೆ ವಿರುದ್ಧವಾಗಿ ಕೆಲಸ ಮಾಡಿದ ನಾಲ್ವರನ್ನು ಅಮಾನತು ಮಾಡಲಾಗಿದೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮೃಗಾಲಯ ಪ್ರಾಧಿಕಾರದ ಅಧ್ಯಕ್ಷೆ ಮಲ್ಲಿಗೆ ವೀರೇಶ್ ಸೇರಿದಂತೆ ಇನ್ನಿತರರು ಇದ್ದರು

 “2017 ಮಾರ್ಚನಲ್ಲಿ  ಮೃಗಾಲಯ 125 ವರ್ಷಗಳನ್ನು ಪೂರೈಸಲಿದ್ದು ಇಸ್ರೇಲ್ ರಾಮತ್ ಗನ್ ರಾಷ್ಟ್ರೀಯ ಉದ್ಯಾನವನ 4  ಝೀಬ್ರಾಗಳನ್ನು ಮೃಗಾಲಯಕ್ಕೆ ನೀಡಲಿದೆ. ಶ್ರೀಲಂಕಾ ಸೇರಿದಂತೆ ಇನ್ನಿತರ ದೇಶಗಳೊಂದಿಗೆ ಪ್ರಾಣಿಗಳನ್ನು ವಿನಿಮಯ ಮಾಡಿಕೊಳ್ಳಲಾಗುತ್ತಿದೆ. ಮೃಗಾಲಯದ ಆವರಣದಲ್ಲಿ ನಿರ್ಮಾಣವಾಗುತ್ತಿರುವ ಹ್ಯಾಂಪಿ ಥಿಯೇಟರ್ ಕಾಮಗಾರಿ 10-15 ದಿನಗಳಲ್ಲಿ ಪೂರ್ಣಗೊಳ್ಳಲಿದ್ದು, ದೇಶದ ಬೃಹತ್ ಥಿಯೇಟರ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ. ಮೃಗಾಲಯದ ಭದ್ರತಾ ಸಿಬ್ಬಂದಿ ಪತ್ರಕರ್ತರಿಗೆ ಪ್ರವೇಶ ಕಲ್ಪಿಸುವುದಿಲ್ಲ ಎಂಬ ಆರೋಪ ಕೇಳಿಬಂದಿದ್ದು ಕೂಡಲೇ ಅದನ್ನು ಸರಿಪಡಿಸುತ್ತೇನೆ.”

ಕಮಲಾ ಕರಿಕಾಳನ್, ಮೃಗಾಲಯ ನಿರ್ದೇಶಕಿ

“ಮೃಗಾಲಯದಲ್ಲಿ ಕಳೆದ 20 ದಿನಗಳಲ್ಲಿ ಪ್ರಾಣಿಗಳ ಸರಣಿ ಸಾವು ಸಂಭವಿಸಿ ಸಾರ್ವಜನಿಕರಲ್ಲಿ ಆತಂಕ ಸೃಷ್ಟಿಯಾದ ಹಿನ್ನಲೆಯಲ್ಲಿ ಭಾನುವಾರ ಪತ್ರಿಕಾಗೋಷ್ಠಿ ನಡೆಸಿ ಆತಂಕ ದೂರ ಮಾಡುವ ಕೆಲಸ ಮಾಡಲಾಗಿದೆ. ವಯೋಸಹಜ ಅನಾರೋಗ್ಯದಿಂದ ಪ್ರಾಣಿಗಳು ಸಾವನ್ನಪ್ಪಿದ್ದು ಇದರಲ್ಲಿ ನೌಕರರ ಪಾತ್ರವೇನೂ ಇಲ್ಲ. ಮುಂದಿನ ವಾರ ಅಧಿಕಾರಿಗಳು, ನೌಕರರ ಸಭೆ ಕರೆದು ಎಲ್ಲಾ ಸಮಸ್ಯೆಗಳನ್ನು ಬಗೆಹರಿಸಲಾಗುವುದು.”

ಎಂ.ಕೆ.ಸೋಮಶೇಖರ್, ಶಾಸಕ

Leave a Reply

comments

Related Articles

error: