ಕರ್ನಾಟಕಪ್ರಮುಖ ಸುದ್ದಿಮೈಸೂರು

ಮೈಸೂರು ವಿವಿ ಘಟಿಕೋತ್ಸವ ರದ್ದಾಗಲಿ, ಕುಲಪತಿಯನ್ನು ಅಮಾನತುಗೊಳಿಸಿ: ಗೋ.ಮಧುಸೂದನ್ ಆಗ್ರಹ

ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಡಿ.13ರಂದು ಆಯೋಜಿಸಿರುವ ಘಟಿಕೋತ್ಸವವನ್ನು ರದ್ದುಗೊಳಿಸಿ, ಕುಲಪತಿ ಕೆ.ಎಸ್.ರಂಗಪ್ಪ ಅವರನ್ನು ಸ್ಥಾನದಿಂದ ಅಮಾನತುಗೊಳಿಸಿ. ಕರ್ನಾಟಕ ಮುಕ್ತ ವಿವಿಯ ಪ್ರಕರಣವನ್ನು ಸಿಬಿಐ ತನಿಖೆಗೊಳಪಡಿಸಿ. ಎನ್ನುವ ಮೂರು ಪ್ರಮುಖ ಬೇಡಿಕೆಗಳ ಈಡೇರಿಕೆಗೆ ಮಾಜಿ ವಿಧಾನ ಪರಿಷತ್ ಸದಸ್ಯ ಗೋ.ಮಧುಸೂದನ ಆಗ್ರಹಿಸಿದರು.

rangappa-webಅವರು, ಮಂಗಳವಾರ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿ, ಭ್ರಷ್ಟ ಕೆ.ಎಸ್. ರಂಗಪ್ಪನಂತವರೊಂದಿಗೆ ವೇದಿಕೆ ಹಂಚಿಕೊಳ್ಳುವುದು ರಾಜ್ಯಪಾಲರ ಘನತೆಗೆ ಧಕ್ಕೆಯಾಗಲಿದ್ದು ಘಟಿಕೋತ್ಸವದಲ್ಲಿ ಪಾಲ್ಗೊಳ್ಳದಂತೆ ರಾಜ್ಯಪಾಲ ವಜುಬಾಯಿವಾಲ ಅವರಿಗೆ ಪತ್ರದ ಮೂಲಕ ಮನವಿ ಮಾಡಲಾಗಿದೆ. ಕರ್ನಾಟಕ ಮುಕ್ತ ವಿಶ್ವವಿದ್ಯಾನಿಲಯಗಳಲ್ಲಿ ಎಂಬಿಎ, ಎಂಟೆಕ್, ಬಿಟೆಕ್ ಹಾಗೂ ಇತರೆ ಪದವಿಯ ಸುಮಾರು 3.25ಲಕ್ಷ ವಿದ್ಯಾರ್ಥಿಗಳ ಜೀವನದೊಂದಿಗೆ ಆಟವಾಡಿ ಸುಮಾರು 950 ಕೋಟಿ ರೂಪಾಯಿ ಅವ್ಯವಹಾರ ನಡೆಸಿದ್ದಾರ. ಈಗಾಗಲೇ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯಪಾಲರೇ ಮೊಕದ್ದಮೆಗೆ ಆದೇಶಿಸಿದ ಹಿನ್ನೆಲೆಯಲ್ಲಿ ರಂಗಪ್ಪ ಅವರು ಸೇರಿದಂತೆ ಪ್ರಕರಣದಲ್ಲಿ ಭಾಗಿಯಾದ ಇತರೆ ಅಧಿಕಾರಿಗಳ ವಿರುದ್ಧ ಕೇಸ್ ದಾಖಲಾಗಿದ್ದು, ಹಗರಣಕ್ಕೆ ಸಂಬಂಧಿಸಿದಂತೆ ಕೂಲಂಕುಷವಾಗಿ ಸಿಬಿಐಯಿಂದ ತನಿಖೆ ನಡೆಸಬೇಕು ಎಂದು ಒತ್ತಾಯಿಸಿ ರಾಜ್ಯಪಾಲರಿಗೆ ಪತ್ರ ಬರೆದಿರುವುದಾಗಿ ತಿಳಿಸಿದರು.

ಮೈಸೂರು ಸಂಸ್ಥಾನದ ನಾಲ್ವಡಿ ಕೃಷ್ಣರಾಜ ಒಡೆಯರು, ಸರ್.ಎಂ.ವಿಶ್ವೇಶ್ವರಯ್ಯನಂತ ಮಹಾನೀಯರು ದ್ಯೇಯೋದ್ದೇಶಗಳೆಲ್ಲ ಗಾಳಿಗೆ ತೂರಿದಂತಾಗಿದೆ. ರಾಷ್ಟ್ರಕವಿ ಕುವೆಂಪು ಅವರಂತಹ ಶ್ರೇಷ್ಠರು ಅಲಂಕರಿಸಿದ ಸ್ಥಾನವನ್ನೂ ಇಂದು ಕೆ.ಎಸ್.ರಂಗಪ್ಪ ಕಲುಷಿತಗೊಳಿಸಿದ್ದಾರೆ. ಶತಮಾನೋತ್ಸವ ಕಂಡ ವಿವಿಯೂ ಭ್ರಷ್ಟ ಕುಲಪತಿಯಿಂದ ತಲೆತಗ್ಗಿಸುವಂತಾಗಿದ್ದು, ವಿದ್ಯಾರ್ಥಿಗಳಿಗೇನು ಆದರ್ಶ ತುಂಬುವರು? ಎಂದು ಖಾರವಾಗಿ ಪ್ರಶ್ನಿಸಿದರು.

ಮೈಸೂರು ವಿಶ್ವವಿದ್ಯಾಲಯದ ಭಷ್ಟ ಹಾಗೂ ಕಳಂಕಿತ ಕುಲಪತಿ ಕೆ.ಎಸ್.ರಂಗಪ್ಪ ಘಟಿಕೋತ್ಸವವನ್ನು ಏರ್ಪಡಿಸಿ ವಿದ್ಯಾರ್ಥಿಗಳಿಗೆ ಪದವಿ ಹಾಗೂ ಡಾಕ್ಟರೇಟ್ ನೀಡಲು ಹುನ್ನಾರ ನಡೆಸುತ್ತಿರುವುದು ಖಂಡನಾರ್ಹ. ಘಟಿಕೋತ್ಸವ ರದ್ದಾಗಬೇಕೆಂದು ಒತ್ತಾಯಿಸಿದರು. ವರ್ಷಕ್ಕೆರಡು ಭಾರಿ ಘಟಿಕೋತ್ಸವವನ್ನು ಆಯೋಜಿಸಿರುವುದು ವಿವಿಗಳ ಕಾನೂನಿಗೂ ವಿರುದ್ಧವಾಗಿದೆ. ಡಿ.3ರಂದು ಶತಮಾನೋತ್ಸವದ ಸವಿನೆನಪಿಗಾಗಿ ನಾಣ್ಯ ಬಿಡುಗಡೆಗೊಳಿಸುವ ಕಾರ್ಯಕ್ರಮಕ್ಕೆ ಕೇಂದ್ರ ಸಚಿವ ವೆಂಕಯ್ಯ ನಾಯ್ಡು ಬರಬೇಕಿತ್ತು. ವಿವಿಯ ಹಗರಣದ ಬಗ್ಗೆ ಮನವರಿಕೆಯಾದ ಹಿನ್ನೆಲೆಯಲ್ಲಿ ಗೈರಾದರು ಎಂದು ತಿಳಿಸಿ, ರಾಜ್ಯಪಾಲರು ಮುಖ್ಯಮಂತ್ರಿ ಸಿದ್ಧರಾಮಯ್ಯನವರಿಗೆ ಪ್ರಕರಣವನ್ನು ಸಿಬಿಐಗೆ ವಹಿಸಲು ಆದೇಶಿಸಿ ಕುಲಪತಿಯನ್ನು ಅಮಾನತುಗೊಳಿಸಬೇಕೆಂದು ಮನವಿ ಮಾಡಿದರು.

Leave a Reply

comments

Related Articles

error: