ಮೈಸೂರು

ಶಿಕ್ಷಣ ಸಂಸ್ಥೆಗಳು ಮಕ್ಕಳ ಜೀವನದ ಜೊತೆ ಆಟವಾಡಬಾರದು : ಮೊಹಮ್ಮದ್ ಮುಜಿರುಲ್ಲಾ ಸಿ.ಜಿ.

ಮೈಸೂರು,ಮೇ.23:- ಶಿಕ್ಷಣ ಸಂಸ್ಥೆಗಳು ಮಕ್ಕಳ ಜೀವನದ ಜೊತೆ ಆಟವಾಡಬಾರದು. ಮಕ್ಕಳ ಅಭಿವೃದ್ಧಿಗೆ ಪೂರಕವಾದ ಶಿಕ್ಷಣವನ್ನು ನೀಡುವಲ್ಲಿ ಪಾರದರ್ಶಕವಾಗಿ ಶ್ರಮಿಸಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಮೊಹಮ್ಮದ್ ಮುಜಿರುಲ್ಲಾ ಸಿ.ಜಿ.ತಿಳಿಸಿದರು.

ಕಲಾಮಂದಿರದಲ್ಲಿಂದು ಜಿಲ್ಲಾಡಳಿತ, ಜಿಲ್ಲಾಪಂಚಾಯತ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ಅನುದಾನ ರಹಿತ ಶಾಲೆಗಳಲ್ಲಿ ಶುಲ್ಕನಿಗದಿ ಮತ್ತು ಆರ್ ಟಿಇ ಕಾಯ್ದೆಗಳ ಬಗ್ಗೆ ಕಾನೂನು ಅರಿವು ನೆರವು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.  ಅನುದಾನಿತ ಶಾಲೆಗಳು ಸಮಾಜದಲ್ಲಿ ಒಳ್ಳೆಯ ಕೆಲಸ ಮಾಡುತ್ತಿವೆ. ಸಮಾಜಕ್ಕೆ ಅವರ ಕೊಡುಗೆ ಬಹಳವಿದೆ. ವಿದ್ಯಾರ್ಥಿಗಳಿಗೆ ಒಳ್ಳೆಯ ಶಿಕ್ಷಣ ಕೊಡಬೇಕು. ನಮ್ಮ ಶಿಕ್ಷನ ಯಾವ ಒಂದು ಪ್ರಗತಿ ಹೊಂದಿರುವ ರಾಷ್ಟ್ರಗಳಿಗಿಂತ ಕಡಿಮೆ ಆಗಬಾರದು. ನಾವು ಅವರಿಗೆ ಸರಿಸಮವಾಗಿರಬೇಕು. ನಮ್ಮಲ್ಲಿ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳು ಎಲ್ಲ ಕ್ಷೇತ್ರದಲ್ಲಿ ಪರಿಣಿತಿ ಹೊಂದಿರಬೇಕು ಎನ್ನುವ ಉದ್ದೇಶದಿಂದ ಒಳ್ಳೆಯ ಕಾರ್ಯಕ್ರಮ ನಡೆಸಲಾಗುತ್ತಿದೆ ಎಂದರು. ಆರೋಗ್ಯಯುತ ಸ್ಪರ್ಧೆಯಿದೆ. ಕಾನೂನು ಕೂಡ ನಿಮ್ಮ ನೆರವಿಗಿದೆ. ಒಳ್ಳೆಯ ಉದ್ದೇಶವಿದ್ದರೆ ಮಾಡಬೇಡಿ ಎನ್ನಲ್ಲ. ನೀವೇನು ಮಾಡುತ್ತೀರಿ ಅದನ್ನು ನಮಗೂ ತಿಳಿಸಿ. ಏನೇನು ಅಭಿವೃದ್ಧಿ ಮಾಡುತ್ತೀರಿ. ಏನೇನು ವ್ಯವಸ್ಥೆ ಕಲ್ಪಿಸುತ್ತೀರಿ ಅವುಗಳನ್ನು ತಿಳಿಸಿ. ಆದರೆ ಎಲ್ಲದರಲ್ಲಿಯೂ ಪಾರದರ್ಶಕತೆಯಿರಲಿ ಎಂದರು. ನೀವು ಮಾಡುವ ಕೆಲಸ ಕಾರ್ಯಗಳು ನಿಮ್ಮ ವಿದ್ಯಾರ್ಥಿಗಳಿಗೆ ಮಾತ್ರ ತಿಳಿದರೆ ಸಾಲದು, ನಿಯಂತ್ರಣ ಪ್ರಾಧಿಕಾರದವರಿಗೂ ಗೊತ್ತಾಗಲಿ, ಶಿಕ್ಷಣಾಧಿಕಾರಿಗಳಿಗೂ ತಿಳಿಸಿ. ಅವರೂ ಸಂತೋಷಪಡುತ್ತಾರೆ. ನಾವೂ ಸಂತೋಷಪಡುತ್ತೇವೆ. ಬಹಳಷ್ಟು ಶಿಕ್ಷಣ ಸಂಸ್ಥೆಗಳು ವಿವರ ಹಂಚಿಕೊಳ್ಳಲು ಇಷ್ಟಪಡಲ್ಲ. ಅವುಗಳಿಂದ ಸಮಸ್ಯೆ ಎದುರಾಗಲಿದೆ. ಯಾವುದಕ್ಕೂ ಮುಚ್ಚು ಮರೆ ಬೇಡ. ಜನಸಾಮಾನ್ಯರಿಗೂ ಇದು ಅನುದಾನ ರಹಿತವೋ, ಅನುದಾನ ಸಹಿತವೋ ಎನ್ನುವುದು ತಿಳಿದಿರಲಿ. ನೀವು ಒಂದು ಲಕ್ಷರೂ, ಒಂದೂವರೆ ಲಕ್ಷರೂ, ಶುಲ್ಕ ತಗೊಂಡರೂ ಬೇಡ ಅನ್ನಲ್ಲ. ಅದನ್ನು ತೋರಿಸಬೇಕು. ನಿಯಮಬದ್ಧವಾಗಿ ಮಾಡಿ. ಅದಕ್ಕೆ ಅಂತ ರೂಲ್ಸ್ ಇದೆ. ಅದರಂತೆ ನಡೆದುಕೊಳ್ಳಿ ಎಂದು ತಿಳಿಸಿದರು. ಕೆಲವು ಶಾಲೆಗಳ ವೆಬ್ ಸೈಟ್ ನಲ್ಲಿ ಕೂಡ ಸಿಗತ್ತೆ ಶಾಲೆ ಹೀಗಿದೆ, ಪ್ಲೇ ಗ್ರೌಂಡ್ ಹೀಗಿದೆ, ರೂಮ್ಸ್ ಹೀಗಿದೆ ಅಂತ, ಆದರೆ ಶುಲ್ಕ ಎಷ್ಟು ಅಂತ ಮಾತ್ರ ಇರಲ್ಲ. ನಾನೂ ಕೂಡ ಕೆಲವು ವೆಬ್ ಸೈಟ್ ಗಳನ್ನು ಚೆಕ್ ಮಾಡಿದ್ದೇನೆ. ನೀವು ತಗೊಳ್ಳುವ ಶುಲ್ಕದ ವಿವರವನ್ನೂ ಅಲ್ಲಿ ನಮೂದಿಸಿ. ಜನರಿಗೆ ನೀವೆನು ಮಾಡುತ್ತಿದ್ದೀರೆಮದು ತೋರಿಸಿದಲ್ಲಿ ವಿಶ್ವಾಸ, ನಂಬಿಕೆ ಬೆಳೆಯುತ್ತದೆ. ಪಾರದರ್ಶಕತೆಯಿದೆ ಎಂದಾದಲ್ಲಿ ಕರ್ನಾಟಕ ರಾಜ್ಯದ ಮೈಸೂರಿನಲ್ಲಿ ಶಿಕ್ಷಣ ಸಂಸ್ಥೆಗಳಲ್ಲಿ ಪಾರದರ್ಶಕತೆಯಿದೆ ಎಂಬ ಒಳ್ಳೆಯ ಹೆಸರು ಬರುತ್ತದೆ.ಮಕ್ಕಳ ಜೀವನದ ಜೊತೆ ಆಟವಾಡದೇ ಅವರ ಬೆಳವಣಿಗೆಗೆ ಪೂರಕವಾದ ಶಿಕ್ಷಣವನ್ನು ಒದಗಿಸಿ. ಯಾರೋ ಒಬ್ಬಿಬ್ಬರು ಮಾಡುವ ತಪ್ಪಿಗೆ ಇಡೀ ಶಿಕ್ಷಣ ಸಂಸ್ಥೆಗೇ ಕೆಟ್ಟ ಹೆಸರು. ಹಾಗೆ ಆಗೋದು ಬೇಡ. ಮಕ್ಕಳಿಗೆ ಉತ್ತಮ ಶಿಕ್ಷಣವನ್ನು ನೀಡಿ. ಮುಖ್ಯವಾಗಿ ಪಾರದರ್ಶಕವಾಗಿರಿ ಎಂದರು.

ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್, ಸಾ.ಶಿ.ಇಲಾಖೆಯ ಉಪನಿರ್ದೇಶಕಿ ಎಸ್.ಮಮತ, ಶಿಕ್ಷಣಾಧಿಕಾರಿ ಡಿ.ಉದಯ್ ಕುಮಾರ್, ಅಧೀಕ್ಷಕ ಎಂ.ಕೆ.ಮರಿಸ್ವಾಮಿ, ಶಿಕ್ಷಣ ಸಂಯೋಜಕ ಸೋಮಶೇಖರ್ ಮತ್ತಿತರರು ಉಪಸ್ಥಿತರಿದ್ದರು. ಇದೇ ವೇಳೆ ಸರ್ಕಾರಿ ಶಾಲೆಗಳಲ್ಲಿನ ಸೌಲಭ್ಯಗಳ ಕುರಿತು ಭಿತ್ತಿ ಪತ್ರ ಬಿಡುಗಡೆಗೊಳಿಸಲಾಯಿತು. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: