ಮೈಸೂರು

ಎಲ್ಲರ ಚಿತ್ತ ಮೈಸೂರು ಮೇಯರ್ ಚುನಾವಣೆಯತ್ತ…

ಮೈಸೂರು ನಗರ ಪಾಲಿಕೆಯ ಮೇಯರ್ ಮತ್ತು ಉಪ ಮೇಯರ್ ಚುನಾವಣೆ ಬುಧವಾರದಂದು ನಡೆಯಲಿದ್ದು, ಜೆಡಿಎಸ್‍ನ ಎಲ್ಲ ನಗರ ಪಾಲಿಕೆ ಸದಸ್ಯರು ರೆಸಾರ್ಟ್‍ಗೆ ತೆರಳಿದ್ದಾರೆ. ಸೋಮವಾರ ನಡೆದ ಬಿಜೆಪಿ ಮತ್ತು ಜೆಡಿಎಸ್ ನಾಯಕರ ಸಭೆಯಲ್ಲಿ ಈ ಬಾರಿಯೂ ಹೊಂದಾಣಿಕೆ ಮುಂದುವರೆಸುವ ಕುರಿತು ಮಾತುಕತೆಗಳು ನಡೆದಿವೆ ಎನ್ನಲಾಗಿದೆ.

ಚೆಲುವೇಗೌಡ, ರತ್ನ
ಮೇಯರ್ ಹಾಗೂ ಉಪಮೇಯರ್ ಸ್ಥಾನಕ್ಕೆ ಪ್ರಬಲವಾಗಿ ಕೇಳಿಬರುತ್ತಿರುವ ಜೆಡಿಎಸ್‍ ಸದಸ್ಯ ಚೆಲುವೇಗೌಡ ಮತ್ತು ಬಿಜೆಪಿ ಸದಸ್ಯೆ ರತ್ನ

ಮೂಲಗಳ ಮಾಹಿತಿ ಪ್ರಕಾರ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳು ಜೆಡಿಎಸ್‍ನೊಂದಿಗೆ ಮೈತ್ರಿ ಏರ್ಪಡಿಸಿ ನಗರ ಪಾಲಿಕೆಯ ಆಡಳಿತವನ್ನು ಹಂಚಿಕೊಳ್ಳಲು ಸನ್ನದ್ಧರಾಗಿದ್ದಾರೆ ಎನ್ನಲಾಗಿದೆ. ಕೆಲ ವರ್ಷಗಳಿಂದ ಬಿಜೆಪಿಯು ಜೆಡಿಎಸ್‍ನೊಂದಿಗೆ ಅಧಿಕಾರ ಹಂಚಿಕೊಂಡಿದ್ದು, ಮುಂದೆಯೂ ಈ ಮೈತ್ರಿ ಮುಂದುವರಿಯುವ ನಿರೀಕ್ಷೆಗಳು ಇವೆ. ಕಾಂಗ್ರೆಸ್ ಕೂಡ ಜೆಡಿಎಸ್‍ನೊಂದಿಗೆ ಮೈತ್ರಿ ಮಾಡಿಕೊಳ್ಳಲು ತೀವ್ರ ಯತ್ನ ನಡೆಸುತ್ತಿದೆ ಎನ್ನುವ ಮಾತುಗಳು ಕೇಳಿಬಂದಿವೆ.

ನಗರ ಪಾಲಿಕೆಯಲ್ಲಿ 65 ಕೌನ್ಸಿಲ್ ಸದಸ್ಯರಿದ್ದು, ಕಾಂಗ್ರೆಸ್ ನ 20, ಜೆಡಿಎಸ್‍- 19, ಬಿಜೆಪಿಯ 13, ಎಸ್‍ಡಿಪಿಐ -2, ಕೆಜೆಪಿ-1 ಮತ್ತು 8 ಮಂದಿ ಸ್ವತಂತ್ರ ಅಭ್ಯರ್ಥಿಗಳಿದ್ದಾರೆ. ಕೆಜೆಪಿ ಅಭ್ಯರ್ಥಿ ಬಿ.ಎಲ್. ಭೈರಪ್ಪ ಮತ್ತು ಸ್ವತಂತ್ರ ಕಾರ್ಪೊರೇಟರ್ ಅಶ್ವಿನಿ ಅನಂತು ಅವರು ಜೆಡಿಎಸ್‍ ಪಕ್ಷಕ್ಕೆ ಸೇರಿದ ಹಿನ್ನೆಲೆಯಲ್ಲಿ ಜೆಡಿಎಸ್‍ ಒಟ್ಟು ಸದಸ್ಯರ ಸಂಖ್ಯೆ 21 ಆಗಿದೆ. ಶಾಸಕರು, ಸಂಸದರು, ಎಮ್‍ಎಲ್‍ಸಿ ಅವರ ಓಟಿನ ಮೂಲಕ ಕಾಂಗ್ರೆಸ್ 27, ಜೆಡಿಎಸ್ 25 ಮತ್ತು ಬಿಜೆಪಿ 14 ಓಟುಗಳನ್ನು ಗಳಿಸುವ ಸಾಧ್ಯತೆಯಿದೆ.

ಜೆಡಿಎಸ್ ಬಿಜೆಪಿಯೊಂದಿಗೆ ಕೈ ಜೋಡಿಸಿದಲ್ಲಿ ಒಟ್ಟು 39 ಮತಗಳನ್ನು ಪಡೆಯಬಹುದು. ಕಾಂಗ್ರೆಸ್‍ನೊಂದಿಗೆ ಮೈತ್ರಿ ಮಾಡಿಕೊಂಡಲ್ಲಿ 52 ಮತಗಳನ್ನು ಪಡೆಯಲಿದೆ.

ಮೇಯರ್ ಸ್ಥಾನವು ಸಾಮಾನ್ಯ ಸ್ಥಾನಕ್ಕೆ ಮೀಸಲಾಗಿದ್ದು, ಹಿರಿಯ ನಗರ ಪಾಲಿಕೆ ಸದಸ್ಯರಾದ ಕೆ.ಟಿ. ಚಲುವೇಗೌಡ, ಎಮ್.ಜೆ. ರವಿಕುಮಾರ್, ಕೆ.ವಿ. ಮಲ್ಲೇಶ್ ಅವರು ಜೆಡಿಎಸ್‍ನಿಂದ ಸ್ಥಾನಕಾಂಕ್ಷಿಗಳಾಗಿದ್ದಾರೆ. ಉಪ ಮೇಯರ್ ಸ್ಥಾನವು ಸಾಮಾನ್ಯ ಮಹಿಳೆಗೆ ಮೀಸಲಾಗಿದ್ದು, ಸೀಮಾ ಪ್ರಸಾದ್ ಮತ್ತು ರತ್ನ ಅವರ ಹೆಸರುಗಳು ಕೇಳಿಬರುತ್ತಿವೆ.

Leave a Reply

comments

Related Articles

error: