ದೇಶಪ್ರಮುಖ ಸುದ್ದಿ

ಅಪಘಾತ ಪ್ರಕರಣದಲ್ಲಿ ಸಿಧು ದೋಷಿ: ರೂ. 1 ಸಾವಿರ ದಂಡ, ಜೈಲು ಶಿಕ್ಷೆ ಇಲ್ಲ

ನವದೆಹಲಿ (ಮೇ 16): ಮೂವತ್ತು ವರ್ಷಗಳ ಹಿಂದಿನ ರಸ್ತೆ ಅಪಘಾತಕ್ಕೆ ಸಂಬಂಧಿಸಿದಂತೆ ನಡೆದ ಗಲಾಟೆ ಪ್ರಕರಣದಲ್ಲಿ ಮಾಜಿ ಕ್ರಿಕೆಟಿಗ ಹಾಗೂ ಪಂಜಾಬ್ ಸರ್ಕಾರದಲ್ಲಿ ಸಚಿವರಾಗಿರುವ ನವಜೋತ್ ಸಿಂಗ್ ಸಿಧು ಅವರನ್ನು ದೋಷಿ ಎಂದು ಸುಪ್ರೀಂ ಕೋರ್ಟ್ ಮಂಗಳವಾರ ತೀರ್ಪು ನೀಡಿದೆ. ರೂ. 1 ಸಾವಿರ ದಂಡ ವಿಧಿಸಿದ್ದು, ಜೈಲು ಶಿಕ್ಷೆಯಿಂದ ಸಿಧು ಪಾರಾಗಿದ್ದಾರೆ.

1988ರಲ್ಲಿ 65 ವರ್ಷದ ವ್ಯಕ್ತಿಯೊಬ್ಬರನ್ನು ರಸ್ತೆಯಲ್ಲಿ ಥಳಿಸಿದ ಆರೋಪ ಸಿಧು ಅವರ ಮೇಲಿತ್ತು. ಆ ವ್ಯಕ್ತಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು.

ಉದ್ದೇಶಪೂರ್ವಕವಲ್ಲದ ಹತ್ಯೆ ಆರೋಪದಡಿ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಸಿಧು ಅವರಿಗೆ ಮೂರು ವರ್ಷ ಜೈಲು ಶಿಕ್ಷೆ ವಿಧಿಸಿತ್ತು. ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಗಳಾದ ಚಲಮೇಶ್ವರ್ ಹಾಗೂ ಸಂಜಯ್ ಕಿಶನ್ ಕೌಲ್ ಅವರಿದ್ದ ಪೀಠ, ಹೈಕೋರ್ಟ್ ಆದೇಶ ಮರುಪರಿಶೀಲಿಸಿ ಈ ತೀರ್ಪು ನೀಡಿದೆ. ಸಿಧು ಆಪ್ತ ರೂಪಿಂದರ್ ಸಿಂಗ್ ಸಂಧು ಅವರಿಗೆ ವಿಧಿಸಿದ್ದ ಮೂರು ವರ್ಷಗಳ ಜೈಲು ಶಿಕ್ಷೆಗೂ ತಡೆ ನೀಡಿದೆ.

ಐಪಿಸಿ ಕಲಂ 323 ಅಡಿ ಗರಿಷ್ಠ ಒಂದು ವರ್ಷ ಶಿಕ್ಷೆ ಅಥವಾ ₹1 ಸಾವಿರ ದಂಡ ಅಥವಾ ಎರಡನ್ನೂ ವಿಧಿಸಬಹುದು.

ಸುಪ್ರೀಂ ಕೋರ್ಟ್ ತೀರ್ಪಿಗೆ ಪ್ರತಿಕ್ರಿಯಿಸಿರುವ ಸಿಧು, ಅಂದು ನಡೆದ ಘಟನೆ ಕೇವಲ ಅಕಸ್ಮಿಕ ಎಂದಿದ್ದಾರೆ. ಕಷ್ಟಕಾಲದಲ್ಲಿ ತಮ್ಮನ್ನು ಪಾರು ಮಾಡಿದ ದೇವರಿಗೆ ಧನ್ಯವಾದ ಅರ್ಪಿಸಿದ್ದಾರೆ. ‘ಕೋರ್ಟ್ ಕೂಡಾ ಘಟನೆ ಆಕಸ್ಮಿಕ ಎಂದು ಹೇಳಿದೆ. ಕಾನೂನಿಗೆ ನಾನು ತಲೆಬಾಗುತ್ತೇನೆ’ ಎಂದಿದ್ದಾರೆ. (ಎನ್.ಬಿ)

Leave a Reply

comments

Related Articles

error: