ಕರ್ನಾಟಕದೇಶ

ಪ್ರಾದೇಶಿಕ ಪಕ್ಷಗಳ ಜೊತೆ ಸಂಘರ್ಷಕ್ಕಿಳಿಯುವವರು ನಾಶವಾಗುತ್ತಾರೆ: ಮಮತಾ ಬ್ಯಾನರ್ಜಿ

ಬೆಂಗಳೂರು (ಮೇ 23): ಪ್ರಾದೇಶಿಕ ಪಕ್ಷಗಳ ಜೊತೆ ಸಂಘರ್ಷಕ್ಕೆ ಮುಂದಾಗುವವರು ನಾಶವಾಗಲಿದ್ದಾರೆ (ಜೋ ಹಮ್ ಸೇ ಟಕ್‌ರಾಯೆಗಾ, ವೋ ಚೂರ್ ಚೂರ್ ಹೋಜಾಯೇಗಾ) ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಎಚ್ಚರಿಕೆ ನೀಡಿದ್ದಾರೆ.

ಬುಧವಾರ ಕುಮಾರಸ್ವಾಮಿ ಅವರ ಪ್ರಮಾಣವಚನಕ್ಕೆ ಪೂರ್ವಭಾವಿಯಾಗಿ ಕುಮಾರಕೃಪಾ ಅತಿಥಿ ಗೃಹದಲ್ಲಿ ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಜೊತೆ ಚರ್ಚೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಪ್ರಾದೇಶಿಕ ಪಕ್ಷದ ನಾಯಕರು ಒಂದೆಡೆ ಸೇರಿದ ಕೂಡಲೇ ದೇಶದಲ್ಲಿ ತೃತೀಯ ರಂಗದಿಂದ ಏನೂ ಮಾಡಲು ಸಾಧ್ಯವಿಲ್ಲ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ನೀಡಿರುವ ಹೇಳಿಕೆಗೆ ಅವರು ತಿರುಗೇಟು ನೀಡಿದರು.

ಅಮಿತ್ ಶಾ ಪ್ರಾದೇಶಿಕ ಪಕ್ಷಗಳ ಬಗ್ಗೆ ಏನು ಬೇಕಾದರೂ ಹೇಳಲಿ, ನಾವು ಅದಕ್ಕೆ ಹೆದರುವುದಿಲ್ಲ. ನಮ್ಮ ವಿಚಾರಗಳನ್ನು ಮುಂದಿಟ್ಟಿದ್ದೇವೆ. ಪ್ರಾದೇಶಿಕ ಪಕ್ಷಗಳನ್ನು ಬಲಗೊಳಿಸುವ ಕೆಲಸವನ್ನು ನಾವು ಮಾಡುತ್ತೇವೆ ಎಂದು ಮಮತಾ ಬ್ಯಾನರ್ಜಿ ಹೇಳಿದರು. ಪ್ರಾದೇಶಿಕ ಪಕ್ಷಗಳು ಪ್ರಬಲವಾದರೆ ದೇಶದಲ್ಲಿ ಉತ್ತಮ ಆಡಳಿತ ನೀಡುವ ಸರಕಾರವನ್ನು ರಚನೆ ಮಾಡಬಹುದು. ಈ ಸಂಬಂಧ ನಾನು ಹಾಗೂ ಚಂದ್ರಬಾಬು ನಾಯ್ಡು ಬೆಂಗಳೂರಿನಲ್ಲಿ ಭೇಟಿಯಾಗಿದ್ದು ಉತ್ತಮವಾದ ಚರ್ಚೆಗೆ ಅವಕಾಶ ಮಾಡಿಕೊಟ್ಟಿದೆ ಎಂದು ಅವರು ತಿಳಿಸಿದರು

ದೇಶದ ಎಲ್ಲ ಪ್ರಾದೇಶಿಕ ಪಕ್ಷಗಳು ಒಗ್ಗಟ್ಟು ಪ್ರದರ್ಶಿಸುತ್ತಿವೆ. 2019ರ ಲೋಕಸಭಾ ಚುನಾಣೆಯಲ್ಲಿ ಪ್ರಾದೇಶಿಕ ಪಕ್ಷಗಳ ಮೂಲಕ ದೇಶದಲ್ಲಿ ನೈತಿಕ ರಾಜಕಾರಣ ನಡೆಯಲಿದೆ ಎಂದು ಮಮತಾ ಬ್ಯಾನರ್ಜಿ ಹೇಳಿದರು.

ಕಾಂಗ್ರೆಸ್ ಕೆಲಸವನ್ನು ಕಾಂಗ್ರೆಸ್ ಮಾಡಲಿ, ನಮ್ಮ ಕೆಲಸವನ್ನು ನಾವು ಮಾಡುತ್ತೇವೆ. ರಾಜ್ಯದಲ್ಲಿ ಪ್ರಾದೇಶಿಕ ಸರಕಾರ ರಚನೆಗೆ ಕಾಂಗ್ರೆಸ್ ಸಹಕಾರ ನೀಡುತ್ತಿರುವುದು ಉತ್ತಮ ಬೆಳವಣಿಗೆ. ಇಲ್ಲಿ ಸಮ್ಮಿಶ್ರ ಸರಕಾರ ರಚನೆಯಾಗುತ್ತಿದೆ. ಆದುದರಿಂದ, ನಾವು ಕುಮಾರಸ್ವಾಮಿಗೆ ಬೆಂಬಲ ನೀಡಲು ಬಂದಿದ್ದೇವೆ. ಅವರು ಕರ್ನಾಟಕದಲ್ಲಿ ಪ್ರಾದೇಶಿಕ ಪಕ್ಷವನ್ನು ಮುನ್ನಡೆಸುತ್ತಿದ್ದಾರೆ ಎಂದು ಮಮತಾ ಬ್ಯಾನರ್ಜಿ ಹೇಳಿದರು.

ಕುಮಾರಸ್ವಾಮಿ ಪದಗ್ರಹಣ ಸಮಾರಂಭಕ್ಕೆ ಡಿಎಂಕೆ ನಾಯಕ ಎಂ.ಕೆ.ಸ್ಟಾಲಿನ್ ಬರುತ್ತಿಲ್ಲ. ತಮಿಳುನಾಡಿನಲ್ಲಿ ಉಂಟಾಗಿರುವ ಸಮಸ್ಯೆಗೆ ಅವರು ಸ್ಪಂದಿಸುತ್ತಿದ್ದಾರೆ. ನಾನು ಕೊಟ್ಟ ಮಾತನ್ನು ಉಳಿಸಿಕೊಳ್ಳಲು ಬಂದಿದ್ದೇನೆ ಅವರು ತಿಳಿಸಿದರು.

ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಮಾತನಾಡಿ, ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುತ್ತಿರುವುದು ಸಂತಸ ತಂದಿದೆ. ಎಲ್ಲ ಪ್ರಾದೇಶಿಕ ಪಕ್ಷಗಳು ಒಗ್ಗಟ್ಟಿನಿಂದ ಕುಮಾರಸ್ವಾಮಿಗೆ ಬೆಂಬಲ ನೀಡುತ್ತಿವೆ ಎಂದರು. ನಮ್ಮೆಲ್ಲರ ಒಗ್ಗಟ್ಟು ಪ್ರದರ್ಶನಕ್ಕೆ ಇದು ಉತ್ತಮ ವೇದಿಕೆಯಾಗಿದೆ. ನಾನು ಹಾಗೂ ಮಮತಾ ಬ್ಯಾನರ್ಜಿ ಪ್ರಾದೇಶಿಕ ಪಕ್ಷಗಳ ಬಲವರ್ಧನೆಗೆ ಶ್ರಮಿಸುತ್ತಿದ್ದೇವೆ. ಪ್ರಾದೇಶಿಕ ಪಕ್ಷಗಳೆಲ್ಲ ಒಟ್ಟಾಗಿ ಮುಂದೆ ಹೋಗಬೇಕಿದೆ ಎಂದು ಚಂದ್ರಬಾಬು ನಾಯ್ಡು ಹೇಳಿದರು. (ಎನ್.ಬಿ)

Leave a Reply

comments

Related Articles

error: