ಮೈಸೂರುಸಿಟಿ ವಿಶೇಷ

ಭಿಕ್ಷುಕರಿಗೆ ದೊರಕಿದೆ ಆಧಾರ್ ಗುರುತು, ಯೋಜನೆಗಳ ಅನುಷ್ಠಾನ ಈಗ ಇನ್ನಷ್ಟು ಸಲೀಸು

ಈಗ ಮನೆ-ಮಠ ಎಲ್ಲ ಇದ್ಕೊಂಡೂ ಸರ್ಕಾರಿ ಸೌಲಭ್ಯ ಪಡೀಬೇಕು ಅಂದ್ರೆ ಜನಸಾಮಾನ್ಯರು ಸಾಹಸಪಡಬೇಕು. ಇಂಥ ಸಮಯದಲ್ಲಿ ನಿರಾಶ್ರಿತರ ಕೇಂದ್ರದಲ್ಲಿ ಆಶ್ರಯ ಪಡೆದ ಭಿಕ್ಷುಕರಿಗೆ ಸೌಕರ್ಯಗಳು ಕುಳಿತಲ್ಲೇ ದೊರೆತರೆ ಹೇಗಿರುತ್ತೆ? ಲಡ್ಡು ಬಂದು ಬಾಯಲ್ಲಿ ಬಿದ್ದ ಹಾಗೆ!

ಇಂಥ ಒಂದು ಭಾಗ್ಯ ಮೈಸೂರಿನ ಭಿಕ್ಷುಕರಿಗೆ ಲಭಿಸಿದೆ. ಯಾರೂ ಇಲ್ಲ ಎಂಬ ಹತಾಶೆಯಿಂದ ನಿರಾಶ್ರಿತರ ಕೇಂದ್ರದಲ್ಲಿ ಜೀವನ ಸವೆಸುತ್ತಿರುವ ಮಂದಿಗೆ ಈಗ ಉಪವಿಭಾಗಾಧಿಕಾರಿಯೇ ಆಸರೆಯಾಗಿದ್ದಾರೆ. ಅಕ್ಷರ ಜ್ಞಾನವಿಲ್ಲದೆ ಬೀದಿ ಬದಿ ಭಿಕ್ಷೆ ಬೇಡುತ್ತಿದ್ದ ಮಂದಿ ಈಗ ಆಧಾರ್ ಭಾಗ್ಯ ಪಡೆದುಕೊಂಡಿದ್ದಾರೆ.

ತಮ್ಮವರು ಯಾರೂ ಇಲ್ಲದೆ, ಬೀದಿಪಾಲಾದ ನಿರಾಶ್ರಿತರಿಗೆ ಗುರುತಿನ ಪತ್ರ, ಆಧಾರ್, ಬ್ಯಾಂಕ್ ಖಾತೆ ಜೊತೆಗೆ ಪಿಂಚಣಿ ವ್ಯವಸ್ಥೆ ಮಾಡುವ ಮೂಲಕ ಸರ್ಕಾರ ಜೀವನಾಸರೆ ನೀಡಿದೆ. ಮೈಸೂರು ಉಪವಿಭಾಗಾಧಿಕಾರಿ ಸಿ.ಎಲ್. ಆನಂದ್ ಅವರು ಇಂತಹ ಜನೋಪಯೋಗಿ ಕಾರ್ಯಕ್ಕೆ ಮುಂದಾಗಿದ್ದಾರೆ.

ಕರ್ತವ್ಯದ ವಿಷಯದಲ್ಲಿ ಖಡಕ್ ಅಧಿಕಾರಿಯಾಗಿರುವ ಆನಂದ್, ಕೆಲಸದ ಒತ್ತಡದ ನಡುವೆಯೂ ಭಿಕ್ಷುಕರಿಗೆ ಸವಲತ್ತುಗಳನ್ನು ಕೊಡಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

ಇದೇ ವೇಳೆ ಮಾತನಾಡಿದ ಸಿ.ಎಲ್. ಆನಂದ್ ಅವರು ಜ್ಯೋತಿನಗರದ ನಿರಾಶ್ರಿತರ ಪುನರ್ವಸತಿ ಕೇಂದ್ರದ ಬಳಿ 30 ರಿಂದ 80 ವರ್ಷ ವಯಸ್ಸಿನ 400 ಕ್ಕೂ ಅಧಿಕ ನಿರಾಶ್ರಿತರು ಆಧಾರ್ ಕಾರ್ಡ್, ವೋಟರ್ ಐಡಿ, ಬ್ಯಾಂಕ್ ಅಕೌಂಟ್ ಪಡೆದುಕೊಂಡರು. ಇವರಲ್ಲಿ ಅಂಗವಿಕಲರು ಹಾಗೂ ವಯಸ್ಸಾದವರಿಗೆ ಮಾಸಶಾನ ಸವಲತ್ತು ಲಭಿಸಿದೆ ಎಂದು ತಮ್ಮ ಕೆಲಸದ ಬಗೆಗಿನ ಸಂತಸವನ್ನ ಹಂಚಿಕೊಂಡರು.

ನಿರಾಶ್ರಿತರೊಬ್ಬರು ಮಾತನಾಡಿ, ಸಾಂಸ್ಕೃತಿಕ ನಗರಿಯಲ್ಲಿ ಇನ್ನೂ ಹಲವು ನಿರ್ಗತಿಕರು ತಮ್ಮ ಗುರುತಿನ ಪತ್ರ ಇಲ್ಲದೆ ಬದುಕುತ್ತಿದ್ದಾರೆ. ನಮಗೆ ಸಿಕ್ಕಂತೆ ಅವರಿಗೂ ಈ ಸೌಲಭ್ಯ ಸಿಗಲಿ ಎನ್ನುತ್ತಾರೆ.

ಇಂತಹ ಕ್ರಮಗಳಿಂದ ಸರ್ಕಾರಿ ಯೋಜನೆಗಳ ಪ್ರಾಮಾಣಿಕ ಅನುಷ್ಠಾನಕ್ಕೆ ಸಹಾಯವಾಗುತ್ತದೆ. ಈ ಮೂಲಕ ಜನರ ಹಣ ವಂಚಕರ ಕೈ ಸೇರುವುದೂ ತಪ್ಪಿದಂತಾಗುತ್ತದೆ.

— ಸುರೇಶ್‍

Leave a Reply

comments

Related Articles

error: