ಮೈಸೂರು

ಸಂಗೀತ ವಿವಿಗಳು ವಿದ್ಯಾರ್ಥಿಗಳ ಶೈಕ್ಷಣಿಕ ಜ್ಞಾನಕ್ಕಿಂತ ಸೃಜನಶೀಲತೆಗೆ ಪ್ರಾಮುಖ್ಯತೆ ನೀಡಬೇಕು: ಡಾ.ಎಸ್.ಎಲ್. ಭೈರಪ್ಪ

ವಿದ್ಯಾರ್ಥಿಗಳ ಶೈಕ್ಷಣಿಕ ಮತ್ತು ಪ್ರಾಯೋಗಿಕ ಜ್ಞಾನ ವೃದ್ಧಿಗೆ ಮತ್ತು ಸಂಗೀತ ಕಲಿಕೆಗೆ ಸಂಗೀತ ವಿಶ್ವವಿದ್ಯಾನಿಲಯಗಳ ಅಗತ್ಯತೆಯಿದೆ ಎಂದು ಕನ್ನಡ ಕಾದಂಬರಿಕಾರ ಮತ್ತು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಡಾ.ಎಸ್.ಎಲ್. ಭೈರಪ್ಪ ಅವರು ಅಭಿಪ್ರಾಯಪಟ್ಟರು.

ಕರ್ನಾಟಕ ರಾಜ್ಯ ಡಾ.ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ  ಕುವೆಂಪುನಗರದಲ್ಲಿರುವ ಗಾನಭಾರತಿಯ ವೀಣೆ ಶೇಷಣ್ಣ ಭವನದಲ್ಲಿ  ಹಿಂದೂಸ್ತಾನಿ ಶಾಸ್ತ್ರೀಯ ಗಾಯನ ಹಾಗೂ ತಬಲಾ ವಿಭಾಗಗಳ ವತಿಯಿಂದ ಸೋಮವಾರದಂದು ಆಯೋಜಿಸಿದ್ದ ರಾಜ್ಯ ಮಟ್ಟದ ‘ಘರಾಣಾ ಉತ್ಸವ’ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದರು.

ಸಂಗೀತ ವಿವಿಗಳಲ್ಲಿ ವಿದ್ಯಾರ್ಥಿಗಳಿಗೆ ಸಂಗೀತದ ಬೇಸಿಕ್ಸ್ ಮಾತ್ರ ಹೇಳಿಕೊಡಲಾಗುತ್ತದೆ. ಸಂಗೀತದ ಪೂರ್ಣ ಪಾಠವನ್ನು ಹೇಳಿಕೊಡುತ್ತಿಲ್ಲ. ವಿದ್ಯಾರ್ಥಿಗಳಿಗೆ ಸಂಗೀತವನ್ನು ಪರಿಚಯಿಸಿ ಕೊಡುವುದಷ್ಟೇ ವಿಶ್ವವಿದ್ಯಾನಿಲಯಗಳ ಕೆಲಸವಾಗಿ ಮಾರ್ಪಟ್ಟಿದೆ ಎಂದು ವಿಷಾದಿಸಿದರು.

ಸಂಗೀತ ವಿವಿಗಳಲ್ಲಿರುವ ಪಠ್ಯಕ್ರಮ ಬದಲಾಗಬೇಕಾದ ಅವಶ್ಯಕತೆಯಿದೆ. ಸಂಗೀತ ಕಲಿಕೆಯಲ್ಲಿ ಶೈಕ್ಷಣಿಕ ಜ್ಞಾನಕ್ಕಿಂತ ಸೃಜನಶೀಲತೆಗೆ ಹೆಚ್ಚು ಪ್ರಾಮುಖ್ಯತೆ ಕೊಡಬೇಕು. ವಿವಿ ಮಟ್ಟಗಳಲ್ಲಿ ನಿರ್ಬಂಧಗಳಿದ್ದಷ್ಟು ವಿದ್ಯಾರ್ಥಿಗಳ ಸೃಜಶೀಲತೆ ಕಡಿಮೆಯಾಗುತ್ತದೆ ಎಂದು ಹೇಳಿದರು.

ಸಂಗೀತ ವಿವಿಗಳಲ್ಲಿ ನಡೆಯುವ ಪ್ರಬಂಧ ಮಂಡನೆಗಳ ರೀತಿಗಳು ಕೂಡ ಬದಲಾಗಬೇಕಾದ ಅವಶ್ಯಕತೆಯಿದೆ. ಇತರ ವಿವಿಗಳಲ್ಲಿ ನಡೆಯುವ ಪ್ರಬಂಧ ಮಂಡನೆಗಳ ಮಾದರಿಯನ್ನೇ ಸಂಗೀತ ವಿವಿಗಳು ಅನುಸರಿಸುತ್ತಿರುವುದು ಕಂಡಬಂದಿದೆ. ಇತರ ವಿವಿಗಳು ಮತ್ತು ಸಂಗೀತ ವಿವಿಗಳಲ್ಲಿ ಪಠ್ಯ ಬೋಧನಾ ಕ್ರಮಗಳಲ್ಲಿ ವ್ಯತ್ಯಾಸವಿದೆ. ಸಂಗೀತ ವಿವಿಗಳು ಪ್ರಸ್ತುತ ಕಾಲಘಟ್ಟಕ್ಕೆ ಅನುಸಾರವಾಗಿ ಪ್ರಬಂಧ ಮಂಡನೆ ವಿಷಯಗಳನ್ನು ಆಯ್ಕೆ ಮಾಡಬೇಕೆಂದರು.

ಹೆಚ್ಚು ಪೋಷಕರು ತಮ್ಮ ಮಕ್ಕಳಿಗೆ ಶಾಸ್ತ್ರೀಯ ಸಂಗೀತ ಕಲಿಸದೆ, ಮೆಡಿಕಲ್ ಮತ್ತು ಎಂಜಿನಿಯರಿಂಗ್ ಕ್ಷೇತ್ರದ ಕಡೆಗೆ ಆಸಕ್ತಿ ಮೂಡುವಂತೆ ಮಾಡುತ್ತಿದ್ದಾರೆ. ಶಾಸ್ತ್ರೀಯ ಸಂಗೀತವನ್ನು ವಾಣಿಜ್ಯೋದ್ಯಮ ದೃಷ್ಟಿಯಿಂದ ನೋಡಲಾಗುತ್ತಿದ್ದು, ನಮ್ಮ ಸಂಪ್ರದಾಯ, ಪರಂಪರೆಯನ್ನು ಉಳಿಸಿ ಬೆಳೆಸುವ ಬಗ್ಗೆ ಯಾರೊಬ್ಬರು ತಲೆಕೆಡಿಸಿಕೊಳ್ಳುತ್ತಿಲ್ಲ ಎಂದು ಅಭಿಪ್ರಾಯಪಟ್ಟರು.

ರಂಗಾಯಣದ ಉಪ ನಿರ್ದೇಶಕಿ ನಿರ್ಮಲಾ ಮಠಪತಿ ಅವರು ಮಾತನಾಡಿದರು. ವಿಶ್ವವಿದ್ಯಾನಿಲಯದ ಉಪ ಕುಲಪತಿ ಡಾ. ಸರ್ವಮಂಗಳಾ ಶಂಕರ್ ಮತ್ತು ರಿಜಿಸ್ಟ್ರಾರ್ ಪ್ರೊ. ನಿರಂಜನ ವಾನಳ್ಳಿ ಅವರು ಉಪಸ್ಥಿತರಿದ್ದರು.

Leave a Reply

comments

Related Articles

error: