ಮೈಸೂರು

ಅತಿದೊಡ್ಡ ಪಕ್ಷಕ್ಕೆ ಸರ್ಕಾರ ರಚಿಸಲು ರಾಜ್ಯಪಾಲರು ಅವಕಾಶ ನೀಡಿದ್ದು ಸರಿಯಾಗಿದೆ : ಸಂತೋಷ್ ಹೆಗ್ಡೆ

ಮೈಸೂರು, ಮೇ.18:- ಅತಿದೊಡ್ಡ ಪಕ್ಷಕ್ಕೆ ಸರ್ಕಾರ ರಚಿಸಲು ರಾಜ್ಯಪಾಲರು ಅವಕಾಶ ನೀಡಿದ್ದು ಸರಿಯಾಗಿದೆ  ಎಂದು ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಎನ್. ಸಂತೋಷ್ ಹೆಗ್ಡೆ ತಿಳಿಸಿದರು.

ಮೈಸೂರಿನಲ್ಲಿಂದು ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಲು ಆಗಮಿಸಿದ ಅವರು ಮಾಧ್ಯಮಕ್ಕೆ ಪ್ರತಿಕ್ರಿಯಿಸಿ ರಾಜ್ಯಪಾಲರು ದೊಡ್ಡ ಪಕ್ಷಕ್ಕೆ ಸರ್ಕಾರ ರಚಿಸಲು ಅವಕಾಶ ನೀಡಿದ್ದು ಸರಿ. ಆದರೆ 15 ದಿನಗಳ ಕಾಲವಕಾಶ ನೀಡಿದ್ದು ನನಗೆ ವೈಯುಕ್ತಿಕವಾಗಿ ಸರಿಕಾಣುತ್ತಿಲ್ಲ. ಇದು ಶಾಸಕರ ಕುದುರೆ ವ್ಯಾಪಾರಕ್ಕೆ ಆಸ್ಪದ ನೀಡಿದಂತಾಗಲಿದೆ. ಸುಪ್ರೀಂ ಕೋರ್ಟ್ ನಾಳೆ ಸಂಜೆ ಒಳಗಾಗಿ ಬಹುಮತ ಸಾಬೀತಿಗೆ ಸೂಚಿಸಿರುವುದು ಸ್ವಾಗತಾರ್ಹ ವಿಚಾರ ಎಂದರು. ಎಸ್.ಆರ್. ಬೊಮ್ಮಾಯಿ ಪ್ರಕರಣದ ತೀರ್ಪಿನಂತೆ ರಾಜ್ಯಪಾಲರು ಕ್ರಮ ವಹಿಸಿದ್ದಾರೆ.

ರೆಸಾರ್ಟ್ ರಾಜಕಾರಣದಿಂದ ಏನು ಆಗೋಲ್ಲ. ಕೇವಲ ರೆಸಾರ್ಟ್ ಮಂದಿಗೆ ದುಡ್ಡಾಗಲಿದೆ ಅಷ್ಟೇ ಎಂದರು. ಲೋಕಾಯುಕ್ತ ಸಂಸ್ಥೆಯನ್ನು ಬಲಪಡಿಸುವ ಬಗ್ಗೆ ನನಗೆ ವಿಶ್ವಾಸ ಇಲ್ಲ. ನಾನು ನೀಡಿದ  ವರದಿಯನ್ನು ಆಗ ಬಿಜೆಪಿ ಸರ್ಕಾರ ಜಾರಿಗೆ ತರಲಿಲ್ಲ. ಜಾರಿಗೆ ತರುತ್ತೇವೆ ಎಂದು ಬಳ್ಳಾರಿ ತನಕ ಪಾದಯಾತ್ರೆ ಮಾಡಿ ಅಧಿಕಾರಕ್ಕೆ ಬಂದರೂ ಕಾಂಗ್ರೆಸ್ ಸರ್ಕಾರ ಮಾಡಲಿಲ್ಲ. ಬದಲಿಗೆ ಲೋಕಾಯುಕ್ತದ ಪ್ರಮುಖ ಎರಡು ಅಧಿಕಾರದ ಪೈಕಿ ಒಂದನ್ನು ಮೊಟಕು ಮಾಡಿದ್ದಾರೆ. ಹೊಸ ಸರ್ಕಾರ ಯಾರೇ ಬರಲಿ ಲೋಕಾಯುಕ್ತ ಸಂಸ್ಥೆ ಬಲಪಡಿಸಬೇಕು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸರ್ಕಾರಗಳ ಆಡಳಿತ ಶುದ್ಧವಾಗಿರಬೇಕಾದರೆ ರಾಜ್ಯದಲ್ಲಿ ಲೋಕಾಯುಕ್ತ, ಕೇಂದ್ರದಲ್ಲಿ ಲೋಕಪಾಲ ಸದೃಢವಾಗಿರಬೇಕು ಎಂದು ತಿಳಿಸಿದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: