Uncategorized

ನಾಳೆ ಮತದಾನ : ರಾಜಕಾರಣಿಗಳ ಭವಿಷ್ಯ ಬರೆಯಲಿರುವ ಮತದಾರ : ಕೊಡಗು ವಿಧಾನಸಭಾ ಕ್ಷೇತ್ರ : ಮಡಿಕೇರಿ 11,  ವಿರಾಜಪೇಟೆ 6 ಅಭ್ಯರ್ಥಿಗಳು ಕಣದಲ್ಲಿ

ರಾಜ್ಯ(ಮಡಿಕೇರಿ )ಮೇ 11 :- ಕೊಡಗು ಜಿಲ್ಲೆಯ ಎರಡು ವಿಧಾನಸಭಾ ಕ್ಷೇತ್ರಗಳಲ್ಲಿ ಒಟ್ಟು 17 ಅಭ್ಯರ್ಥಿಗಳು ಸ್ಪರ್ಧೆಯಲ್ಲಿದ್ದಾರೆ. ಮಡಿಕೇರಿ ಕ್ಷೇತ್ರದಲ್ಲಿ 11 ಹಾಗೂ ವಿರಾಜಪೇಟೆ ಕ್ಷೇತ್ರದಲ್ಲಿ 6 ಮಂದಿ ಚುನಾವಣಾ ಕಣದಲ್ಲಿದ್ದಾರೆ.

ಮಡಿಕೇರಿಯಲ್ಲಿ ಅಪ್ಪಚ್ಚುರಂಜನ್(ಭಾರತೀಯ ಜನತಾ ಪಕ್ಷ), ಕೆ.ಪಿ.ಚಂದ್ರಕಲಾ (ಭಾರತೀಯ ರಾಷ್ಟ್ರೀಯ ಕಾಂಗ್ರೆಸ್), ಜೀವಿಜಯ (ಜೆಡಿಎಸ್), ಭಾರ್ಗವ (ಎಬಿಎಚ್‍ಎಂಎಸ್), ರಶೀದಾಬೇಗಂ (ಎಐಎಂಇಪಿ), ಕೆ.ಬಿ.ರಾಜು (ಭಾರತೀಯ ರಿಪಬ್ಲಿಕ್ ಪಕ್ಷ), ಕಿಶನ್, ಖಲೀಲ್, ಬಿ.ಎಂ.ತಿಮ್ಮಯ್ಯ, ಎಂ.ಮಹಮದ್ ಹನೀಫ್, ಪಿ.ಎಸ್.ಯಡೂರಪ್ಪ ಅವರು ಪಕ್ಷೇತರರಾಗಿ ಕಣದಲ್ಲಿದ್ದಾರೆ.

ವಿರಾಜಪೇಟೆ ಯಲ್ಲಿ  ಸಿ.ಎಸ್.ಅರುಣ್ ಮಾಚಯ್ಯ (ಭಾರತೀಯ ರಾಷ್ಟ್ರೀಯ ಕಾಂಗ್ರೆಸ್), ಕೆ.ಜಿ.ಬೋಪಯ್ಯ (ಭಾರತೀಯ ಜನತಾ ಪಕ್ಷ), ಸಂಕೇತ್ ಪೂವಯ್ಯ (ಜೆಡಿಎಸ್), ಎಚ್.ಡಿ.ಬಸವರಾಜು(ಎಐಎಂಇಪಿ), ಎಚ್.ಡಿ.ದೊಡ್ಡಯ್ಯ ಹಾಗೂ ಎಂ.ಕೆ.ನಂಜಪ್ಪ ಅವರು ಪಕ್ಷೇತರರಾಗಿ ಕಣದಲ್ಲಿದ್ದಾರೆ.

ಜಿಲ್ಲೆಯ ಎರಡು ವಿಧಾನಸಭಾ ಕ್ಷೇತ್ರದಲ್ಲಿ 4,33,846 ಮಂದಿ ಮತದಾರರು ಇದ್ದಾರೆ. ಇವರಲ್ಲಿ 2,16,112 ಮಂದಿ ಪುರುಷರು ಮತ್ತು 2,17,717 ಮಂದಿ ಮಹಿಳಾ ಮತದಾರರು, ಹಾಗೆಯೇ 17 ಮಂದಿ ಇತರೆ ಮತದಾರರು ಇದ್ದಾರೆ. ಹೊಸ ಮತದಾರರು 8,823 ಮಂದಿ ಸೇರ್ಪಡೆಗೊಂಡಿದ್ದಾರೆ ಎಂದು ಜಿಲ್ಲಾಧಿಕಾರಿ ಪಿ.ಐ.ಶ್ರೀವಿದ್ಯಾ ತಿಳಿಸಿದ್ದಾರೆ.   ಮಡಿಕೇರಿ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 2,16,937 ಮಂದಿ ಮತದಾರರು ಇದ್ದು, ಇವರಲ್ಲಿ 1,07,532 ಮಂದಿ ಪುರುಷ ಮತದಾರರು ಹಾಗೂ 1,09,399 ಮಂದಿ ಮಹಿಳಾ ಮತದಾರರು, ಹಾಗೆಯೇ 6 ಮಂದಿ ಇತರೆ ಮತದಾರರು ಇದ್ದಾರೆ.  ವಿರಾಜಪೇಟೆ ವಿಧಾನಸಭಾ ಕ್ಷೇತ್ರದಲ್ಲಿ 2,16,909 ಮಂದಿ ಮತದಾರರು ಇದ್ದು, 1,08,580 ಮಂದಿ ಪುರುಷ ಮತ್ತು 1,08,318 ಮಹಿಳಾ ಮತದಾರರು, ಹಾಗೆಯೇ 11 ಮಂದಿ ಇತರೆ ಮತದಾರರು ಇದ್ದಾರೆ.

ವಿಧಾನಸಭಾ ಸಾರ್ವತ್ರಿಕ ಚುನಾವಣೆ ಸಂಬಂಧ ಮತದಾರರ ಪಟ್ಟಿಯಲ್ಲಿ ಹೆಸರು ಇದ್ದು, ಗುರುತಿನ ಚೀಟಿ ಇಲ್ಲದೇ ಇದ್ದರೆ, ಮಾನ್ಯತೆ ಪಡೆದ 12 ಬಗೆಯ ಯಾವುದಾರೂ ಒಂದು ಗುರುತಿನ ಚೀಟಿ ಹಾಜರುಪಡಿಸಿ ಮತದಾನ ಮಾಡಲು ಚುನಾವಣಾ ಆಯೋಗ ಅವಕಾಶ ನೀಡಿದೆ.

ಪಾಸ್‍ಪೋರ್ಟ್, ಚಾಲನಾ ಪರವಾನಗಿ ಪತ್ರ, ಕೇಂದ್ರ, ರಾಜ್ಯ, ಅರೆ ಸರ್ಕಾರಿ ಮತ್ತು ಸಾರ್ವಜನಿಕ ಸ್ವಾಮ್ಯದ ಸಂಸ್ಥೆಗಳು ತಮ್ಮ ಸಿಬ್ಬಂದಿಗಳಿಗೆ ನೀಡಿರುವ ಗುರುತಿನ ಚೀಟಿ, ಬ್ಯಾಂಕ್, ಅಂಚೆ ಕಚೇರಿಯು ವಿತರಿಸಿರುವ ಭಾವಚಿತ್ರವಿರುವ ಪಾಸ್‍ಬುಕ್, ಪಾನ್‍ಕಾರ್ಡ್, ನರೇಗಾ ಕಾರ್ಡ್, ಕಾರ್ಮಿಕ ಸಚಿವಾಲಯದ ಯೋಜನೆಯಡಿ ವಿತರಿಸಿರುವ ಆರೋಗ್ಯ ವಿಮಾ ಚೀಟಿ,  ಆರ್‍ಜಿಐ ವತಿಯಿಂದ ನೀಡಿರುವ ಚೀಟಿ, ಭಾವಚಿತ್ರವಿರುವ ಪಿಂಚಣಿ ದಾಖಲೆಗಳು, ಚುನುವಾಣೆ ಆಯೋಗ ನೀಡುವ ವೋಟರ್ ಸ್ಲಿಪ್, ಎಂಪಿ, ಎಂಎಲ್‍ಎ ಮತ್ತು ಎಂಎಲ್‍ಸಿ ಗಳಿಗೆ ನೀಡಿರುವ ಕಾರ್ಡ್‍ಗಳು ಮತ್ತು ಆಧಾರ್ ಕಾರ್ಡ್ ಹೀಗೆ 12 ರೀತಿಯ ಕಾರ್ಡ್‍ಗಳಲ್ಲಿ ಯಾವುದರೂ ಒಂದನ್ನು ತೋರಿಸಿ ಮತ ಚಲಾಯಿಸಲು ಚುನಾವಣಾ ಆಯೋಗ ಅವಕಾಶ ನೀಡಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ಜಿಲ್ಲೆಯಲ್ಲಿ 538 ಮತಗಟ್ಟೆಗಳಿದ್ದು, ಕೆಲವು ಸೂಕ್ಮ ಮತಟ್ಟೆಗಳಿಗೆ ಹೆಚ್ಚಿನ ಪೊಲೀಸ್ ಭದ್ರತೆ ಒದಗಿಸಲಾಗಿದೆ. ಈಗಾಗಲೇ 5 ಅರೆಸೇನಾ ಪಡೆ ಆಗಮಿಸಿದ್ದು, ಸಿಆರ್‍ಪಿಎಫ್, ಬಿಎಸ್‍ಎಫ್, ಸಬ್ ಇನ್ಸೆಪೆಕ್ಟರ್‍ಗಳು, ಸಹಾಯ ಸಬ್ ಇನ್ಸೆಪೆಕ್ಟರ್‍ಗಳು, 6 ಡಿವೈಎಸ್‍ಪಿ ಸೇರಿದಂತೆ ಸಾಕಷ್ಟು ಭದ್ರತೆ ಮಾಡಿಕೊಳ್ಳಲಾಗಿದೆ. ಹೆಚ್ಚಿನ ಮಾಹಿತಿಗೆ 100 ಕ್ಕೆ ಕರೆ ಮಾಡಬಹುದಾಗಿದೆ ಎಂದು ಚುನಾವಣಾ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

5 ಪಿಂಕ್ ಮತಗಟ್ಟೆಗಳು

ಚುನಾವಣಾ ಆಯೋಗದ ನಿರ್ದೇಶನದಂತೆ ಜಿಲ್ಲೆಯ ಎರಡು ವಿಧಾನಸಭಾ ಕ್ಷೇತ್ರದ ತಲಾ 5 ಮತಗಟ್ಟೆಗಳಲ್ಲಿ ಪಿಂಕ್/ ಸಖಿ ಮತಗಟ್ಟೆಗಳಿಗೆ ಮಹಿಳಾ ಅಧಿಕಾರಿಗಳು ಮತ್ತು ಸಿಬ್ಬಂದಿಗಳನ್ನು ನಿಯೋಜಿಸಲಾಗುತ್ತಿದ್ದು, ಮಡಿಕೇರಿ ವಿಧಾನಸಭಾ ಕ್ಷೇತ್ರದ ಕಡದಗಾಳು ಸರ್ಕಾರಿ ಪ್ರೌಢಶಾಲೆ, ನಗರದ ಸಹಕಾರ ಸಂಘಗಳ ನಿರ್ವಹಣಾ ಸಂಸ್ಥೆ, ಕುಶಾಲನಗರದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ, ನಗರದ ಬ್ಲಾಸಂ ಇಂಗ್ಲೀಷ್ ಮಾಧ್ಯಮ ಶಾಲೆ ಮತ್ತು ಸಂತ ಮೈಕಲರ ಶಾಲೆ, ವಿರಾಜಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ವಿರಾಜಪೇಟೆಯ ಸುಂಕದಕಟ್ಟೆ ಸಮುದಾಯ ಭವನ, ತೆಲುಗರ ಬೀದಿ ಸಮುದಾಯ ಭವನ, ಸೆಂಟ್ ಆನ್ಸ್ ಪ್ರೌಢಶಾಲೆ,  ಪಂಜರಪೇಟೆಯ ಉರ್ದು ಶಾಲೆ, ಹಾಗೇಯೆ ಬಿಟ್ಟಂಗಾಲದ ಗ್ರಾಮ ಪಂಚಾಯಿತಿ ಮತಗಟ್ಟೆಗಳಲ್ಲಿ ಸಖಿ ಮತಗಟ್ಟೆಗಳನ್ನು ಗುರುತಿಸಲಾಗಿದೆ.

ವಿಕಲಚೇತನರೇ ಎರಡು ಮತಗಟ್ಟೆಗಲ್ಲಿ ಅಧಿಕಾರಿಗಳು 

ವಿಕಲಚೇತನ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಇರುವ ಎರಡು ಮತಗಟ್ಟೆಗಳನ್ನು ಗುರುತಿಸಲಾಗಿದ್ದು, ನಗರದ ತಾಲೂಕು ಪಂಚಾಯತ್ ಕಚೇರಿ ಮತ್ತು ವಿರಾಜಪೇಟೆಯ ಜಯಪ್ರಕಾಶ್ ಬಾಲಕಿಯರ ಪ್ರೌಢಶಾಲೆ, ಈ ಮತಗಟ್ಟೆಗಳಲ್ಲಿ ವಿಕಲಚೇತನ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಮತಗಟ್ಟೆ ಅಧಿಕಾರಿಗಳಾಗಿ ಕರ್ತವ್ಯ ನಿರ್ವಹಿಸಲಿದ್ದಾರೆ.

ಹಾಗೇಯೆ ಕೊಡಗಿನ ಸಂಸ್ಕೃತಿಯನ್ನು ಬಿಂಬಿಸುವ ಮತಗಟ್ಟೆಗಳನ್ನು ಗುರುತಿಸಲಾಗಿದ್ದು, ಮಡಿಕೇರಿ ವಿಧಾನಸಭಾ ಕ್ಷೇತ್ರದಿಂದ ಗುಡ್ಡೆಹೊಸೂರು ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ, ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಬೊಮ್ಮಾಡು ಸರ್ಕಾರಿ ಆಶ್ರಮ ಶಾಲೆ ಮತ್ತು ನಾಗರಹೊಳೆಯ ಸರ್ಕಾರಿ ಆಶ್ರಮ ಶಾಲೆ ಗುರುತಿಸಲಾಗಿದೆ.

ಮತದಾನ ಕೇಂದ್ರಗಳಲ್ಲಿ ಕರ್ತವ್ಯ ನಿರ್ವಹಿಸಲು 3,365 ಸಿಬ್ಬಂದಿಗಳನ್ನು ನಿಯೋಜಿಸಲಾಗುವುದು. ಮಾದರಿ ನೀತಿ ಸಂಹಿತೆ ತಂಡವನ್ನು ರಚಿಸಲಾಗಿದ್ದು, 54 ಮಂದಿ ಈ ವಿಭಾಗದಲ್ಲಿ ಕಾರ್ಯನಿರ್ವಹಿಸಲಿದ್ದಾರೆ. 41 ಸೆಕ್ಟರ್ ಅಧಿಕಾರಿಗಳು, 36 ಲೆಕ್ಕ ಪರಿಶೀಲನಾ ತಂಡ, 18 ಫ್ಲೈಯಿಂಗ್ ಸ್ಕ್ಯಾಡ್ ನೇಮಕ ಮಾಡಲಾಗಿದೆ.

ಜಿಲ್ಲೆಯಲ್ಲಿ 12 ಕಡೆ ಚೆಕ್‍ಪೋಸ್ಟ್ ತೆರೆಯಲಾಗಿದ್ದು, ಇದರಲ್ಲಿ  ಕುಟ್ಟ, ಮಾಕುಟ್ಟ ಮತ್ತು ಕರಿಕೆ ಅಂತರ ರಾಜ್ಯ ಚೆಕ್ ಪೋಸ್ಟ್ ಒಳಗೊಂಡಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಜೇಂದ್ರ ಪ್ರಸಾದ್ ತಿಳಿಸಿದ್ದಾರೆ.  (ಕೆಸಿಐ,ಎಸ್.ಎಚ್)

Leave a Reply

comments

Related Articles

error: