ಕರ್ನಾಟಕಪ್ರಮುಖ ಸುದ್ದಿ

ಶ್ರೀ ಮಹಾಂತ ಶಿವಯೋಗಿ ಸ್ವಾಮೀಜಿ ವಿಧಿವಶ

ಬಾಗಲಕೋಟೆ,ಮೇ 19-‘ಮಹಾಂತ ಜೋಳಿಗೆಯ ಹರಿಕಾರ’ ಎಂದೇ ಖ್ಯಾತರಾಗಿದ್ದ ಇಳಕಲ್ ನ ವಿಜಯ ಮಹಾಂತೇಶ ಪೀಠದ ಶ್ರೀ ಮಹಾಂತ ಶಿವಯೋಗಿ ಸ್ವಾಮೀಜಿ (90) ಅನಾರೋಗ್ಯದಿಂದ ಇಂದು (ಶನಿವಾರ) ನಿಧನರಾದರು.

ಬೆಳಗಾವಿಯ ಕೆಎಲ್​ಇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದರು. ಚಿತ್ತರಗಿ, ಇಳಕಲ್ ವಿಜಯಮಹಾಂತೇಶ್ವರ ಮಠದ 19ನೇ ಪೀಠಾಧಿಪತಿಗಳಾಗಿದ್ದ ಸ್ವಾಮೀಜಿ ಕರ್ನಾಟಕ ವಿಶ್ವ ವಿದ್ಯಾಲಯದಿಂದ ಗೌರವ ಡಾಕ್ಟರೇಟ್​ ಪಡೆದಿದ್ದರು. ಬಸವಶ್ರೀ ಸೇರಿ ಕೆಲವು ಪ್ರಶಸ್ತಿ ಪುರಸ್ಕೃತರಾಗಿದ್ದರು.

ಇವರ ಜನ್ಮದಿನವನ್ನು ರಾಜ್ಯ ಸರ್ಕಾರ ವ್ಯಸನಮುಕ್ತ ದಿನ ಎಂದು ಘೋಷಿಸಿತ್ತು. 48 ವರ್ಷಗಳಿಂದ ಮಠಾಧೀಶರಾಗಿದ್ದ ಅವರು ಜನರ ದುಶ್ಚಟಗಳನ್ನು ದೂರವಾಗಿಸಲು ಮಹಾಂತ ಜೋಳಿಗೆ ಎಂಬ ಚಿಂತನೆ ಜಾರಿಗೊಳಿಸಿದ್ದರು. ಸಾವಿರಾರು ಜನರು ಸ್ವಾಮೀಜಿಯವರಿಂದ ಪ್ರೇರಿತರಾಗಿ ದುಶ್ಚಟ ಬಿಟ್ಟಿದ್ದರು.

ಶ್ರೀಗಳ ಪಾರ್ಥಿವ ಶರೀರ ಇಂದು ಸಂಜೆ 6 ಗಂಟೆಗೆ ಆಸ್ಪತ್ರೆಯಿಂದ ಆಗಮಿಸಲಿದ್ದು, ಶ್ರೀಮಠದಲ್ಲಿ ಇಡಲಾಗುತ್ತದೆ. ಭಾನುವಾರ ಬೆಳಿಗ್ಗೆ 8ಕ್ಕೆ ಭಕ್ತರ ದರ್ಶನಕ್ಕೆ ಅನುವು ಮಾಡಿಕೊಡಲಾಗುವುದು. ಬೆಳಿಗ್ಗೆ 9ಕ್ಕೆ ವಿಜಯಮಹಾಂತರ ಕರ್ತೃ ಗದ್ದುಗೆಯಲ್ಲಿ ಅಂತ್ಯಸಂಸ್ಕಾರ ನೆರವೇರಲಿದೆ. (ಎಂ.ಎನ್)

Leave a Reply

comments

Related Articles

error: