ಕರ್ನಾಟಕಮೈಸೂರು

ಅಪರೇಷನ್ ‘ಮುಸ್ಕಾನ್-2’ : 11 ಬಾಲಕಾರ್ಮಿಕರು ವಶಕ್ಕೆ

ಕೇಂದ್ರ ಸರ್ಕಾರ ಮತ್ತು ರಾಜ್ಯ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಆಜ್ಞೆಯ ಮೇರೆಗೆ ಮೈಸೂರು ನಗರ ಪೊಲೀಸರು “ಮುಸ್ಕಾನ್ 2” ಹೆಸರಿನಲ್ಲಿ ಕಳೆದ ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳಲ್ಲಿ ಕಾರ್ಯಾಚರಣೆ ನಡೆಸಿ 11 ಮಂದಿ ಬಾಲ ಕಾರ್ಮಿಕರನ್ನು ಸಂರಕ್ಷಿಸಿದರು.

ಮೈಸೂರಿನ ಮಾನವ ಸಾಗಾಣಿಕಾ ವಿರೋಧಿ ತಂಡ ಮತ್ತು ಅಪರಾಧ ವಿಭಾಗದ ವಿಶೇಷ ತನಿಖಾ ದಳ ಹಾಗೂ ಕಾರ್ಮಿಕ ಇಲಾಖೆಗಳ ಸಹಯೋಗದಲ್ಲಿ ಕಳೆದ ಸೆಪ್ಟೆಂಬರ್ 8ರಂದು ನಡೆಸಿದ ಕಾರ್ಯಾಚರಣೆಯಲ್ಲಿ ತಂಡವು ಒಟ್ಟು 11 ಜನ ಬಾಲ ಕಾರ್ಮಿಕರನ್ನು ವಶಕ್ಕೆ ಪಡೆದಿದ್ದಾರೆ.

ಸಿದ್ದಾರ್ಥ ನಗರ, ರಾಜೇಂದ್ರ ನಗರ, ಹಳೆಕೆಸರೆ, ಮೇಟಗಳ್ಳಿ ಸೇರಿದಂತೆ ಮಾನಸಗಂಗೋತ್ರಿ ಕ್ಯಾಂಟಿನ್ ನಲ್ಲಿ ದುಡಿಯುತ್ತಿದ್ದ 7 ಮಂದಿ ಬಾಲ ಕಾರ್ಮಿಕರನ್ನು ಹಾಗೂ ನಗರದ ಬೇರೆ ಬೇರೆ ಸ್ಥಳಗಳಲ್ಲಿ ಭಿಕ್ಷಾಟನೆ ಮಾಡುತ್ತಿದ್ದ ನಾಲ್ಕು ಮಕ್ಕಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಬಾಲಕಾರ್ಮಿಕರಾಗಿ ದುಡಿಯುತ್ತಿದ್ದ 7 ಮಂದಿ ಅಪ್ರಾಪ್ತರನ್ನು ವಿಜಯನಗರದ 4 ನೇಹಂತದ ಸರ್ಕಾರಿ ಬಾಲಕರ ಹಾಸ್ಟೆಲ್ ಗೆ ಸೇರಿಸಲಾಯಿತು ಉಳಿದ ನಾಲ್ವರನ್ನು ‘ಶಕ್ತಿಧಾಮ’ ಪುನರ್ವಸತಿ ಕೇಂದ್ರದಲ್ಲಿ ದಾಖಲಿಸಲಾಯಿತು.

ಮಕ್ಕಳ ಕಲ್ಯಾಣ ಇಲಾಖೆ ಮತ್ತು ಕಾರ್ಮಿಕ ವಿಭಾಗದಲ್ಲಿ ವರದಿ ಸಲ್ಲಿಸಲಾಗಿದ್ದು, ಅಪ್ರಾಪ್ತರನ್ನು ಕೆಲಸಕ್ಕೆ ನಿಯೋಜಿಸಿಕೊಂಡ ಸಂಸ್ಥೆಗಳ ವಿರುದ್ಧ ‘ಮಕ್ಕಳ ಹಕ್ಕುಗಳ ನಿಯಮಾವಳಿಯ’ ಅಡಿಯಲ್ಲಿ ಪ್ರಕರಣ ದಾಖಲಿಸಿ  ಕ್ರಮ ಜರುಗಿಸಲಾಗುವುದು.

ಈ ವಿಶೇಷ ಕಾರ್ಯಾಚರಣೆಯು ಮುಂದುವರೆಯಲಿದ್ದು ಸಾರ್ವಜನಿಕರು ಯಾವುದಾದರೂ ಅಪ್ರಾಪ್ತ ಬಾಲ ಕಾರ್ಮಿಕರನ್ನು ಅಥವಾ ಭಿಕ್ಷೆ ಬೇಡುವ ಮಕ್ಕಳು ಕಂಡು ಬಂದಲ್ಲಿ ಹತ್ತಿರದ ಪೊಲೀಸ್ ಠಾಣೆಗೆ ಮಾಹಿತಿ ನೀಡಲು ಸಂಬಂಧಿಸಿದ ಇಲಾಖೆಯು ಮನವಿ ಮಾಡಿದೆ.

Leave a Reply

comments

Related Articles

error: