ಮೈಸೂರು

ನ್ಯಾಯಾಲಯಕ್ಕೆ ವಿಚಾರಣೆಗೆ ಕರೆದೊಯ್ದ ವೇಳೆ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ಖೈದಿ ಪರಾರಿ

ಮೈಸೂರು,ಮೇ.22:- ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ಖೈದಿಯೋರ್ವ ವಿಚಾರಣೆಗೆ ಕರೆದೊಯ್ದ ವೇಳೆ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ಪರಾರಿಯಾದ ಘಟನೆ ನಡೆದಿದೆ.

ಕೊಲೆ ಪ್ರಕರಣದಲ್ಲಿ ಜೀವಾವವಧಿ ಶಿಕ್ಷೆಗೆ ಗುರಿಯಾಗಿದ್ದ ಚಾಮರಾಜನಗರ ತಾಲೂಕು ಗಾಳಿಪುರ ಗ್ರಾಮದ ನಿವಾಸಿ ರಫೀಕ್ ಅಲಿಯಾಸ್ ಚಂಪೀ ರಫೀಕ್(35) ಎಂಬಾತನನ್ನು ಚಾಮರಾಜನಗರ ನ್ಯಾಯಾಲಯಕ್ಕೆ ವಿಚಾರಣೆಗಾಗಿ ಕರೆದೊಯ್ಯಲಾಗಿತ್ತು. ಈತ ಹಲವು ಕಳವು ಪ್ರಕರಣಗಳಲ್ಲಿಯೂ ಭಾಗಿಯಾಗಿದ್ದ. ಕಳುವು ಪ್ರಕರಣಕ್ಕೆ ಸಂಬಂಧಿಸಿದಂತೆ ಈತನನ್ನು ವಿಚಾರಣೆಗೆ ಕರೆದೊಯ್ಯಲಾಗಿತ್ತು. ಪೊಲೀಸ್ ಕಾನ್ಸಟೇಬಲ್ ಗಳಾದ ರಮೇಶ್ ನಾಯಕ ಮತ್ತು ಸತೀಶ್ ಭದ್ರತೆಯಲ್ಲಿ ಕರೆದೊಯ್ದಿದ್ದರು. ನಿನ್ನೆ ನ್ಯಾಯಾಲಯಕ್ಕೆ 10.30ಕ್ಕೆ ಹಾಜರುಪಡಿಸಿದ ಬಳಿಕ ನ್ಯಾಯಾಧೀಶರು ವಿಚಾರಣೆಯನ್ನು ಮುಂದೂಡಿದ್ದರು. ಮೈಸೂರು ಬಸ್ ಹತ್ತಲು ಪೊಲೀಸ್ ಇಬ್ಬರೂ ಚಾಮರಾಜನಗರ ಬಸ್ ನಿಲ್ದಾಣಕ್ಕೆ ಕರೆತಂದರು. ಈ ವೇಳೆ ಮೂತ್ರ ವಿಸರ್ಜನೆಗೆ ಹೋಗಬೇಕೆಂದು ಕೇಳಿದಾಗ ಕಳುಹಿಸಿಕೊಟ್ಟಿದ್ದರು. ಇದೇ ಸಮಯ ನೋಡಿ ಖೈದಿ ಅಲ್ಲಿಂದ ಕಾಲ್ಕಿತ್ತಿದ್ದಾನೆ. ಎಷ್ಟು ಹೊತ್ತಾದರೂ ಬಾರದಿದ್ದಾಗ ಶೌಚಾಲಯಕ್ಕೆ ತೆರಳಿ ಹುಡುಕಿದ್ದಾರೆ. ಆದರೆ ಅಷ್ಟರಲ್ಲಾಗಲೇ ಆತ ಪರಾರಿಯಾಗಿದ್ದ. ಚಾಮರಾಜನಗರ ಪೊಲೀಸರಿಗೆ ಮಾಹಿತಿ ನೀಡಿ ಹುಡುಕಾಟ ಮುಂದುವರಿಸಿದ್ದಾರೆ. ಆದರೆ ಎಷ್ಟು ಹುಡುಕಿದರೂ ಸಿಗಲಿಲ್ಲ ಎನ್ನಲಾಗಿದೆ. ಚಾಮರಾಜನಗರ ಠಾಣೆಯಲ್ಲಿ ಮೈಸೂರು ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಈತ ತಪ್ಪಿಸಿಕೊಳ್ಳುವುದರಲ್ಲಿ ನಿಸ್ಸೀಮನಾಗಿದ್ದು, ಈ ಹಿಂದೆ ನಂಜನಗೂಡಿನ ನ್ಯಾಯಾಲಯಕ್ಕೆ ತೆರಳಿದಾಗಲೂ ಪೊಲೀಸರ ಕೈಯ್ಯಿಂದ ತಪ್ಪಿಸಿಕೊಮಡಿದ್ದ. ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಪೊಲೀಸರು ಅಮಾನತುಗೊಂಡಿದ್ದರು. ನಂಜನಗೂಡು ಪೊಲೀಸರಿಗೆ ತಮಿಳುನಾಡಿನಲ್ಲಿ ಬಹಳ ಸಮಯದ ನಂತರ ಸೆರೆ ಸಿಕ್ಕಿದ್ದ. ಈಗ ಚಾಮರಾಜನಗರದಿಂದ ತಪ್ಪಿಸಿಕೊಂಡಿರುವುದು ಮತ್ತೆ ಪೊಲೀಸರ ನಿದ್ದೆಗೆಡಿಸಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: