ಪ್ರಮುಖ ಸುದ್ದಿ

ಬಂಟರ ವಾರ್ಷಿಕ ಕ್ರೀಡೋತ್ಸವ : ನಮ್ಮ ಕ್ರೀಡಾಕೂಟಕ್ಕೂ ಅನುದಾನ ಬೇಕು : ಬಂಟರ ಸಂಘ ಮನವಿ

ರಾಜ್ಯ(ಮಡಿಕೇರಿ) ಮೇ 18 :- ಕೊಡಗು ಜಿಲ್ಲಾ ವ್ಯಾಪ್ತಿಯಲ್ಲಿ ನೆಲೆಸಿರುವ ಬಂಟರ ಸಮೂಹದ ಸಂಘಟನೆಗೆ  ಪೂರಕವಾಗಿ ವರ್ಷಂಪ್ರತಿ ನಡೆಯುತ್ತಿರುವ ಜಿಲ್ಲಾ ಮಟ್ಟದ ಬಂಟರ ವಾರ್ಷಿಕ ಕ್ರೀಡೋತ್ಸವ ‘ಜಿಲ್ಲಾ ಬಂಟ್ರೆ ಗೊಬ್ಬುದ ಐಸಿರ-2018’ಕ್ಕೆ ಸರ್ಕಾರದಿಂದ ಮುಂದಿನ ಸಾಲಿನಲ್ಲಿ 10 ರಿಂದ 15 ಲಕ್ಷ ರೂ. ಅನುದಾನವನ್ನು ಕೋರಲು ಮುಂದಾಗುವ ಅಗತ್ಯವಿದೆ ಎಂದು ಕೊಡಗು ಜಿಲ್ಲಾ ಬಂಟರ ಸಂಘದ ಅಧ್ಯಕ್ಷರಾದ ಬಿ.ಡಿ.ನಾರಾಯಣ ರೈ ಅಭಿಪ್ರಾಯಪಟ್ಟಿದ್ದಾರೆ.

ವೀರಾಜಪೇಟೆ ತಾಲೂಕಿನ ನೀಲುಮಾಡು ಹೋಬಳಿ ಬಂಟರ ಸಂಘದ ವತಿಯಿಂದ ನಗರದ ಜ.ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಬಂಟರ ವಾರ್ಷಿಕ ಕ್ರೀಡೋತ್ಸವದ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು  ಮಾತನಾಡಿ,  ಜಿಲ್ಲೆಯಲ್ಲಿ ನಡೆಯುತ್ತಿರುವ ವಿವಿಧ ಸಮುದಾಯಗಳ ಕ್ರೀಡಾಕೂಟಕ್ಕೆ ಸರ್ಕಾರದ ನೆರವನ್ನು ಆಯಾ ಸಮುದಾಯಗಳು ಪಡೆಯುತ್ತಿವೆ. ಈ ಹಿನ್ನೆಲೆಯಲ್ಲಿ ಬಂಟರ ಕ್ರಿಡಾಕೂಟಕ್ಕೂ ನೆರವು ದೊರಕಬೇಕೆಂದು ತಿಳಿಸಿದರು. ಜಿಲ್ಲೆಯ ವಿವಿಧೆಡೆಗಳಲ್ಲಿ ನೆಲೆಸಿರುವ ಬಂಟರ ಸಮುದಾಯ ಬಾಂಧವರು ಕ್ರೀಡಾಕೂಟದಲ್ಲಿ ಪಾಲ್ಗೊಳ್ಳುವ ಮೂಲಕ ತಮ್ಮ ಸಮುದಾಯ ಸಂಘಟಿತವಾಗಿ ಶಕ್ತಿಯುತವಾಗಿರುವುದನ್ನು ತೋರಿಸಿಕೊಳ್ಳುವ ಅಗತ್ಯತೆ ಇದೆ. ಇಲ್ಲಿಯವರೆಗೆ ಬಂಟರ ಸಮೂಹ ಸರ್ಕಾರದಿಂದ ನಿರೀಕ್ಷಿತ ಸೌಲಭ್ಯಗಳನ್ನು ಪಡೆದುಕೊಂಡಿಲ್ಲ, ಈ ಹಿನ್ನೆಲೆಯಲ್ಲಿ ನಾವೆಲ್ಲ ಸಂಘಟಿತವಾಗಿ ನಮ್ಮ ಹಕ್ಕುಗಳನ್ನು ಪಡೆದುಕೊಳ್ಳುವುದು ಅಗತ್ಯವೆಂದರು. ಮಡಿಕೇರಿ ತಾಲೂಕು ಬಂಟರ ಸಂಘದ ಅಧ್ಯಕ್ಷರಾದ ರಮೇಶ್ ರೈ ಮಾತನಾಡಿ, 5ನೇ ವರ್ಷದ ಬಂಟರ ಸಂಘದ ಕ್ರೀಡಾಕೂಟದ ಯಶಸ್ಸಿಗೆ ಜಿಲ್ಲೆಯ ಬಂಟರ ಸಮುದಾಯ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸುವಂತೆ ಮನವಿ ಮಾಡಿದರು. ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಉದ್ಯಮಿ ಗಿರೀಶ್ ರೈ ಮಾತನಾಡಿ, ಬಂಟರ ಸಮುದಾಯ ಬಾಂಧವರು ಇಂತಹ ಕ್ರೀಡಾಕೂಟಗಳ ಆಯೋಜನೆ ಮಾತ್ರವಲ್ಲ. ಜಿಲ್ಲೆಯ ಅಭಿವೃದ್ಧಿಗೆ ಪೂರಕವಾದ ಸ್ವಚ್ಛತಾ ಕಾರ್ಯ ಸೇರಿದಂತೆ ಪೂರಕವಾದ ವಿವಿಧ ಕಾರ್ಯಕ್ರಮಗಳನ್ನು ನಡೆಸಬೇಕೆಂದು ಆಶಯ ವ್ಯಕ್ತಪಡಿಸಿದರು. ರಾಜ್ಯದ ವಿಧಾನಸಭಾ ಚುನಾವಣೆಯಲ್ಲಿ ಬಂಟರ ಸಮೂಹದ ಐವರು ಶಾಸಕರಾಗಿ ಆಯ್ಕೆಯಾಗಿದ್ದಾರೆ. ಹೀಗೆ ರಾಜಕೀಯ ಸ್ಥಾನಮಾನಗಳನ್ನು ಸಮುದಾಯ ಬಾಂಧವರು ಪಡೆಯುವ ಮೂಲಕ ಸಮುದಾಯದ ಅಭಿವೃದ್ಧಿಗೆ ಶ್ರಮಿಸಬೇಕೆಂದು ಅಭಿಪ್ರಾಯಿಸಿ, ಮುಂಬರುವ ದಿನಗಳಲ್ಲಿ ಕೊಡಗಿನಿಂದಲೂ ಬಂಟರ ಸಮುದಾಯದಿಂದ ಶಾಸಕರಾಗಿ ಆಯ್ಕೆಯಾಗಬೇಕು ಎನ್ನುವ ಆಶಯವನ್ನು ವ್ಯಕ್ತಪಡಿಸಿದರು.

ಮಡಿಕೇರಿ ಮಹಿಳಾ ಬಂಟರ ಸಂಘದ ಗೌರವ ಅಧ್ಯಕ್ಷರಾದ ಸಾವಿತ್ರಿ ಉದಯ ಕುಮಾರ್ ಶೆಟ್ಟಿ ಮಾತನಾಡಿ, ನೀಲುಮಾಡು ಹೋಬಳಿ ಬಂಟರ ಸಂಘ ಕ್ರೀಡಾಕೂಟ ಆಯೋಜನೆಗೆ ಸಾಕಷ್ಟು ಶ್ರಮ ವಹಿಸಿರುವ ಬಗ್ಗೆ ಮೆಚ್ಚುಗೆಯ ನುಡಿಗಳನ್ನಾಡಿದರು.

ನಗರದ ಉದ್ಯಮಿ ಜಗದೀಶ್ ರೈ ಅವರು ಜ್ಯೋತಿ ಬೆಳಗುವ ಮೂಲಕ ಮೂರು ದಿನಗಳ ಕಾಲ ನಡೆಯುವ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು.

ಸಮಾರಂಭದ ಅಧ್ಯಕ್ಷತೆಯನ್ನು ನೀಲುಮಾಡುಗುತ್ತು ಯಜಮಾನರಾದ ದೇವಪ್ಪ ರೈ, ಮಡಿಕೇರಿ ನಗರ ಬಂಟರ ಸಂಘದ ಅಧ್ಯಕ್ಷರಾದ ಕೃಷ್ಣ ಶೆಟ್ಟಿ , ಮಡಿಕೆರಿ ತಾಲ್ಲೂಕು ತುಳು ಒಕ್ಕೂಟದ ಅಧ್ಯಕ್ಷರಾದ ಪ್ರಭು ರೈ, ಮಡಿಕೇರಿ ಮಹಿಳಾ ಬಂಟರ ಸಂಘದ  ಗೌರವ ಅಧ್ಯಕ್ಷರಾದ ವಿಜಯಲಕ್ಷ್ಮಿ ರವಿ, ಕಾರ್ಯದರ್ಶಿ ರುಕ್ಮಿಣಿ ರೈ, ಗೌರವ ಅಧ್ಯಕ್ಷರಾದ ಸಾವಿತ್ರಿ ಉದಯ ಕುಮಾರ್ ಶೆಟ್ಟಿ, ಜಿಲ್ಲಾ ಬಂಟರ ಸಂಘದ ಸಹ ಕಾರ್ಯದರ್ಶಿ ಬಿ.ಸಿ, ಹರೀಶ್ ರೈ ಮೊದಲಾದ ಗಣ್ಯರು ಪಾಲ್ಗೊಂಡಿದ್ದರು. ನೀಲುಮಾಡು ಹೋಬಳಿ ಬಂಟರ ಸಂಘದ ಕ್ರೀಡಾ ಆಯೋಜನ ಸಮಿತಿ ಅಧ್ಯಕ್ಷರಾದ ಬಿ.ಎಸ್. ಲೀಲಾಧರ ರೈ ಸ್ವಾಗತಿಸಿ, ಜಯಶಂಕರ್ ರೈ ವಂದಿಸಿದರು. (ಕೆಸಿಐ,ಎಸ್.ಎಚ್)

Leave a Reply

comments

Related Articles

error: