ಮೈಸೂರು

ಮಾಧ್ಯಮ ಸಾಮಾಜಿಕ ಪರಿವರ್ತನೆಯ ಮಧ್ಯವರ್ತಿಯಾದಲ್ಲಿ ದೇಶದ ಅಭಿವೃದ್ಧಿ ಸಾಧ್ಯ : ಕಂಚಾ ಇಲಯ್ಯ ಅಭಿಮತ

kalamandir-web-2ಮಾಧ್ಯಮ ಸಾಮಾಜಿಕ ಪರಿವರ್ತನೆಯ ಮಧ್ಯವರ್ತಿಯಂತೆ ಕಾರ್ಯನಿರ್ವಹಿಸಿದಾಗ ಮಾತ್ರ ದೇಶದ ಅಭಿವೃದ್ಧಿ  ಸಾಧ್ಯ ಎಂದು ತೆಲಂಗಾಣದ ಶಿಕ್ಷಣ ತಜ್ಞ, ಹಿರಿಯ ಚಿಂತಕ  ಕಂಚಾ ಇಲಯ್ಯ ಅಭಿಪ್ರಾಯಪಟ್ಟರು.

ಕರ್ನಾಟಕ ಮಾಧ್ಯಮ ಅಕಾಡೆಮಿ, ಜಿಲ್ಲಾಡಳಿತ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಸಂಯುಕ್ತಾಶ್ರಯದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಪರಿನಿರ್ವಾಣ ದಿನದ ಅಂಗವಾಗಿ ಮಂಗಳವಾರ ಮೈಸೂರಿನ ಕಲಾಮಂದಿರದಲ್ಲಿ ಆಯೋಜಿಸಿದ್ದ ಅಂಬೇಡ್ಕರ್ ಚಿಂತನೆಗಳು ಮತ್ತು ಮಾಧ್ಯಮ ಹಾಗೂ ಪ್ರಸ್ತುತ ಸಾಮಾಜಿಕ ಸ್ಥಿತಿಗತಿ ಕುರಿತ ವಿಚಾರ ಸಂಕಿರಣದಲ್ಲಿ  ಪಾಲ್ಗೊಂಡು ಕಂಚಾ ಇಲಯ್ಯ ಮಾತನಾಡಿದರು. ಮಾಧ್ಯಮ ಸಮಾಜವನ್ನು ಸರಿದಾರಿಯಲ್ಲಿ ಮುನ್ನಡೆಸುವ ಶಕ್ತಿಯನ್ನು ಹೊಂದಿದ್ದು ಸಕಾರಾತ್ಮಕ ಧೋರಣೆಗಳನ್ನಿಟ್ಟುಕೊಂಡು ಪತ್ರಕರ್ತರು ಕಾರ್ಯನಿರ್ವಹಿಸಬೇಕು. ಇಂದು ಎಲ್ಲಾ ರಂಗಗಳಲ್ಲೂ ಮೀಸಲಾತಿಯಿರುವಂತೆ ಪತ್ರಿಕಾರಂಗದಲ್ಲೂ ದಲಿತರಿಗೆ, ಕೆಳವರ್ಗದವರಿಗೆ, ಶೋಷಿತರಿಗೆ, ಹಿಂದುಳಿದವರಿಗೆ ಅವಕಾಶ ನೀಡಬೇಕು. ಎಲ್ಲಿಯವರೆಗೆ ಮಹಿಳಾ ಸಮಾನತೆ, ವರ್ಣ ಸಮಾನತೆ, ಆಹಾರ ಪದ್ಧತಿಯಲ್ಲಿ ಸಮಾನತೆ ತರಲು ಸಾಧ್ಯವಾಗುವುದಿಲ್ಲವೋ ಅಲ್ಲಿಯವರೆಗೂ ದೇಶದ ಅಭಿವೃದ್ಧಿ ಅಸಾಧ್ಯ ಎಂದರು.

ಕಪ್ಪುಹಣ ಹಾಗೂ ಭ್ರಷ್ಟಾಚಾರವನ್ನು ನಿರ್ಮೂಲನೆ ಮಾಡುತ್ತೇನೆ ಎಂದು ಪ್ರಧಾನಿ ನರೇಂದ್ರ ಮೋದಿಯವರು ಮಾಡಿರುವ ಅರಣ್ಯೀಕರಣದಿಂದ ದೇಶದ ಆರ್ಥಿಕ ಸ್ಥಿತಿ ತೀವ್ರ ಬಿಕ್ಕಟ್ಟಿನಲ್ಲಿದೆ. ಚಲಾವಣೆಯಲ್ಲಿದ್ದ ಶೇ.86ರಷ್ಟು ನೋಟುಗಳನ್ನು ಏಕಾಏಕಿ ಅಪಮೌಲ್ಯಗೊಳಿಸಿರುವುದರಿಂದ ಸಾಮಾನ್ಯ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಬುಡಕಟ್ಟು ಜನರಿಗೆ, ಕಾಡಿನಲ್ಲಿ ವಾಸಿಸುವವರಿಗೆ, ಹಿಂದುಳಿದವರಿಗೆ ಚೆಕ್, ಬ್ಯಾಂಕ್, ಪ್ಲಾಸ್ಟಿಕ್ ನೋಟಿನ ಬಗ್ಗೆ ಪರಿಜ್ಞಾನವೇ ಇರುವುದಿಲ್ಲ. ಅಂತಹುದರಲ್ಲಿ ಮೊಬೈಲ್‍ನಿಂದ ನಗದು ವರ್ಗಾವಣೆ ಮಾಡಿಕೊಳ್ಳುವುದಾದರೂ ಹೇಗೆ? ಬಹುಶಃ ಇದನ್ನು ಜಾರಿಗೆ ತಂದ ಮೋದಿಯವರಿಗೇ ಇದರ ಅರಿವಿಲ್ಲವೇನೋ, ಇಂತಹ ಯೋಜನೆಗಳು ಕೇವಲ ಅದಾನಿ, ಅಂಬಾನಿ, ಏರ್‍ಟೆಲ್ ಗ್ರೂಪ್‍ನವರಿಗೆ ಮಾತ್ರ ಲಾಭದಾಯಕ ಎಂದು ಕಿಡಿಕಾರಿದರು.

ನೆಹರೂಗಿಂತಲು ಅಂಬೇಡ್ಕರ್ ಜನಪ್ರಿಯ: ಅಂಬೇಡ್ಕರ್ ನೆಹರೂ ಅವರಿಗಿಂತಲು ಜನಪ್ರಿಯರಾಗಿದ್ದರೂ ಅವರು ಸಾವನ್ನಪ್ಪಿದ ಸುದ್ದಿಯನ್ನು ಕೆಲ ಪತ್ರಿಕೆಗಳು ಮುಖಪುಟದಲ್ಲಿ ಪ್ರಕಟಿಸಲೇ ಇಲ್ಲ. ಅಷ್ಟೇ ಏಕೆ ರಾಷ್ಟ್ರಪಿತ ಗಾಂಧೀಜಿ ಸತ್ತಾಗಲು ಒಳಪುಟಕ್ಕೆ ಸೀಮಿತವಾಗಿದ್ದರು. ಅಂದು ಪತ್ರಿಕಾರಂಗದಲ್ಲಿ ಕೇವಲ ಮೇಲ್ವರ್ಗದವರೇ ಇದ್ದುದರಿಂದ ಅಂಬೇಡ್ಕರ್ ಅವರಂತಹ ಮಹಾನ್ ವ್ಯಕ್ತಿಯನ್ನು ಕಡೆಗಣಿಸಲಾಯಿತು. ದಲಿತರ, ಹಿಂದುಳಿದವರ ಸುದ್ದಿಗಳನ್ನು ವರದಿ ಮಾಡುತ್ತಲೇ ಇರಲಿಲ್ಲ. ಆದರೆ, ಇಂದು ದೇಶದ ಜನಸಂಖ್ಯೆಯಲ್ಲಿ ಶೇ.85ರಷ್ಟು ಹಿಂದುಳಿದವರೇ ಇರುವುದರಿಂದ ಪತ್ರಿಕಾರಂಗದಲ್ಲೂ ಬದಲಾವಣೆಯಾಗಿದೆ. ಹಿಂದುಳಿದವರು, ದಲಿತರು, ಶೋಷಿತರಿಗೆ ಅವಕಾಶಗಳು ಸಿಗುತ್ತಿವೆ ಎಂದು ಹೇಳಿದರು.

ಭಾರತ ಗೋವುಗಳ ರಾಷ್ಟ್ರವಲ್ಲ, ಎಮ್ಮೆಗಳ ರಾಷ್ಟ್ರ: ಗೋಭಕ್ಷಣೆ ಸಲ್ಲದು, ಗೋಮಾಂಸ ತಿಂದರೆ ಮಹಾಪಾಪ, ಅವುಗಳನ್ನು ಸಂರಕ್ಷಿಸಬೇಕು ಎಂದೆಲ್ಲ ಬೊಬ್ಬೆ ಹೊಡೆಯುವವರಿಗೆ ದೇಶದ ಆರ್ಥಿಕತೆಗೆ ಅಪಾರ ಕೊಡುಗೆ ನೀಡುತ್ತಿರುವ ಎಮ್ಮೆಗಳು ಏನು ಮಾಡಿದ್ದವು. ದೇಶದಲ್ಲಿ ಉತ್ಪಾದನೆಯಾಗುವ ಹಾಲಿನಲ್ಲಿ ಶೇ.70ರಷ್ಟನ್ನು ಎಮ್ಮೆಗಳು ನೀಡುತ್ತವೆ. ಆದರೂ ಗೋವುಗಳ ರಕ್ಷಣೆಗೆ ಮುಂದಾಗುವ ನಾವು ದೇಶೀಯ ತಳಿಗಳಾದ ಎಮ್ಮೆಗಳನ್ನು ಏಕೆ ರಕ್ಷಿಸುತ್ತಿಲ್ಲ. ಭಾರತ ಗೋವುಗಳ ದೇಶವಲ್ಲ ಬದಲಾಗಿ ಎಮ್ಮೆಗಳ ರಾಷ್ಟ್ರ. ನಾವು ತಿನ್ನುವ ಆಹಾರ ಪದ್ಧತಿಯನ್ನು ನಿರ್ಧರಿಸುವ ಹಕ್ಕು ಯಾರಿಗೂ ಇಲ್ಲ. ಅಲ್ಲದೆ ಗೋಮಾಂಸವನ್ನು ಕೇವಲ ಮುಸ್ಲಿಮರೇ ತಿನ್ನುವುದಿಲ್ಲ. ದಲಿತರು, ಆದಿವಾಸಿಗಳು, ಬುಡಕಟ್ಟು ಜನಾಂಗದವರು ಅಷ್ಟೇ ಏಕೆ ನಾನೂ ಕೂಡ ಗೋಮಾಂಸ ತಿನ್ನುತ್ತೇನೆ. ಕೇವಲ ಸಸ್ಯಾಹಾರ ತಿಂದರೆ ಗಡಿಯಲ್ಲಿ ಶತ್ರು ರಾಷ್ಟ್ರಗಳ ವಿರುದ್ಧ ಹೋರಾಡಲು ಶಕ್ತಿ ಸಾಲುವುದಿಲ್ಲ. ಗೋಮಾಂಸ ಸೇರಿದಂತೆ ಎಲ್ಲವನ್ನೂ ತಿನ್ನಬೇಕು ಎಂದು ಹೇಳಿದರು.

ಬ್ರಾಹ್ಮಣರು ಸೈನ್ಯಕ್ಕೆ ಬರಲಿ: ಸಮಾಜದಲ್ಲಿ ಮೇಲ್ವರ್ಗದವರು ಎಂದು ಹೇಳಿಕೊಂಡು ಎಲ್ಲಾ ಉನ್ನತ ಹುದ್ದೆಗಳನ್ನು ಅಲಂಕರಿಸುವ ಬ್ರಾಹ್ಮಣರು ದೇಶ ಕಾಯುವ ಕಾಯಕ ಮಾಡಲಿ. ದಲಿತರ ರೆಜಿಮೆಂಟ್, ಸಿಕ್ ರೆಜಿಮೆಂಟ್, ಬೂರ್ಖಾ ರೆಜಿಮೆಂಟ್‍ಗಳಿರುವಂತೆ ಬ್ರಾಹ್ಮಣರ ರೆಜಿಮೆಂಟ್‍ಗಳನ್ನು ಸ್ಥಾಪಿಸಲಿ ಎಂದ ಅವರು, ಹಿಂದಿ ಭಾರತದ ರಾಷ್ಟ್ರೀಯ ಭಾಷೆಯಲ್ಲ. ಇಂಗ್ಲಿಷ್ ಭಾರತದ ರಾಷ್ಟ್ರೀಯ ಭಾಷೆ. ಹಿಂದೆ ಕೇವಲ ಮೇಲ್ವರ್ಗದವರು ಮಾತ್ರ ಇಂಗ್ಲಿಷ್ ಬಳಸುತ್ತಿದ್ದರು. ಆದರೆ, ಮುಂದೊಂದು ದಿನ ಇಂಗ್ಲಿಷ್ ದಲಿತರ ಭಾಷೆಯಾಗಲಿದೆ ಎಂದು ಭವಿಷ್ಯ ನುಡಿದರು.

ಇದೇ ವೇಳೆ ಮಾಧ್ಯಮ ಅಕಾಡೆಮಿಯಿಂದ ನೀಡುವ 10 ತಿಂಗಳ ತರಬೇತಿಗೆ ಆಯ್ಕೆಯಾದ ರಮ್ಯ.ಎ, ಪುಷ್ಪಲತಾ ಕಾಂಬ್ಳೆ, ರಶ್ಮಿ.ಟಿ, ಆರ್.ಮಹೇಶ್ ಸೇರಿದಂತೆ 10 ಮಂದಿಗೆ ಪ್ರಮಾಣ ಪತ್ರ ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಶಾಸಕ ಎಂ.ಕೆ.ಸೋಮಶೇಖರ್, ಜಿಲ್ಲಾ ಪಂಚಾಯತ್ ಅಧ್ಯಕ್ಷೆ ನಯೀಮಾ ಸುಲ್ತಾನ, ಮಾಧ್ಯಮ ಅಕಾಡೆಮಿ ಅಧ್ಯಕ್ಷ  ಸಿದ್ದರಾಜು, ಮೈಲಾಕ್ ಅಧ್ಯಕ್ಷ ವೆಂಕಟೇಶ್, ವಸ್ತು ಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಸಿದ್ದರಾಜು, ಮಾಧ್ಯಮ ಅಕಾಡೆಮಿ ಸದಸ್ಯ ಶಿವಕುಮಾರ್ ಮತ್ತಿತರರು ಉಪಸ್ಥಿತರಿದ್ದರು.

Leave a Reply

comments

Related Articles

error: