ಮೈಸೂರು

‘ಇಂಡೆಮ್-2016: ರಾಷ್ಟ್ರೀಯ ಭಾವೈಕ್ಯತಾ ಸಮ್ಮಿಲನ’: ಡಿ.10ರಿಂದ

ಮೈಸೂರಿನ ಪ್ರಾದೇಶಿಕ ಶಿಕ್ಷಣ ಸಂಸ್ಥೆಯ ಪ್ರಾಯೋಗಿಕ ಶಾಲೆಗಳ ಆಂತರಿಕ ಒಕ್ಕೂಟ “ರಾಷ್ಟ್ರೀಯ ಭಾವೈಕ್ಯತಾ ಸಮ್ಮಿಲನ” ‘ಇಂಡೆಮ್’ ಅನ್ನು ಡಿ.10 ರಿಂದ ಡಿ.13 ರ ವರೆಗೆ ಹಮ್ಮಿಕೊಳ್ಳಲಾಗಿದೆ ಎಂದು ಪ್ರಾಂಶುಪಾಲ ಪ್ರೊ. ಡಿ.ಜಿ. ರಾವ್ ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಅವರು, ಸುದ್ದಿಗಾರರೊಂದಿಗೆ ಮಾತನಾಡಿ, ಇಂಡೆಮ್‍-2016 ಅನ್ನು ಡಿ.10 ರಂದು ಬೆಳಗ್ಗೆ 10ಕ್ಕೆ ಶಾಲಾ ಕ್ರೀಡಾಂಗಣದಲ್ಲಿ ನವದೆಹಲಿಯ ಎನ್ಸಿಇಆರ್‍ಟಿ ನಿರ್ದೇಶಕ ಪ್ರೊ. ಹೃಷಿಕೇಶ್ ಸೇನಾಪತಿ ಉದ್ಘಾಟಿಸುವರು. ವಿಶ್ವಪ್ರಜ್ಞೆ ಕಲ್ಪನೆಯಲ್ಲಿ ಹಮ್ಮಿಕೊಂಡಿರುವ ಕಾರ್ಯಕ್ರಮದಲ್ಲಿ ಅಜ್ಮೀರ್, ಭುವನೇಶ್ವರ್, ಭೂಪಾಲ್ ಹಾಗೂ ಮೈಸೂರಿನ ಆರ್‍ಐಇ ಶಾಲೆಗಳ 140 ವಿದ್ಯಾರ್ಥಿಗಳು ಪಾಲ್ಗೊಳ್ಳಲಿದ್ದಾರೆ. ಶಾಲಾ ಆವರಣದಲ್ಲಿಯೇ ವಸತಿ ವ್ಯವಸ್ಥೆ ಮಾಡಲಾಗಿದ್ದು ಈ ಸಂದರ್ಭದಲ್ಲಿ ಕ್ರೀಡೆ, ಮನೋರಂಜನೆ ಜೊತೆಗೆ ದೇಶಿಯ ಸಂಸ್ಕೃತಿಯನ್ನು ಬಿತ್ತರಿಸಲಾಗುವುದು.

ಡಿ. 10 ರ ಬೆಳಗ್ಗೆ ಬಾಸ್ಕೆಟ್ ಬಾಲ್ ಆಟವನ್ನು ಆಯೋಜಿಸಲಾಗಿದ್ದು, ಅಂತರಶಾಲಾ ತಂಡಗಳನ್ನಾಗಿ ಮಾರ್ಪಡಿಸಿ ಎಲ್ಲ ಶಾಲೆಗಳ ವಿದ್ಯಾರ್ಥಿಗಳನ್ನೊಳಗೊಂಡ ತಂಡವನ್ನು ಕಟ್ಟಲಾಗುವುದು. ಬಾಸ್ಕೆಟ್ ಬಾಲ್, ವಾಲಿಬಾಲ್, ಪುಟ್ಬಾಲ್, ರಿಲೇ, ಓಟ, ಗುಂಡು ಎಸೆತ, ಉದ್ದ ಜಿಗಿತ ಕ್ರೀಡೆಗಳ ಸ್ಪರ್ಧೆಗಳು ಜರುಗುವವು. ಡಿ.13ರ ಮಧ್ಯಾಹ್ನ 3ಕ್ಕೆ ನಡೆಯುವ ಸಮಾರೋಪ ಸಮಾರಂಭವನ್ನುದ್ದೇಶಿಸಿ ಖ್ಯಾತ ಚಲನಚಿತ್ರ ನಟ ಪ್ರಕಾಶ್ ರಾಜ್ ಮಾತನಾಡುವರು ಪ್ರಾಂಶುಪಾಲ ಪ್ರೊ. ಡಿ.ಜಿ. ರಾವ್ ಅಧ್ಯಕ್ಷತೆ ವಹಿಸುವರು. ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಪದಕ ಹಾಗೂ ಪ್ರಶಸ್ತಿ ಪತ್ರ ವಿತರಣೆ ನಡೆಯುವುದು ಎಂದು ತಿಳಿಸಿದರು.

ಶಾಲೆಯ ಮುಖ್ಯೋಪಾಧ್ಯಾಯಿನಿ ಕಲ್ಪನಾ ವೇಣುಗೋಪಾಲ ಮಾತನಾಡಿ, ಸಾಂಸ್ಕೃತಿಕ, ಮನೋವಿಕಾಸ ಹಾಗೂ ಕ್ರೀಡೆ ಸೇರಿದಂತೆ ಮಕ್ಕಳ ಸಮಗ್ರ ವಿಕಾಸಕ್ಕೆ ಶಾಲೆಯೂ ಒತ್ತು ನೀಡುತ್ತಿದ್ದು ಕಾರ್ಯಕ್ರಮದ ನಿಮಿತ್ತ ಕಳೆದ 2 ತಿಂಗಳಿನಿಂದಲೂ ಶಿಕ್ಷಕರು ಕಮಿಟಿಗಳನ್ನು ರಚಿಸಿಕೊಂಡು ಪೂರ್ವ ತಯಾರಿಯಲ್ಲಿರುವುದರಿಂದ ಯಶಸ್ವಿಯಾಗುವುದರಲ್ಲಿ ಸಂದೇಹವಿಲ್ಲ ಎಂದರು.

ನಾಲ್ಕು ದಿನ ನಡೆಯುವ ಕಾರ್ಯಕ್ರಮದಲ್ಲಿ ಮಕ್ಕಳಿಗೆ ರಂಗಭೂಮಿಯನ್ನು ಪರಿಚಯಿಸಲು ರಂಗಾಯಣಕ್ಕೆ ಕರೆದುಕೊಂಡು ಹೋಗಲಾಗುವುದು. ಗಂಜೀಫಾ ಕಲೆ ಹಾಗೂ ಮೈಸೂರ್ ಪೈಂಟಿಂಗ್ ಬಗ್ಗೆ ತಿಳಿಸಲಾಗುವುದು. ನ್ಯಾಚುರಲ್ ಮ್ಯೂಸಿಯಂ ಆಫ್ ಹಿಸ್ಟರಿಯಲ್ಲಿ ನೈಸರ್ಗಿಕ ಇತಿಹಾಸ ಶಿಕ್ಷಣದ ಬಗ್ಗೆ ಭಾಷಣವನ್ನು ಏರ್ಪಡಿಸಲಾಗಿದೆ. ಸಂಜೆ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ನಾಲ್ಕು ಪ್ರಾಯೋಗಿಕ ಶಾಲೆಯ ವಿದ್ಯಾರ್ಥಿಗಳು ತಮ್ಮ ತಮ್ಮ ರಾಜ್ಯಗಳ ಸಾಂಸ್ಕೃತಿಕ ನೃತ್ಯ, ಹಾಡು, ನಾಟಕಗಳನ್ನು ಪ್ರದರ್ಶಿಸುವರು. ಮೈಸೂರು ಶಾಲೆಯ ವಿದ್ಯಾರ್ಥಿಗಳು ಫೀಚರ್ ಪ್ರೆಸೇಂಟೇಶನ್‍ ಪ್ರಸ್ತುತ ಪಡಿಸುವರು. ಶಿಬಿರಾರ್ಥಿಗಳಿಗೆ ಉತ್ತರ ಹಾಗೂ ದಕ್ಷಿಣ ಭಾರತ ಶೈಲಿಯ ಆಹಾರವನ್ನು ನೀಡಲಾಗುವುದು ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಸಂಯೋಜಕ ಡಾ. ಸೋಮಶೇಖರ್, ಅನಿತಾ ರವೀಂದ್ರ ಹಾಗೂ ಇತರರು ಉಪಸ್ಥಿತರಿದ್ದರು.

Leave a Reply

comments

Related Articles

error: