ಪ್ರಮುಖ ಸುದ್ದಿಮೈಸೂರು

ಮೈಸೂರು-ನಂಜನಗೂಡು ರಸ್ತೆ ಟೋಲ್ ಸಂಗ್ರಹ ಕಾನೂನು ಬಾಹಿರ: ಸಮಾಜವಾದಿ ಜನತಾ ಪಾರ್ಟಿ ಆರೋಪ

ಮುಖ್ಯ ರಸ್ತೆಗೆ ಪರ್ಯಾಯ ರಸ್ತೆಯಿಲ್ಲದೆ ಮೈಸೂರು-ನಂಜನಗೂಡು ರಸ್ತೆಯಲ್ಲಿ ಟೋಲ್ ಕಲೆಕ್ಟ್ ಗೆ ಸರ್ಕಾರದ ಏಕಾಏಕಿ ನಿರ್ಧಾರಕ್ಕೆ ಸಮಾಜವಾದಿ ಜನತಾ ಪಕ್ಷ ಖಂಡಿಸಿದೆ.

ಈ ಬಗ್ಗೆ ಜಿಲ್ಲಾಧ್ಯಕ್ಷ ಜಿ.ಎಂ. ಗಾಡ್ಕರ್ ಅವರು ಪ್ರತ್ರಿಕಾ ಪ್ರಕಟಣೆ ನೀಡಿ, ಹಳೆ ರಸ್ತೆಯನ್ನೇ ಅಗಲೀಕರಣ ಮಾಡಿ ಟೋಲ್‍ ವಸೂಲಿಗೆ ಚಿಂತಿಸಿರುವ ಸರ್ಕಾರದ ಕ್ರಮವು ಕಾನೂನು ಬಾಹಿರ. ಅಲ್ಲದೇ, ಸದರಿ ರಸ್ತೆಯ ವ್ಯಾಪ್ತಿಯಲ್ಲಿ ಬರುವ ಅಕ್ಕಪಕ್ಕದ ಹಳ್ಳಿಗಳಿಗೆ, ಜಮೀನುಗಳಿಗೆ ಇನ್ನಿತರೆ ವ್ಯವಹಾರಗಳಿಗೆ ಓಡಾಡುವ ವಾಹನಗಳು ಟೋಲ್‍ ಶುಲ್ಕಕ್ಕೆ ಒಳಪಡಲಿದ್ದು ಸಾರ್ವಜನಿಕರಿಗೆ ಹೆಚ್ಚಿನ ಹೊರೆಯಾಗಲಿದೆ. ಸಾರ್ವಜನಿಕರ ಅಭಿಪ್ರಾಯ ಸಂಗ್ರಹಿಸದೆ ಟೋಲ್ ವಸೂಲಾತಿಗೆ ಯಾವ ಕಾನೂನು ಮಾನದಂಡವನ್ನು ಸರ್ಕಾರ ಅನುಸರಿಸುತ್ತಿದೆ ಎಂದು ಪ್ರಶ್ನಿಸಿದ್ದಾರೆ.

ಹಗಲು ದರೋಡೆ: ಜನಸಾಮಾನ್ಯರು ಈಗಾಗಲೇ ಹಲವಾರು ತೆರಿಗೆಗಳನ್ನು ಕಟ್ಟುತ್ತಿದ್ದು, ಹೆಚ್ಚಿನ ತೆರಿಗೆ ಭಾರವನ್ನು ಹೇರುವುದು ಸರಿಯಲ್ಲ. ತಮ್ಮ ಖಾಸಗಿ ಏಜೆನ್ಸಿಗಳಿಗೆ ಸರ್ಕಾರಿ ರಸ್ತೆಗಳನ್ನು ಅಗಲೀಕರಣ ಅಥವಾ ನವೀಕರಣದ ಹೆಸರಿನಲ್ಲಿ ಕಾಮಗಾರಿ ನೀಡಿ ಟೋಲ್ ವಸೂಲಿ ಮಾಡುವುದು ಹಗಲು ದರೋಡೆ. ಸಾರ್ವಜನಿಕರು ಪ್ರತಿ ವಾಹನ ಖರೀದಿಸಿದಾಗ – ಮಾರಾಟ ಮಾಡುವಾಗಲೂ, ಡಿಸೇಲ್, ಪೆಟ್ರೋಲ್ ಹಾಗೂ ಇತರೆ ನಿರ್ವಹಣೆಗೂ ಪರೋಕ್ಷ ತೆರಿಗೆ ಕಟ್ಟಲಾಗುತ್ತಿದೆ. ಹೀಗಿದ್ದರೂ ಟೋಲ್ ಹೆಸರಿನಲ್ಲಿ ಮತ್ತಷ್ಟು ಹೊರೆ ಹೇರುವುದು ಅಕ್ಷಮ್ಯ ಅಪರಾಧ.

ಪರೋಕ್ಷ ತೆರಿಗೆ: ಕೇಂದ್ರ ಸರ್ಕಾರ ಪ್ರತಿ ಹೊಸ ವಾಹನಗಳಿಗೂ ಹಾಗೂ ಬಿಡಿ ಭಾಗಗಳಿಗೂ ಎಕ್ಸೈಸ್ ಡ್ಯೂಟಿಯಾಗಿ ತೆರಿಗೆ ವಸೂಲಿ ಮಾಡುತ್ತಿದೆ. ಕೇಂದ್ರದೊಂದಿಗೆ ಪೈಪೋಟಿಗಿಳಿದಿರುವ ರಾಜ್ಯ ಸರ್ಕಾರವು ವ್ಯಾಟ್ ಮೂಲಕ ಹಾಗೂ ರಸ್ತೆ ತೆರಿಗೆ, ಇಂಧನದಲ್ಲಿಯೂ ಶೇ.33 ರಿಂದ 50 ರ ವರೆಗೆ ತೆರಿಗೆ, ಇನ್ಶೂರೆನ್ಸ್ ಪ್ರೀಮಿಯಂನಲ್ಲಿ ಶೇ. 15ರಷ್ಟು, ರಿಪೇರಿ ಮೇಲೆ ವ್ಯಾಟ್, ಎಂಟ್ರಿ ಟ್ಯಾಕ್ಸ್, ಸರ್ವಿಸ್ ಟ್ಯಾಕ್ಸ್ ಬ್ಯಾಂಕಿನಿಂದ ಸಾಲ ಪಡೆದಾಗಲೂ ಪ್ರೊಸೆಸ್ಸಿಂಗ್ ಹಾಗೂ ಕಂತಿನ ಮೇಲೂ ಟ್ಯಾಕ್ಸ್ ಮೂಲಕ ತೆರಿಗೆ ವಸೂಲಿ ಮಾಡುತ್ತಿದೆ.

ಅವೈಜ್ಞಾನಿಕ: ಅಗತ್ಯ ವಸ್ತುಗಳ ಬೆಲೆ ಏರಿಕೆ, ಹಣದುಬ್ಬರಕ್ಕೆ ಸರ್ಕಾರಗಳ ಅವೈಜ್ಞಾನಿಕ ತೆರಿಗೆಗಳೇ ನೇರ ಕಾರಣ. ತೆರಿಗೆಯಿಂದ ರೈತರು ಸರ್ಕಾರಿ ನೌಕರರು ಹಾಗೂ ನಿರ್ದಿಷ್ಟ ಸಂಬಳದ ಅವಲಂಭಿತರು ಹೆಚ್ಚಾಗಿ ಶೋಷಣೆಗೀಡಾಗುತ್ತಿದ್ದಾರೆ ಎಂದು ದೂರಿದ್ದಾರೆ.

ಟೋಲ್ ರಸ್ತೆಯನ್ನು ಉಪಯೋಗಿಸದೆ ಇರುವವರಿಗೆ ಸರ್ವೀಸ್ ರಸ್ತೆ ಮತ್ತು ಅಂಡರ್ ಪಾಸ್ ವ್ಯವಸ್ಥೆ ಕಲ್ಪಿಸಬೇಕು ಎಂಬ ಕಾನೂನಿದ್ದರೂ ನಿಯಮಗಳನ್ನು ಪಾಲಿಸದೆ ಮೈಸೂರು-ನಂಜನಗೂಡು ರಸ್ತೆಯಲ್ಲಿ ಕಾನೂನು ಬಾಹಿರವಾಗಿ ಟೋಲ್ ವಸೂಲಿ ಮಾಡಲು ಖಾಸಗಿ ಏಜೆನ್ಸಿಗೆ ವಹಿಸಲು ನಿರ್ಧರಿಸಲಾಗಿದೆ. ಈ ನಿರ್ಧಾರದ ಹಿಂದಿರುವ ಪ್ರಭಾವಿಗಳು ಯಾರು ಎಂದು ಸಾರ್ವಜನಿಕರಿಗೆ ತಿಳಿಸಬೇಕೆಂದು ಆಗ್ರಹಿಸಿದ್ದಾರೆ.

Leave a Reply

comments

Related Articles

error: