ಮೈಸೂರು

ಎಲ್‍ಇಡಿ ಬಲ್ಬ್ ಅಳವಡಿಕೆಗೆ ಸರಕಾರವೇ ಹಿಂದೇಟು ಹಾಕಿತು: ಮೇಯರ್

ತಮ್ಮ ಒಂದು ವರ್ಷದ ಆಡಳಿತಾವಧಿಗೆ ತೃಪ್ತಿ ವ್ಯಕ್ತಪಡಿಸಿರುವ ಮೇಯರ್ ಬಿ.ಎಲ್. ಭೈರಪ್ಪ, ನಗರದಲ್ಲಿ ಎಲ್‍ಇಡಿ ಬಲ್ಬ್ ಅಳವಡಿಸಿ ಮಾದರಿ ನಗರವನ್ನಾಗಿಸುವ ನಮ್ಮ ಉದ್ದೇಶಕ್ಕೆ ಸರಕಾರವೇ ಹಿಂದೇಟು ಹಾಕಿತು ಎಂದು ದೂರಿದರು.

ತಮ್ಮ ಅಧಿಕಾರವಧಿ ಪೂರೈಸಿದ ಹಿನ್ನೆಲೆಯಲ್ಲಿ ಸೋಮವಾರ ನಗರ ಪಾಲಿಕೆಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಮೈಸೂರು ನಗರದಲ್ಲಿ ಎಲ್‍ಇಡಿ ಬಲ್ಬ್ ಅಳವಡಿಸಿ ಮಾದರಿ ನಗರ ನಿರ್ಮಾಣ ಮಾಡಬೇಕು ಎಂಬ ಉದ್ದೇಶಕ್ಕೆ ಸರಕಾರವೇ ಹಿಂದೇಟು ಹಾಕಿತು. ಈ ಯೋಜನೆ ಜಾರಿಯಾಗಿದ್ದರೆ ಶೇ.60ರಷ್ಟು ವಿದ್ಯುತ್ ಉಳಿತಾಯವಾಗುತ್ತಿತ್ತು. ಅಲ್ಲದೇ, ವಾರ್ಷಿಕ 17 ಕೋಟಿ ವಿದ್ಯುತ್ ಬಿಲ್ ಮತ್ತು 4 ಕೋಟಿ ನಿರ್ವಹಣಾ ವೆಚ್ಚ ಭರಿಸಬೇಕಾದ ಹೊರೆ ಕಡಿಮೆ ಆಗುತ್ತಿತ್ತು. ತುಮಕೂರು ನಗರ ಪಾಲಿಕೆಗೆ ಒಪ್ಪಿಗೆ ನೀಡಿ, ಮೈಸೂರಿಗೆ ಒಪ್ಪದಿರುವುದು ಸರಕಾರದ ನಿರ್ಲಕ್ಷ್ಯವನ್ನು ತೋರಿಸುತ್ತದೆ ಎಂದು ಹೇಳಿದರು.

ನನ್ನ ಆಡಳಿತ ಅವಧಿಯಲ್ಲಿ ಖಾತೆ, ನಕ್ಷೆ, ವಾಣಿಜ್ಯ ರಹದಾರಿ ನೀಡಿಕೆಯನ್ನು ಸರಳೀಕರಣಗೊಳಿಸಿ ಆನ್‍ಲೈನ್ ವ್ಯವಸ್ಥೆ ಜಾರಿಗೆ ತರಲಾಯಿತು. ಹಿಂದಿನವರು ಹಾಕಿಕೊಟ್ಟ ಮಾರ್ಗದರ್ಶನದಂತೆ ಆಡಳಿತ ನಡೆಸಿದ್ದೇನೆ. ನಗರ ಪಾಲಿಕೆ ಇತಿಹಾಸದಲ್ಲೇ ಮೊದಲ ಬಾರಿಗೆ ಎಂಡಿಎನ 22 ಸಿಎ ನಿವೇಶನ ಪಡೆದು ಆಹಾರ ವಲಯ, ಶೌಚಾಲಯ, ಗ್ರಂಥಾಲಯ, ಆಟದ ಮೈದಾನ, ವಲಯ ಕಚೇರಿ ನಿರ್ಮಾಣಕ್ಕೆ ಬಳಸಿಕೊಳ್ಳಲಾಗುತ್ತಿದೆ.

ನೂತನ ಸಿಡಿಪಿ ಅನ್ವಯ ನಗರದ ನಾಲ್ಕು ಭಾಗದಲ್ಲಿ ತ್ಯಾಜ್ಯ ವಿಲೇವಾರಿ ಘಟಕ ತೆರೆಯಲು 50 ಎಕರೆ ಕಾಯ್ದಿರಿಸಲಾಗಿದೆ. ಜಿಲ್ಲಾಡಳಿತವೂ ನಗರದ 5 ಕಡೆ ಡಬ್ರಿಸ್ ವಿಲೇವಾರಿಗೆ ಸ್ಥಳಾವಕಾಶ ನೀಡಿದೆ. ಪುರಭವನ ಕಾಮಗಾರಿ ಬಹುಪಾಲು ಪೂರ್ಣಗೊಂಡಿದೆ ಎಂದರು.

Leave a Reply

comments

Related Articles

error: