ಮೈಸೂರು

ಸಾಮಾಜಿಕ ಘನತೆಯುಳ್ಳ ಚಿತ್ರ ನಿರ್ಮಾಣ ಮಾಡಿ: ಎಸ್.ಆರ್. ನರಸಿಂಹಯ್ಯ

ಯುವ ನಿರ್ದೇಶಕರು ತಮ್ಮ ಗಾಂಭೀರ್ಯತೆಯನ್ನು ಅರ್ಥ ಮಾಡಿಕೊಂಡು ಸಾಮಾಜಿಕ ಘನತೆಯುಳ್ಳ ಚಿತ್ರಗಳನ್ನು ನಿರ್ಮಿಸಬೇಕು ಎಂದು ಪುಟ್ಟಣ್ಣ ಕಣಗಾಲ್ ಸಹೋದರ ಎಸ್.ಆರ್.ನರಸಿಂಹಯ್ಯ ಸಲಹೆ ನೀಡಿದರು.

ಮೈಸೂರಿನಲ್ಲಿ ಪುಟ್ಟಣ್ಣ ಕಣಗಾಲ್ ವೇದಿಕೆಯ ವತಿಯಿಂದ ಏರ್ಪಡಿಸಲಾದ ಪುಟ್ಟಣ್ಣ ಕಣಗಾಲ್ ಅವರ 83ನೇ ಜಯಂತಿ ಕಾರ್ಯಕ್ರಮವನ್ನು ಎಸ್.ಆರ್.ನರಸಿಂಹಯ್ಯ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಕನ್ನಡ ಚಿತ್ರರಂಗದಲ್ಲಿ ಉತ್ತಮ ಕಲಾವಿದರಿದ್ದಾರೆ. ಉತ್ತಮ ಚಿತ್ರಗಳನ್ನು ನಿರ್ಮಿಸುವ ಮೂಲಕ ಅವರ ಪ್ರತಿಭೆಯನ್ನು ಅನಾವರಣಗೊಳಿಸುವ ಕೆಲಸವಾಗಬೇಕು ಎಂದರು.

ಪುಟ್ಟಣ್ಣ ಕಣಗಾಲ್ ಅವರು ಪ್ರತಿಭೆಯನ್ನು ಹೆಕ್ಕಿ ತೆಗೆಯುವುದರಲ್ಲಿ ಸಿದ್ಧ ಹಸ್ತರಾಗಿದ್ದರು. ಅವರ ಚಿತ್ರರಂಗದಲ್ಲಿ ಹಲವಾರು ಕಲಾವಿದರು ನೆಲೆ ಕಂಡುಕೊಂಡಿದ್ದಾರೆ. ನಿರ್ದೇಶಕರು ಪೋಷಕರಂತೆ ತಮ್ಮ ಪಾತ್ರವನ್ನು ನಿರ್ವಹಿಸಬೇಕು. ಅವರ ನೆರಳಿನಲ್ಲಿ ಹಲವಾರು ಕಲಾವಿದರು ಜೀವನ ಕಂಡುಕೊಳ್ಳುವಂತಾಗಬೇಕು ಎಂದು ತಿಳಿಸಿದರು.

ಸ್ವಚ್ಛ ಭಾರತ ಎಂಬ ಪರಿಕಲ್ಪನೆಯನ್ನು ಚಿತ್ರರಂಗಕ್ಕೂ ಅಳವಡಿಸಬೇಕು. ಕನ್ನಡ ಸಿನಿಮಾರಂಗದಲ್ಲಿ ಬದಲಾವಣೆಯನ್ನು ತಂದು ಕನ್ನಡ ಸಂಸ್ಕೃತಿಯನ್ನು ಎಲ್ಲೆಡೆ ಪಸರಿಸಬೇಕು ಎಂದರು.

ಕಾರ್ಯಕ್ರಮದಲ್ಲಿ ಕನ್ನಡ ಚಿತ್ರಗೀತೆ ಸ್ಪರ್ಧೆ ನಡೆಯಿತು. ಕಣಗಾಲ್ ವೇದಿಕೆಯ ಅಧ್ಯಕ್ಷ ಕಂಪಲಾಪುರ ಮೋಹನ್, ಅನುಪಮಾ, ಗಾಯಕಿ ಡಾ.ಸ್ನೇಹಶ್ರೀ, ನಿರ್ಮಲ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.

Leave a Reply

comments

Related Articles

error: