ಮೈಸೂರುಸಿಟಿ ವಿಶೇಷ

ಅಕ್ರಮ ಕುಡಿಯುವ ನೀರು ಮಾರಾಟಕ್ಕಿನ್ನಿಲ್ಲ ಉಳಿಗಾಲ : ಜಿಲ್ಲಾಡಳಿತದಿಂದ ಸಿದ್ಧಗೊಂಡಿದೆ ತನಿಖಾದಳ

ಸಾಂಸ್ಕೃತಿಕ ನಗರಿ ಮೈಸೂರು ಶಾಂತತೆಗೆ ಹೆಸರಾಗಿತ್ತು. ಅಷ್ಟೇ ಅಲ್ಲ. ಅರಮನೆ ನಗರಿ ಎಂಬ ಖ್ಯಾತಿ ಬೇರೆ. ಅಲ್ಪಸ್ವಲ್ಪವಾದರೂ ಗಿಡಮರಗಳು ಇನ್ನೂ ಉಳಿದುಕೊಂಡಿವೆ ಅಂತಾದರೆ ಅದು ಮೈಸೂರಿನಲ್ಲೆ. ಅದಕ್ಕೆ ಹೆಚ್ಚಿನವರು ತಮ್ಮ ವಿಶ್ರಾಂತ ಜೀವನವನ್ನು ಕಳೆಯುವುದು ಇದೇ ಮೈಸೂರಿನಲ್ಲಿಯೇ. ಅದಕ್ಕೆ ಎಲ್ಲರಿಗೂ ಮೈಸೂರೆಂದರೆ ಇಷ್ಟ. ಆದರೆ ಅದೇ ಮೈಸೂರು ಈಗ ಹಲವು ಮಾಫಿಯಾಗಳಿಂದ ತತ್ತರಿಸುತ್ತಿದೆ.

ಕಳೆದ ವರ್ಷಗಳಲ್ಲಿ ಮರಳು ಮಾಫಿಯಾದಿಂದ ಸಾಕಷ್ಟು ಸದ್ದು ಮಾಡಿದ್ದ ಸಾಂಸ್ಕೃತಿಕ ನಗರಿ ಮೈಸೂರು ಮಕ್ಕಳ ಮಾರಾಟ ಪ್ರಕರಣ, ಮಹಿಳೆಯರ ಸಾಗಾಟದಿಂದ ಬೆಚ್ಚಿ ಬಿದ್ದಿತ್ತು.  ಇದೀಗ  ಮತ್ತೊಂದು ಹೊಸ ವಿಷಯ ಸೇರ್ಪಡೆಗೊಂಡಿದ್ದು, ಸಾರ್ವಜನಿಕರನ್ನು ಆತಂಕಕ್ಕೀಡು ಮಾಡಿದೆ.

ಮೈಸೂರಿನಲ್ಲಿ ಅಕ್ರಮ ಕುಡಿಯುವ ನೀರು ಮಾರಾಟದ ದಂದೆ ನಡೆಯುತ್ತಿದೆ. ಹಾಗಂತ ಜಿಲ್ಲಾಧಿಕಾರಿಗಳೇ ತಿಳಿಸಿದ್ದಾರೆ. ಈ ಹಿಂದೆಯೇ ಅವರಿಗೆ ಹಲವು ದೂರುಗಳು ಅಕ್ರಮ ಕುಡಿಯುವ ನೀರಿನ ಮಾರಾಟ ನಡೆಯುತ್ತಿರುವ ಕುರಿತು ಬಂದಿದ್ದು, ಕೂಡಲೇ ಕಾರ್ಯಪ್ರವೃತ್ತರಾಗಿದ್ದಾರೆ. ಎಗ್ಗಿಲ್ಲದೇ ನಡೆಯುತ್ತಿರುವ ಅಕ್ರಮ ದಂದೆಗೆ ಕಡಿವಾಣ ಹಾಕಲು ಮುಂದಾಗಿರುವ ಜಿಲ್ಲಾಡಳಿತ ತನಿಖಾದಳ ರಚಿಸಿದ್ದು, ಮಂಗಳವಾರದಿಂದಲೇ ತನಿಖಾದಳ ಕಾರ್ಯನಿರ್ವಹಿಸಲಿದೆ.

ಇನ್ನು ಮುಂದೆ ಐಎಸ್ಐ ಮತ್ತು ಎಫ್ ಎಸ್ ಎಸ್ ಎ ಪರವಾನಗಿ ಇಲ್ಲದೇ ಕುಡಿಯುವ ನೀರಿನ ಘಟಕ ತೆರೆಯಲು ಅವಕಾಶವಿಲ್ಲ.  ಮೈಸೂರು ಜಿಲ್ಲೆಯಲ್ಲಿ ಒಟ್ಟು 29 ಐಎಸ್‍ಐ ಮಾನ್ಯತೆ ಪಡೆದ ಪ್ಯಾಕೇಜ್ಡ್ ಕುಡಿಯುವ ನೀರು ಮಾರಾಟ ಘಟಕಗಳಿವೆ. ಗ್ರಾಮಾಂತರ ವ್ಯಾಪ್ತಿಯಲ್ಲಿ 20,  ನಗರ ವ್ಯಾಪ್ತಿಯಲ್ಲಿ 9 ಘಟಕಗಳು ಕಾರ್ಯ ನಿರ್ವಹಿಸುತ್ತಿವೆ.  ನಗರ ವ್ಯಾಪ್ತಿಯಲ್ಲಿ 4 ಹಾಗೂ ಗ್ರಾಮಾಂತರ ವ್ಯಾಪ್ತಿಯಲ್ಲಿ 6 ಅರ್ಜಿಗಳು ಮಾನ್ಯತೆಗಾಗಿ ಬಂದಿದ್ದು ಅವುಗಳ ಪರಿಶೀಲನೆ ನಡೆಯುತ್ತಿದೆ. ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆಯನ್ವಯ ಪರವಾನಗಿ ಪಡೆಯದೆ ಯಾವುದೇ ಕಾರಣಕ್ಕೂ ಕುಡಿಯುವ ನೀರನ್ನು ಮಾರಾಟ ಮಾಡುವಂತಿಲ್ಲ. ಆದರೆ, ಕೆಲವರು ಇದನ್ನೇ ಕಸುಬನ್ನಾಗಿ ಮಾಡಿಕೊಂಡಿದ್ದಾರೆ. ಅಷ್ಟೇ ಅಲ್ಲ ಯಾವ ಮಾನದಂಡಗಳನ್ನೂ ಪಾಲಿಸದೆ ಕೇವಲ ಬೋರ್‍ವೆಲ್ ನೀರನ್ನೇ ಬಾಟಲಿಗಳಲ್ಲಿ ತುಂಬಿಸಿ ಮಾರಾಟ ಮಾಡುತ್ತಿದ್ದಾರೆ. ಇದೀಗ ಜಿಲ್ಲಾಡಳಿತ ಅಂತಹವರಿಗೆ ಸಿಂಹಸ್ವಪ್ನವಾಗಿ ನಿಂತಿದೆ. ನೀರಿನ ಘಟಕವನ್ನು ತೆರೆಯಲು ಅನುಮತಿಗಾಗಿ ಈ ಅಂಶಗಳು ಅಗತ್ಯವಾಗಿವೆ.

ಅನುಮತಿಗೆ ಇವು ಅಗತ್ಯ

ನೀರಿನ ಘಟಕ ಸ್ವಚ್ಛತೆಯಿಂದ ಕೂಡಿರಬೇಕು. ಬೋರ್‍ವೆಲ್ ಚರಂಡಿ, ತ್ಯಾಜ್ಯವಸ್ತುಗಳನ್ನು ಶೇಖರಿಸುವ ಸ್ಥಳದಲ್ಲಿರಬಾರದು. ವಾಟರ್ ಟ್ಯಾಂಕ್‍ಗಳನ್ನು ನಿಯಮಿತವಾಗಿ ಸ್ವಚ್ಛಗೊಳಿಸಬೇಕು. ಘಟಕದ ಎಲ್ಲಾ ಹಂತಗಳಲ್ಲೂ  ಸ್ಟೈನ್‍ಲೆಸ್ ಸ್ಟೀಲ್ ಉಪಕರಣ ಬಳಸಬೇಕು. ಫಿಲ್ಟ್ರೇಷನ್ ಹಂತದಲ್ಲಿ ಕಾರ್ಬನ್ ಫಿಲ್ಟರ್, ಮೈಕ್ರೋ ಫಿಲ್ಟರ್ ಬಳಸಿ ದಾಖಲು ಮಾಡಬೇಕು. ಓಜೋನೈಷೇಸನ್, ಆರ್‍ಓ ಪ್ರಕ್ರಿಯೆಯನ್ನು ಸೂಕ್ತವಾಗಿ ಮಾಡಬೇಕು. ಉತ್ತಮ ಲ್ಯಾಬ್, ತಂತ್ರಜ್ಞರು, ಕೆಮಿಸ್ಟ್, ಮೈಕ್ರೋಬಯಾಲಾಜಿಸ್ಟ್ ನೇಮಿಸಬೇಕು. ಎಲ್ಲಕ್ಕಿಂತ ಮುಖ್ಯವಾಗಿ ಕ್ಯಾನ್ ಮೇಲಿನ ಲೇಬಲ್‍ನಲ್ಲಿ ಬ್ಯಾಚ್ ನಂಬರ್, ದಿನಾಂಕ, ಉಪಯೋಗಿಸುವ ವಾಯಿದೆ, ಪೂರ್ಣ ವಿಳಾಸ, ಐಎಸ್‍ಐ ಪರವಾನಗಿ ಸಂಖ್ಯೆ, ಎಫ್‍ಎಸ್‍ಎಸ್‍ಎಐ ಪರವಾನಗಿ ಸಂಖ್ಯೆ ಮುದ್ರಿಸಿ ಕ್ಯಾನ್‍ಗಳನ್ನು ಸೀಲ್ ಮಾಡಿರಬೇಕು. ಇಲ್ಲದಿದ್ದಲ್ಲಿ ತನಿಖಾದಳ ಸೂಕ್ತ ಕ್ರಮ ಕೈಗೊಳ್ಳಲಿದೆ.

ತನಿಖಾದಳ ರಚನೆ

ಬಂಡವಾಳವಿಲ್ಲದೇ ನಿರಾಯಾಸವಾಗಿ, ಸುಲಭವಾಗಿ ಹಣ ಸಂಪಾದಿಸಬಲ್ಲ ಅಕ್ರಮ ಕುಡಿಯುವ ನೀರು ಮಾರಾಟ ದಂದೆಯನ್ನು ಹತ್ತಿಕ್ಕಲು ತನಿಖಾ ತಂಡ ರಚನೆಯಾಗಿದ್ದು ಜಿಲ್ಲಾಧಿಕಾರಿಯನ್ನೊಳಗೊಂಡಂತೆ 6 ಮಂದಿಸದಸ್ಯರಿರುವ ತಂಡದಲ್ಲಿ  ಜಿಲ್ಲಾಧಿಕಾರಿ ರಂದೀಪ್ ಅಧ್ಯಕ್ಷರಾಗಿದ್ದು, ಎಸ್‍ಪಿ ರವಿ ಡಿ.ಚೆನ್ನಣ್ಣನವರ್, ಜಿಲ್ಲಾ ಪಂಚಾಯತ್ ಸಿಇಓ ಶಿವಶಂಕರ್, ಪಾಲಿಕೆ ಆಯುಕ್ತ ಜಗದೀಶ್, ಎಫ್‍ಎ ಮತ್ತು ಬಿಎಸ್‍ಐ ಸದಸ್ಯರು ಹಾಗೂ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ ಅಂಕಿತ ಅಧಿಕಾರಿ ಸತೀಶ್ ಇರುತ್ತಾರೆ

30 ರಿಂದ 40 ಲಕ್ಷ ರೂ. ಖರ್ಚು

ಐಎಸ್‍ಐ ಹಾಗೂ ಎಫ್‍ಎಸ್‍ಎಸ್‍ಎ ಪರವಾನಗಿ ಪಡೆಯಲು ಸುಮಾರು 30ರಿಂದ 40 ಲಕ್ಷದವರೆಗೂ ಖರ್ಚಾಗುತ್ತದೆ. ಪರವಾನಗಿ ಶುಲ್ಕವಾಗಿ 1 ಲಕ್ಷ 25 ಸಾವಿರರೂ. ಪಾವತಿಸಬೇಕಿದ್ದು ಯಂತ್ರಗಳು, ಲ್ಯಾಬ್, ತಂತ್ರಜ್ಞರು, ಬೋರ್‍ವೆಲ್, ಘಟಕ ನಿರ್ಮಾಣಕ್ಕೆ 40ಲಕ್ಷ ರೂ. ಖರ್ಚಾಗುತ್ತದೆ. 100 ರೂ.ಗಳ ಬಾಂಡ್ ಪೇಪರ್‍ನಲ್ಲಿ ಅಫಿಡವಿಟ್ ಸಲ್ಲಿಸಬೇಕಿದ್ದು, ಪರವಾನಗಿ ದೊರೆಯುವವರೆಗೂ ಮಾರಾಟ ಮಾಡುವಂತಿಲ್ಲ. ಒಂದು ವೇಳೆ ಮಾರಾಟ ಮಾಡಿದರೆ ಕಾನೂನು ಬಾಹಿರವಾಗುತ್ತದೆ. ಇಷ್ಟೆಲ್ಲಾ ಮಾನದಂಡಗಳನ್ನು ಪೂರ್ಣಗೊಳಿಸುವುದು ಕಷ್ಟ ಎನ್ನುವ ಉದ್ದೇಶದಿಂದಲೇ ಈ ಅಕ್ರಮ ದಂದೆಗಿಳಿಯಲಾಗಿದೆ.

ಈ ಕುರಿತಂತೆ ಸಿಟಿಟುಡೆಯೊಂದಿಗೆ ಜಿಲ್ಲಾಧಿಕಾರಿ ಡಿ.ರಂದೀಪ್ ಮಾತನಾಡಿ ಅಕ್ರಮವಾಗಿ ಕುಡಿಯುವ ನೀರು ಮಾರಾಟ ದಂದೆ ನಡೆಯುತ್ತಿರುವ ಕುರಿತು ಸಾಕಷ್ಟು ದೂರುಗಳು ಕೇಳಿಬಂದ ಹಿನ್ನೆಲೆಯಲ್ಲಿ ಕ್ರಮಕ್ಕೆ ಮುಂದಾಗಿದ್ದು ತನಿಖಾ ತಂಡ ರಚಿಸಲಾಗಿದೆ. ಪರವಾನಗಿ ಪಡೆಯದೆ ಮಾರಾಟ ಮಾಡುತ್ತಿರುವವರಿಗೆ ನೋಟಿಸ್ ಜಾರಿ ಮಾಡಿದ್ದು, ಪರವಾನಗಿ ಪಡೆದುಕೊಳ್ಳಲು ಗಡುವು ನೀಡಲಾಗಿದೆ. ಪರವಾನಗಿ ಪಡೆಯದೆ ಅಕ್ರಮವಾಗಿ ಪ್ಯಾಕೇಜ್ಡ್ ಕುಡಿಯುವ ನೀರು ಮಾರಾಟ ಮಾಡುತ್ತಿದ್ದರೆ ಅಂತಹ ಘಟಕಗಳ ಮಾಲೀಕರ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಲಾಗುವುದು ಎಂದರು.

ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ ಅಂಕಿತ ಅಧಿಕಾರಿ ಹೆಚ್.ಎನ್.ಸತೀಶ್ ಮಾತನಾಡಿ ಜಿಲ್ಲೆಯಲ್ಲಿ ಕುಡಿಯುವ ನೀರು ಮಾರಾಟವನ್ನೇ ದಂದೆಯನ್ನಾಗಿಸಿಕೊಂಡಿರುವ ಕೆಲವರು ಯಾವುದೇ ಪರವಾನಗಿ ಪಡೆಯದೆ ಅಕ್ರಮವಾಗಿ ಮಾರಾಟ ಮಾಡುತ್ತಿದ್ದಾರೆ. ಈ ಸಂಬಂಧ 2014ರಲ್ಲಿ ಐಎಸ್‍ಐ ಮಾನ್ಯತೆ ಪಡೆದವರು ಕೋರ್ಟ್‍ನಲ್ಲಿ ಅರ್ಜಿ ಸಲ್ಲಿಸಿದ್ದು ನ್ಯಾಯಾಲಯದ ನಿರ್ದೇಶನದ ಪ್ರಕಾರ ತನಿಖಾ ತಂಡ ರಚಿಸಲಾಗಿದೆ. ಪರವಾನಗಿ ಪಡೆಯದೆ ಅಕ್ರಮವಾಗಿ ಪ್ಯಾಕೇಜ್ ಕುಡಿಯುವ ನೀರು ಮಾರಾಟ ಮಾಡುತ್ತಿರುವವರ ವಿರುದ್ಧ ಕಠಿಣ ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಒಟ್ಟಿನಲ್ಲಿ ಜಿಲ್ಲಾಡಳಿತದ ಈ ಕಾರ್ಯದಿಂದ ಅಕ್ರಮ ನೀರು ಮಾರಾಟ ದಂದೆಗೆ ಕಡಿವಾಣ ಬೀಳಲಿದ್ದು, ಸಾರ್ವಜನಿಕರು ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ.

ಬಿ.ಎಂ

Leave a Reply

comments

Related Articles

error: