
ಮೈಸೂರು
ಕಟ್ಟಡ ನಿರ್ಮಾಣ ಸಾಮಾಗ್ರಿಗಳ ಪ್ರದರ್ಶನ
ಬಿಲ್ಡರ್ಸ್ ಅಸೋಸಿಯೇಷನ್ ಆಫ್ ಇಂಡಿಯಾ ಮತ್ತು ಮೈಬಿಲ್ಡ್ ವತಿಯಿಂದ 16 ನೇ ಆವೃತ್ತಿಯ ಕಟ್ಟಡ ನಿರ್ಮಾಣ ಸಾಮಾಗ್ರಿಗಳ ಬೃಹತ್ ಪ್ರದರ್ಶನವನ್ನು ಏರ್ಪಡಿಸಲಾಗಿದೆ ಎಂದು ಬಿಲ್ಡರ್ಸ್ ಅಸೋಸಿಯೇಷನ್ ನ ಅಧ್ಯಕ್ಷ ಎನ್. ಸುಬ್ರಹ್ಮಣ್ಯ ತಿಳಿಸಿದರು.
ಮೈಸೂರಿನ ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಎನ್.ಸುಬ್ರಹ್ಮಣ್ಯ ಮಾತನಾಡಿ ಮಹಾರಾಜ ಕಾಲೇಜಿನ ಮೈದಾನದಲ್ಲಿ ಡಿ.07 ರಿಂದ 12 ರವರೆಗೆ ಈ ವಸ್ತು ಪ್ರದರ್ಶನ ನಡೆಯಲಿದೆ. ಒಟ್ಟು 235 ಉತ್ಪನ್ನ ಮಳಿಗೆಗಳಿರಲಿದ್ದು ಪ್ಲಾಟಿನಂ, ರಿಯಾಲ್ಟಿ ಮತ್ತು ಡೈಮಂಡ್ ವಿಭಾಗದಲ್ಲಿ ಮಳಿಗೆಗಳನ್ನು ಸ್ಥಾಪಿಸಲಾಗುತ್ತಿದೆ ಎಂದರು.
ಉದ್ಘಾಟನಾ ಸಮಾರಂಭವು ಡಿ.7 ರ ಸಂಜೆ 5 ಗಂಟೆಗೆ ನಡೆಯಲಿದ್ದು, ಮುಖ್ಯ ಅತಿಥಿಗಳಾಗಿ ಲೋಕೋಪಯೋಗಿ ಸಚಿವ ಹೆಚ್.ಸಿ.ಮಹದೇವಪ್ಪ ಹಾಗೂ ಲೋಕಸಭಾ ಸದಸ್ಯ ಸಿ.ಎಸ್.ಪುಟ್ಟರಾಜು ಆಗಮಿಸಲಿದ್ದಾರೆ.
ನಾಗರಿಕರಿಗೆ ಮತ್ತು ವಿದ್ಯಾರ್ಥಿಗಳಿಗೆ ಡಿ.9 ಮತ್ತು 10 ರಂದು ‘ವಾಯ್ಸ್ ಆಫ್ ಮೈಬಿಲ್ಡ್’ ಎಂಬ ಗಾಯನ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ. ಡಿ.11 ರಂದು ಅಂತಿಮ ಸ್ಪರ್ಧೆ ನಡೆಯಲಿದೆ. ಅಂದು ಸಂಜೆ ಬಿ.ಎ.ಐ. ವತಿಯಿಂದ ಸಂಗೀತ ಸಂಜೆ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಡಿ.12 ರ ಸಂಜೆ 5 ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಬಿ.ಎಸ್.ದಿನೇಶ್, ಸಿ.ಡಿ.ಕೃಷ್ಣ, ರಘುನಾಥ್ ಹಾಜರಿದ್ದರು.