ಕರ್ನಾಟಕ

ಸಿಂಹ ಮೂವಿ ಪ್ಯಾರಡೈಸ್ ಜಿಲ್ಲೆಯಲ್ಲಿಯೇ ಉತ್ತಮ ಪ್ರಶಂಸೆಗೆ ಪಾತ್ರವಾಗಿದೆ : ಮಾಜಿ ಶಾಸಕ ಬಾಲರಾಜ್

ರಾಜ್ಯ(ಚಾಮರಾಜನಗರ) ಮೇ.23:- ಸಿನಿಮಾ ಮಂದಿರಗಳನ್ನು ಇಂದಿನ ದಿನಗಳಲ್ಲಿ ನಡೆಸುವುದು ಬಹಳ ಕಷ್ಟಕರವಾದ ವಿಷಯ. ಚಾಮರಾಜನಗರದ ಸಿಂಹ ಮೂವಿ ಪ್ಯಾರಡೈಸ್ ಜಿಲ್ಲೆಯಲ್ಲಿಯೇ ಉತ್ತಮ ಪ್ರಶಂಸೆಗೆ ಪಾತ್ರವಾಗಿದೆ ಎಂದು ಕೊಳ್ಳೇಗಾಲದ ಮಾಜಿ ಶಾಸಕ ಬಾಲರಾಜ್ ಅಭಿಪ್ರಾಯಪಟ್ಟರು.

ನಗರದ ಹೆಸರಾಂತ ಚಿತ್ರ ಮಂದಿರಗಳಲ್ಲಿ ಒಂದಾದ ಸಿಂಹ ಮೂವಿ ಪ್ಯಾರಡೈಸ್‍ನ 15ನೇ ವರ್ಷದ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ರಾಜ್‍ಕುಮಾರ್, ವಿಷ್ಣುವರ್ಧನ್, ಇನ್ನು ಮುಂತಾದ ಕಲಾವಿದರು ಚಲನ ಚಿತ್ರಕ್ಕೆ ಅವರ ಕೊಡುಗೆ ಬಹಳವಾಗಿದೆ. ಇಂತಹ ಮಹಾನುಭಾವರ ಚಿತ್ರಗಳನ್ನು ಪ್ರದರ್ಶಿಸಿ ಎಷ್ಟೋ ಚಿತ್ರಮಂದಿರಗಳು ಹೆಸರುವಾಸಿಯಾಗಿದೆ. ಅದೇ ರೀತಿ ಜಿಲ್ಲೆಯಲ್ಲಿ ಉತ್ತಮ ಚಿತ್ರಗಳನ್ನು ಪ್ರದರ್ಶನ ಮಾಡುತ್ತಿರುವ ಹೆಗ್ಗಳಿಕೆಗೆ ಸಿಂಹ ಮೂವಿ ಪ್ಯಾರಡೈಸ್ ಕಾರಣವಾಗಿದೆ ಎಂದು ತಿಳಿಸಿದರು.

15ವರ್ಷಗಳಿಂದ ವಾರ್ಷಿಕೋತ್ಸವ ಸಂದರ್ಭದಲ್ಲಿ ಜಿಲ್ಲೆಯ ಕಲಾವಿರು, ವೈದ್ಯರು, ಉದ್ಯಮಿಗಳನ್ನು ಗೌರವಿಸುತ್ತಿರುವುದು ಶ್ಲಾಘನೀಯವಾಗಿದೆ. ನಮ್ಮ ತಾಯಿಯವರು ಪ್ರಸೂತಿ ತಜ್ಞರಾಗಿ ಗ್ರಾಮೀಣ ಭಾಗದ ಜನರಿಗೆ ಮಾಡಿರುವ ಸೇವೆಯನ್ನು ಪರಿಗಣಿಸಿ ಗೌರವಿಸುತ್ತಿರುವುದು ಸಂತೋಷ ತಂದಿದೆ ಎಂದು ತಿಳಿಸಿದರು.

ಆಖಿಲ ಕರ್ನಾಟಕ ಡಾ.ರಾಜ್‍ಕುಮಾರ್ ಅಭಿಮಾನಿಗಳ ಸಂಘದ ಸಂಸ್ಥಾಪಕ ಅಧ್ಯಕ್ಷ ಎಂ.ರಾಮೇಗೌಡ ಮಾತನಾಡಿ ಕನ್ನಡ ಚಲನಚಿತ್ರ ಬೆಳೆಯ ಬೇಕಾದರೆ ಡಾ.ರಾಜ್‍ಕುಮಾರ್ ಅವರ ಕೊಡುಗೆ ಅಪಾರವಾದದ್ದು. ಕನ್ನಡಕ್ಕಾಗಿ ಗೋಕಾಕ್ ಚಳುವಳಿ ಇನ್ನುಮುಂತಾದ ಚಳುವಳಿಯಲ್ಲಿ ನಾನು ಅವರ ಜೊತೆ ಭಾಗವಹಿಸಿದ್ದೇನೆ ಇಂತಹ ಕಲಾವಿದರನ್ನು ಪಡೆದ ಚಾಮರಾಜನಗರ ಜಿಲ್ಲೆ ಕಲಾವಿದರ ತವರಾಗಿದೆ ಎಂದು ತಿಳಿಸಿದರು.

ಸಿಂಹ ಮೂವಿ ಪ್ಯಾರಡೈಸ್‍ನ ಮಾಲಿಕರಾದ ಎ.ಜಯಸಿಂಹ ಮಾತನಾಡಿ ನಮ್ಮ ಚಿತ್ರ ಮಂದಿರವು ಜಿಲ್ಲೆಗೆ ಮಾದರಿಯಾಗಿದೆ. ಸ್ವಚ್ಛತೆಯಲ್ಲಿ ಹಾಗೂ ಉತ್ತಮ ಚಲನ ಚಿತ್ರಗಳನ್ನು ಪ್ರದರ್ಶನಮಾಡುವುದರೊಂದಿಗೆ ಜನರ ಮೆಚ್ಚುಗೆಗೆ ಪಾತ್ರವಾಗಿದೆ. ಚಿತ್ರಮಂದಿರವು ಪ್ರಾರಂಭವಾಗಿ 15 ವರ್ಷಗಳು ಕಳೆದಿದ್ದರೂ ಸಾರ್ವಜನಿಕರ ಸಹಕಾರ ಬಹಳಷ್ಟು ಇದೆ. ಪ್ರತಿ ವರ್ಷವೂ ಸುಮಾರು ಐದಕ್ಕಿಂತ ಹೆಚ್ಚು ಕಾರ್ಯಕ್ರಮಗಳನ್ನು ಮಾಡುತ್ತ ಬಂದಿದೆ. ಸಂಕ್ರಾಂತಿ ಆಚರಣೆ, ಯುಗಾದಿ ಆಚರಣೆ ಇನ್ನು ಮುಂತಾದ ಹಬ್ಬಗಳನ್ನು ಚಿತ್ರ ಮಂದಿರದ ಮುಂಭಾಗದಲ್ಲಿ  ಆಚರಿಸಲಾಗುತ್ತಿದೆ. ಇದಕ್ಕೆ ನಮ್ಮ ತಂದೆ,ತಾಯಿಗಳ ಆಶೀರ್ವಾದ ನನ್ನ ಮೇಲೆ ಯಾವಾಗಲು ಇದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಅಖಿಲ ಕರ್ನಾಟಕ ಡಾ.ರಾಜ್‍ಕುಮಾರ್ ಅಭಿಮಾನಿಗಳ ಸಂಘದ ಸಂಸ್ಥಾಪಕ ಅಧ್ಯಕ್ಷ ಎಂ.ರಾಮೇಗೌಡ ಹಾಗೂ ಸಮಾಜ ಸೇವಕಿ ಪ್ರಸೂತಿ ತಜ್ಞರು ಯಳಂದೂರು ತಾಲೂಕು ಮದ್ದೂರಿನ ಲಕ್ಷ್ಮಮ್ಮ ಸಂಜೀವಯ್ಯ ಇವರನ್ನು ಸಿಂಹ ಮೂವಿ ಪ್ಯಾರಡೈಸ್‍ನ  ಮಾಲಿಕರಾದ ಎ.ಜಯಸಿಂಹ ಹಾಗೂ ಕುಟುಂಬದವರು ಗೌರವಿಸಿ ಸನ್ಮಾನಿಸಿದರು.

ಈ ಸಂದರ್ಭದಲ್ಲಿ ಚಲನಚಿತ್ರ ನಿರ್ಮಾಪಕ ಎಸ್.ಎ.ಶ್ರೀನಿವಾಸ್, ಚಲನಚಿತ್ರ ನಟ ಸೋಮಣ್ಣ, ಮಂಗಳಜಯಸಿಂಹ, ಜನಪದ ಕಲಾವಿದ ಸಿ.ಎಂ.ನರಸಿಂಹಮೂರ್ತಿ, ಗಾಯಕ ಮಧು, ಶಿವು ಇನ್ನು ಮುಂತಾದವರು ಕಾರ್ಯಕ್ರಮದಲ್ಲಿ ಹಾಜರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: