ಕರ್ನಾಟಕಪ್ರಮುಖ ಸುದ್ದಿ

ತಮ್ಮ ಹಕ್ಕು ಚಲಾಯಿಸದ ಗಣಿಧಣಿ ಜನಾರ್ಧನ ರೆಡ್ಡಿ

ಬಳ್ಳಾರಿ,ಮೇ 12-ಗಣಿಧಣಿ ಗಾಲಿ ಜನಾರ್ಧನ ರೆಡ್ಡಿ ಈ ಬಾರಿ ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಹಕ್ಕನ್ನು ಚಲಾಯಿಸಲು ಸಾಧ್ಯವಾಗಿಲ್ಲ.

ಅಕ್ರಮ ಗಣಿ ಹಗರಣದ ಆರೋಪದಲ್ಲಿ ಜಾಮೀನು ಪಡೆದಿರುವ ಜನಾರ್ಧನ ರೆಡ್ಡಿ ಬಳ್ಳಾರಿಗೆ ಪ್ರವೇಶಿಸುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಆದೇಶಿಸಿರುವುದರಿಂದ ರೆಡ್ಡಿ ಮತದಾನ ಮಾಡಿಲ್ಲ.

ತಮ್ಮ ಸಹೋದರ ಸೋಮಶೇಖರ ರೆಡ್ಡಿ ಬಿಜೆಪಿಯಿಂದ ಸ್ಪರ್ಧಿಸಿದ್ದು, ಅವರ ಪರವಾಗಿ ಪ್ರಚಾರ ನಡೆಸಲು ಅವಕಾಶ ನೀಡಬೇಕೆಂದು ಸುಪ್ರೀಂಕೋರ್ಟ್ ಗೆ ಜನಾರ್ದನ ರೆಡ್ಡಿ ಮನವಿ ಮಾಡಿದ್ದರು. ಷರತ್ತು ಬದ್ಧ ಜಾಮೀನು ನೀಡಿದ್ದು, ಜನಾರ್ದನ ರೆಡ್ಡಿ ಮತ ಚಲಾಯಿಸಬೇಕಾಗಿದೆ. ಅದಕ್ಕಾಗಿ ಷರತ್ತುಗಳನ್ನು ಸಡಿಲಗೊಳಿಸಬೇಕೆಂದು ರೆಡ್ಡಿ ಪರ ವಕೀಲ ವಾದ ಮಾಡಿದರು. ಆದರೆ ಕೋರ್ಟ್ ರೆಡ್ಡಿ ಪರ ವಕೀಲರ ವಾದವನ್ನು ತಳ್ಳಿ ಹಾಕಿ ಜನಾರ್ಧನ ರೆಡ್ಡಿ ಯಾವುದೇ ಕಾರಣಕ್ಕೂ ಬಳ್ಳಾರಿಗೆ ಭೇಟಿ ನೀಡುವಂತಿಲ್ಲ ಎಂದು ಸ್ಪಷ್ಟಪಡಿಸಿತು. ಹೀಗಾಗಿ ರೆಡ್ಡಿ ಮತದಾನ ಮಾಡಲು ಸಾಧ್ಯವಾಗಿಲ್ಲ.

ಇನ್ನು ಜನಾರ್ಧನ ರೆಡ್ಡಿ ಪುತ್ರ ಮೊದಲ ಬಾರಿಗೆ ಮತದಾನ ಚಲಾಯಿಸಿದ್ದಾರೆ. ರೆಡ್ಡಿ ಸಹೋದರರರಾದ ಕರುಣಾಕರ ರೆಡ್ಡಿ ಹರಪ್ಪನಹಳ್ಳಿಯಿಂದ, ಬಳ್ಳಾರಿ ನಗರದಿಂದ ಸೋಮಶೇಖರ ರೆಡ್ಡಿ ಹಾಗೂ ಆಪ್ತ ಸ್ನೇಹಿತ ಶ್ರೀರಾಮುಲು ಬಾದಾಮಿ ಹಾಗೂ ಮೊಳಕಾಲ್ಮೂರು ಕ್ಷೇತ್ರಗಳಿಂದ ಸ್ಪರ್ಧಿಸಿದ್ದಾರೆ. (ಎಂ.ಎನ್)

Leave a Reply

comments

Related Articles

error: