ಪ್ರಮುಖ ಸುದ್ದಿ

ಬಹುಮತ ಬರತ್ತೋ ಬಿಡತ್ತೋ ಸರ್ಕಾರ ರಚಿಸುತ್ತೇವೆ ಎಂದ ಹೆಚ್ ಡಿ.ದೇವೇಗೌಡರ ಮಾತಿಗೆ ಪುಷ್ಠಿ ನೀಡಿದಂತಿರುವ ಚುನಾವಣೋತ್ತರ ಸಮೀಕ್ಷೆಗಳು

ರಾಜ್ಯ(ಬೆಂಗಳೂರು)ಮೇ.14:-  ಬಹುಮತ ನಮಗೆ ಬರುತ್ತೋ, ಬಿಡುತ್ತೋ ಗೊತ್ತಿಲ್ಲ. ಆದರೆ, ಸರ್ಕಾರ ರಚಿಸುತ್ತೇವೆ ಎನ್ನುವ ವಿಶ್ವಾಸ ನನಗಿದೆ ಎಂದು ಹೇಳಿದ್ದ ಜೆಡಿಎಸ್ ವರಿಷ್ಠ ಹೆಚ್.ಡಿ. ದೇವೇಗೌಡರ ಮಾತು ಇದೀಗ ಬಹಳ ಪ್ರಾಮುಖ್ಯ ಪಡೆದುಕೊಂಡಿದೆ.

ಮತದಾರನ ನಿರ್ಧಾರ ಮತಯಂತ್ರದಲ್ಲಿ ಭದ್ರವಾಗಿದ್ದು, ರಾಜಕೀಯ ಪಕ್ಷಗಳ ಹಾಗೂ ಅಭ್ಯರ್ಥಿಗಳ ಎದೆಯಲ್ಲಿ ಆತಂಕ ಮನೆಮಾಡಿದೆ. ಸಮೀಕ್ಷೆಗಳು ಸತ್ಯವಾಗಿ ಅತಂತ್ರ ಸ್ಥಿತಿ ನಿರ್ಮಾಣವಾದರೆ ಮುಂದೇನು ಎನ್ನುವ ಚಿಂತೆ ಹಲವರನ್ನು ಕಾಡುತ್ತಿದೆ. ಸಮೀಕ್ಷೆಗಳು ಒಂದೇ ಪಕ್ಷ ಸಂಪೂರ್ಣ ಬಹುಮತ ಬರುವುದು ಅನುಮಾನ ಎಂದಿವೆ. ಹೀಗಾಗಿ ಇದೀಗ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮುವವರು ಸರ್ಕಾರ ರಚಿಸಲು ಕಸರತ್ತು ನಡೆಸಲು ಬೇರೆ ಪಕ್ಷದ ಅಥವಾ ಪಕ್ಷೇತರರನ್ನು ಅವಲಂಬಿಸಬೇಕಾಗಿದೆ. ಪಕ್ಷೇತರರು ಕಡಿಮೆ ಸಂಖ್ಯೆಯಲ್ಲಿ ಇರುತ್ತಾರೆ ಎನ್ನುವ ಮಾತು ಕೇಳಿ ಬರುತ್ತಿರುವ ಹಿನ್ನೆಲೆಯಲ್ಲಿ  ದೇವೇಗೌಡರ ಮಾತು ಸತ್ಯವಾಗುವ ಸಾಧ್ಯತೆ ಗೋಚರಿಸುತ್ತಿದೆ.

ರಾಜ್ಯ ಬಿಜೆಪಿ ನಾಯಕರೊಂದಿಗೆ ದೇವೇಗೌಡರು ಮಾತುಕತೆ ನಡೆಸುವ ಸಾಧ್ಯತೆ ಕಡಿಮೆ ಇದೆ. ಏಕೆಂದರೆ ಈಗಾಗಲೇ ಬಿಜೆಪಿ ಜತೆ ಕುಮಾರಸ್ವಾಮಿ ಮತ್ತೆ ಮೈತ್ರಿಗೆ ಮುಂದಾದರೆ ಮನೆಯಿಂದ ಬಹಿಷ್ಕಾರ ಹಾಕುತ್ತೇನೆ ಎಂದು ದೊಡ್ಡಗೌಡರು ಗುಡುಗಿದ್ದಾರೆ. ರಾಜ್ಯ ಬಿಜೆಪಿ ನಾಯಕರ ಬಗ್ಗೆ ಅವರಿಗೆ ಒಲವಿಲ್ಲ. ಮಾಜಿ ಪ್ರಧಾನಿ ಆಗಿರುವ ಕಾರಣಕ್ಕೆ ಇವರೊಂದಿಗೆ ಮಾತುಕತೆಗೆ ಬಿಜೆಪಿ ರಾಷ್ಟ್ರೀಯ ನಾಯಕರು, ಅದರಲ್ಲೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರೇ ಆಗಮಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಒಂದೆಡೆ ಜೆಡಿಎಸ್ ಸೆಳೆಯಲು ಬಿಜೆಪಿ ಪ್ರಯತ್ನ ನಡೆಸಿದ್ದರೆ, ಇನ್ನೊಂದೆಡೆ ದಲಿತ ಸಿಎಂ ಭರವಸೆ ಮುಂದಿಟ್ಟು ಕಾಂಗ್ರೆಸ್ ಸಹ ಅಖಾಡಕ್ಕಿಳಿದಿದೆ. ಜೆಡಿಎಸ್‌‌‌ನ್ನು ಜನರ ದೃಷ್ಟಿಯಲ್ಲಿ ಹೀರೋ ಮಾಡಿಸುವ ಅಥವಾ ಮೈತ್ರಿಗೆ ಒಪ್ಪದಿದ್ದರೆ ದಲಿತ ವಿರೋಧಿಗಳು ಎಂದು ಹಣೆಪಟ್ಟಿ ಕಟ್ಟುವ ಗೇಮ್‌‌ಗೆ ಮುಂದಾಗಿದೆ ಎನ್ನಲಾಗುತ್ತಿದೆ.

ಜಾತ್ಯಾತೀತ ತತ್ವ ಹೇಳುವ ಜೆಡಿಎಸ್ ಒಂದೊಮ್ಮೆ ಒಪ್ಪದಿದ್ದರೆ ದಲಿತ ವಿರೋಧಿ ಎಂದು ಬಿಂಬಿಸುವ ತಂತ್ರಕ್ಕೆ ಕಾಂಗ್ರೆಸ್ ಮುಂದಾಗಿದ್ದು, ಇದಕ್ಕೆ ಜೆಡಿಎಸ್ ಯಾವ ರೀತಿ ಪ್ರತಿಕ್ರಿಯೆ ನೀಡಲಿದೆ ಎನ್ನುವುದನ್ನು ಕಾದು ನೋಡಬೇಕಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: