ಪ್ರಮುಖ ಸುದ್ದಿ

ಬಿ.ಎಸ್.ಯಡಿಯೂರಪ್ಪನವರ ಗೆಲುವಿಗೆ ಪ್ರಾರ್ಥಿಸಿ ವಿಶೇಷ ಪೂಜೆ ಸಲ್ಲಿಕೆ

ರಾಜ್ಯ(ತುಮಕೂರು)ಮೇ.19:- ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ವಿಧಾನಸಭೆಯಲ್ಲಿ ಬಹುಮತ ಸಾಬೀತು ಪಡಿಸುವ ಸವಾಲು ಸುಸೂತ್ರವಾಗಿ ನಡೆದು ವಿಶ್ವಾಸಮತ ಸಾಬೀತುಪಡಿಸುವಲ್ಲಿ ಗೆಲುವು ಸಾಧಿಸಲಿ ಎಂದು ಪ್ರಾರ್ಥಿಸಿ ಯಡಿಯೂರಪ್ಪನವರ ಮನೆದೇವರಾದ ಎಡೆಯೂರಿನ ಶ್ರೀ ಸಿದ್ದಲಿಂಗೇಶ್ವರ ಸ್ವಾಮಿ ದೇವಾಲಯದಲ್ಲಿಂದು ವಿಶೇಷ ಪೂಜೆ ನೆರವೇರಿಸಲಾಯಿತು.

ಯಡಿಯೂರಪ್ಪನವರ ಪುತ್ರಿ ಉಮಾದೇವಿ ಅವರು ಇಂದು ಬೆಳಿಗ್ಗೆಯೇ ಎಡೆಯೂರಿಗೆ ತೆರಳಿದ್ದು, ಬೆಳಿಗ್ಗೆ 6 ಗಂಟೆಯಿಂದಲೇ ದೇವಾಲಯದಲ್ಲಿ ವಿಶೇಷ ಪೂಜಾ ಕೈಂಕರ್ಯಗಳನ್ನು ನಡೆಸುತ್ತಿದ್ದಾರೆ. ಯಡಿಯೂರಪ್ಪನವರ ಮನೆದೇವರಾದ ಸಿದ್ದಲಿಂಗೇಶ್ವರಸ್ವಾಮಿಗೆ ವಿಶೇಷ ಅಭಿಷೇಕ, ಮಹಾರುದ್ರಯಾಗ, ಸಂಕಲ್ಪ ವ್ರತ್ರಗಳನ್ನು ನೆರವೇರಿಸಲಾಗಿದ್ದು, ಈ ಪೂಜಾ ಕಾರ್ಯದಲ್ಲಿ ಉಮಾದೇವಿ ಅವರ ಜತೆಗೆ ಬಿಜೆಪಿ ಪಕ್ಷದ ಕಾರ್ಯಕರ್ತರು ಪಾಲ್ಗೊಂಡಿದ್ದು, ತಮ್ಮ ನೆಚ್ಚಿನ ನಾಯಕ ಯಡಿಯೂರಪ್ಪನವರು ಇಂದು ವಿಧಾನಸಭೆಯಲ್ಲಿ ವಿಶ್ವಾಸಮತ ಯಾಚನೆಯಲ್ಲಿ ಯಶ ಕಂಡು ಮುಖ್ಯಮಂತ್ರಿ ಸ್ಥಾನ ಉಳಿಸಿಕೊಳ್ಳುವ ಜತೆಗೆ ರಾಜ್ಯದಲ್ಲಿ ಬಿಜೆಪಿ ಸರ್ಕಾರವನ್ನು ಉಳಿಸಿಕೊಳ್ಳಲಿ ಎಂದು ದೇವರಲ್ಲಿ ಪ್ರಾರ್ಥಿಸಿದ್ದಾರೆ. ಎಡೆಯೂರಿನ ಶ್ರೀ ಸಿದ್ದಲಿಂಗೇಶ್ವರ ಸ್ವಾಮಿ ದೇವಾಲಯದಲ್ಲಿ ಬೆಳಿಗ್ಗೆಯಿಂದಲೇ ವಿವಿಧ ಮಠಾಧೀಶರುಗಳು ಹಾಗೂ ಯಡಿಯೂರಪ್ಪನವರ ನೂರಾರು ಅಭಿಮಾನಿಗಳು ಜಮಾಯಿಸಿದ್ದು, ಧಾರ್ಮಿಕ ಪೂಜಾ ಕೈಂಕರ್ಯದಲ್ಲಿ ತೊಡಗಿರುವುದು ಕಂಡು ಬರುತ್ತಿದೆ.ಇಂದು ಸಂಜೆವರೆಗೂ ವಿಶೇಷ ಪೂಜಾ ಕೈಂಕರ್ಯಗಳು ನೆರವೇರಲಿವೆ ಎಂದು ಮೂಲಗಳು ತಿಳಿಸಿವೆ.

ಪ್ರಕಾಶ್ , ಗುರುಮೂರ್ತಿ , ಎ.ಬಿ. ನಾಗರಾಜು , ಸೌಭಾಗ್ಯ ಜಯಣ್ಣ , ಸಿದ್ದೇಶ್, ನಾಗೇಂದ್ರ ಎಂಬ ಭಕ್ತರು ಸರ್ವ ಸೇವೆ ಹೆಸರಿನಲ್ಲಿ 7 ಸಾವಿರ ರೂ.ಗಳನ್ನು ದೇವಾಲಯಕ್ಕೆ ಪಾವತಿಸಿ ನಿನ್ನೆಯೇ ವಿಶೇಷ ಪೂಜಾ ಕೈಂಕರ್ಯದ ರಶೀದಿ ಪಡೆದಿದ್ದರು. ದೇವಾಲಯದ ಪ್ರಧಾನ ಅರ್ಚಕರಾದ ವೈ.ಎಸ್. ಶಿವಮೂರ್ತಿ ಅವರ ಮಾರ್ಗದರ್ಶನದಲ್ಲಿ ಪಾರು ಪತ್ತೇದಾರರಾದ ಸೋಮಶೇಖರಯ್ಯ, ದಯಾನಂದ, ಕೃಪೇಶ್, ಚಂದ್ರಶೇಖರ್ ಹಾಗೂ ಆಗಮಿಕರಾದ ಸುರೇಶ್, ಉಮಾಪತಿ ಶರ್ಮ, ರಮೇಶ್, ರುದ್ರಯ್ಯ ಹಾಗೂ ಬಸವರಾಧ್ಯ ವಿಶೇಷ ಪೂಜೆಯಲ್ಲಿ ಭಾಗವಹಿಸಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: