ಮೈಸೂರು

ತುಕ್ಕು ಹಿಡಿಯುತ್ತಿರುವ ಸರಕಾರಿ ಜೀಪ್‍, ಅಧಿಕಾರಿಗಳ ಬೇಜವಾಬ್ದಾರಿಯಿಂದ ರೈತರಿಗೆ ದೊರಕದ ಸರಿಯಾದ ಸೇವೆ : ತೆರಿಗೆ ಹಣ ಪೋಲಾಗುತ್ತಿರುವುದಕ್ಕೆ ಸಾರ್ವಜನಿಕರ ಆಕ್ರೋಶ

ಮೈಸೂರು,ಮೇ.25:- ಒಂದೆಡೆ ಕಟ್ಟಡದಿಂದ ಕಟ್ಟಡಕ್ಕೆ ಕಚೇರಿಯ ಎತ್ತಂಗಡಿ, ಮತ್ತೊಂದೆಡೆ ಸರಿಯಾದ ಆಶ್ರಯವಿಲ್ಲದೆ ಖಾಸಗಿ ಚಿತ್ರಮಂದಿರದ ಆವರಣದಲ್ಲಿ ಬಿಸಿಲಿಲ್ಲಿ ಒಣಗಿ ಮಳೆಯಲ್ಲಿ ನೆನೆದು ತುಕ್ಕು ಹಿಡಿಯುತ್ತಿರುವ ಸರಕಾರಿ ಜೀಪ್‍ಗಳು, ಸಂಬಂಧಪಟ್ಟ ಅಧಿಕಾರಿಗಳ ಬೇಜವಾಬ್ದಾರಿಯಿಂದ ರೈತರಿಗೆ ದೊರಕದ ಸರಿಯಾದ ಸೇವೆ ಇವೆಲ್ಲ ಕಂಡ ಬರುತ್ತಿರುವುದು ಕೆ.ಆರ್.ನಗರದಲ್ಲಿ.

ಕೆ.ಆರ್.ನಗರದ ಮೈಸೂರು ರಸ್ತೆಯಿಂದ 7ನೇ ರಸ್ತೆಗೆ ಸ್ಥಳಾಂತರಿಸಲಾದ ರೇಷ್ಮೆ ಇಲಾಖೆ ಕಚೇರಿಯ ಸ್ಥಿತಿಯಿದಾಗಿದ್ದು, ಈಗಾಗಲೆ ಸಮರ್ಪಕ ಸಿಬ್ಬಂದಿಯಿಲ್ಲದೆ ಸೊರಗುತ್ತಿರುವ ಇಲಾಖೆಯಿಂದ ರೈತರಿಗೆ ಸಮರ್ಪಕ ಸೇವೆ ಸಿಗುತ್ತಿಲ್ಲ. ರೇಷ್ಮೆ ಬೆಳೆಯುವ ಪ್ರದೇಶ ಹೇಳಿಕೊಳ್ಳುವ ಮಟ್ಟದಲ್ಲಿ ವಿಸ್ತಾರಗೊಳ್ಳದೇ ಇರುವ ಸಂದರ್ಭದಲ್ಲಿ ಇಲಾಖೆಯಿಂದ ನೀಡಿರುವ ಜೀಪು ಕಳೆದ ಹಲವು ತಿಂಗಳುಗಳಿಂದ ದುರಸ್ತಿ ಕಾಣದೇ ಮೂಲೆ ಹಿಡಿದಿದೆ. ಇದರಿಂದ ಇಲಾಖೆಯ ಯೋಜನೆಗಳನ್ನು ರೈತರಿಗೆ ತಲುಪಿಸಲು ಅಧಿಕಾರಿಗಳು ಬೇರೆಯವರ ದ್ವಿಚಕ್ರ ಹಾಗೂ ಇತರೆ ವಾಹನದ ಮೊರೆ ಹೋಗುವಂತಾಗಿದೆ. ಪಟ್ಟಣದ ಮೈಸೂರು ರಸ್ತೆಯ ಒಂದು ಖಾಸಗಿ ಮನೆಯಲ್ಲಿದ್ದ ರೇಷ್ಮೆ ಇಲಾಖೆ ಕಚೇರಿಯನ್ನು 7ನೇ ರಸ್ತೆಯ ಮತ್ತೊಂದು ಖಾಸಗಿ ಕಟ್ಟಡಕ್ಕೆ ಸ್ಥಳಾಂತ ರಿಸಲಾಗಿದ್ದು ಸಮರ್ಪಕ ವಾಹನ ನಿಲ್ದಾಣ ವ್ಯವಸ್ಥೆ ಇಲ್ಲದ ಕಾರಣ ಇಲಾಖೆಯ ಎರಡು ದುರಸ್ತಿ ಜೀಪ್‍ಗಳು ಖಾಸಗಿ ಚಿತ್ರಮಂದಿರ ಆವರಣದಲ್ಲಿ ತುಕ್ಕು ಹಿಡಿಯುತ್ತಿದೆ.  ಇದು ಸರ್ಕಾರಿ ವಾಹನವಾದ್ದರಿಂದ ಯಾರೂ ಗಮನ ನೀಡುತ್ತಿಲ್ಲ. ಯಾವ ಅಧಿಕಾರಿಗಳೇ ಆಗಲೀ ತಮ್ಮ ಸ್ವಂತ ವಾಹನವಾಗಿದ್ದರೆ ಈ ರೀತಿ ಮಳೆ ಬಿಸಿಲಿನಲ್ಲಿ ನಿಲ್ಲಿಸುತ್ತಿದ್ದರಾ ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಕೇಳಿ ಬಂದಿದೆ.

ಸಂಬಂಧಪಟ್ಟ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯ ದಿಂದ ದುರಸ್ತಿಗೊಂಡು ರೇಷ್ಮೆ ಬೆಳೆಗಾರರಿಗೆ ಅನುಕೂಲ ಕಲ್ಪಿಸಬೇಕಾದ ವಾಹನ ಕೆಲಸಕ್ಕೆ ಬಾರದೇ ಮೂಲೆ ಹಿಡಿದಿದ್ದರೆ, ಮತ್ತೊಂದು ವಾಹನ ಯಾವುದೇ ಕೆಲಸಕ್ಕೆ ಬಾರದೇ ಹರಾಜು ಪ್ರಕ್ರಿಯೆಗೂ ಒಳಪಡದೇ ಸರಕಾರದ ಸಾರ್ವಜನಿಕರ ತೆರಿಗೆ ಹಣ ಮಳೆ ಬಿಸಿಲಿನಲ್ಲಿ ತುಕ್ಕು ಹಿಡಿಯುವಂತಾಗಿದೆ.

ಈ ಬಗ್ಗೆ ಪ್ರಶ್ನೆ ಮಾಡುವ ಸಾರ್ವಜನಿಕರು ಅಧಿಕಾರಿಗಳು ತಮ್ಮ ಸ್ವಂತ ವಾಹನದ ಒಂದು ಚೂರು ಬಣ್ಣ ಮಾಸಿದರೂ ಕೂಡಲೇ ಹಣ ಎಷ್ಟೆ ಆಗಲೀ ದುರಸ್ಥಿ ಮಾಡಿಸುತ್ತಾರೆ ಆದರೆ ಸರಕಾರದ ಸಾರ್ವಜನಿಕ ತೆರಿಗೆ ಹಣದ ಲಕ್ಷಾಂತರ ರೂಪಾಯಿ ಬೆಲೆಬಾಳುವ ಜೀಪುಗಳು ಮಾತ್ರ ಹಾಳಾಗುತ್ತಿದ್ದರೂ ಕ್ರಮ ಏಕೆ ಕೈಗೊಂಡಿಲ್ಲ, ಹಾಗಾದರೆ ಸಾರ್ವಜನಿಕರ ತೆರಿಗೆ ಹಣಕ್ಕೆ ಬೆಲೆ ಇಲ್ಲವೆ ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಈಗಾಗಲೇ ಹಲವಾರು ಸರಕಾರಿ ಕಟ್ಟಡಗಳು ಪಾಳುಬಿದ್ದಿದ್ದರೂ ಸಹ ಇಲಾಖೆ ಕಚೇರಿಯನ್ನು 9 ಸಾವಿರ ಬಾಡಿಗೆ ನೀಡಿ ಖಾಸಗಿ ಕಟ್ಟಡಕ್ಕೆ ಸ್ಥಳಾಂತರಿಸಲಾಗಿದ್ದು ಅಲ್ಲಿ ಸಮರ್ಪಕ ಸೌಲಭ್ಯಗಳು ಇಲ್ಲದ ಕಾರಣ ಇಲಾಖೆಯ ವಾಹನಗಳು ಬೇರೆಡೆ ನಿಲ್ಲುವಂತಾಗಿದೆ. ಈ ಬಗ್ಗೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಂಡು ಪಟ್ಟಣದಲ್ಲಿ ಪಾಳುಬಿದ್ದಿರುವ ಯಾವುದಾದರೂ ಸರಕಾರಿ ಕಟ್ಟಡಕ್ಕೆ ಇಲಾಖೆ ಕಚೇರಿಯನ್ನು ಸ್ಥಳಾಂತರಿಸಿ ಇಲಾಖೆಯ ಮೂಲಕ ಸರ್ಕಾರಕ್ಕೆ ಅಗುತ್ತಿರುವ ವೆಚ್ಚವನ್ನು ತಗ್ಗಿಸುವುದಲ್ಲದೆ ಸರಕಾರದ ವಾಹನಗಳನ್ನು ರಕ್ಷಿಸುವಲ್ಲಿ ಕ್ರಮ ಕೈಗೊಳ್ಳಬೇಕೆಂದು ಪಟ್ಟಣದ ಜನತೆ ಒತ್ತಾಯಿಸಿದ್ದಾರೆ.

ಶ್ರೀಧರ್ ಚುಂಚನಕಟ್ಟೆ ಮಾತನಾಡಿ ರೇಷ್ಮೆ ಇಲಾಖೆ ಒಂದೇ ಅಲ್ಲ, ಹತ್ತು ಹಲವಾರು ಸರಕಾರಿ ವಾಹನಗಳು ಹಲವಾರು ಇಲಾಖೆಗಳಲ್ಲಿ ಇದೇ ರೀತಿ ಅಧಿಕಾರಿಗಳ ನಿರ್ಲಕ್ಷ್ಯದಿಂದ ಕೆಲಸಕ್ಕೆ ಬಾರದೇ ತುಕ್ಕು ಹಿಡಿಯುತ್ತಿದ್ದು ಇದರಿಂದ ಸಾರ್ವಜನಿಕರ ತೆರಿಗೆ ಹಣ ಪೋಲಾಗುವಂತಾಗಿದೆ ಈ ಬಗ್ಗೆ ಎಲ್ಲಾ ಇಲಾಖೆ ಅಧಿಖಾರಿಗಳು ಗಮನಹರಿಸಿ ಕೆಲಸಕ್ಕೆ ಬಾರದ ವಾಹನಗಳನ್ನು ಸ್ಕ್ರಾಪ್‍ಗೆ ಹಾಕುವುದಲ್ಲದೆ ದುರಸ್ತಿಪಡಿಸಬಹುದಾದ ವಾಹನಗಳನ್ನು ಕಾಲಕಾಲಕ್ಕೆ ದುರಸ್ತಿಪಡಿಸಿ ಸದ್ಬಳಕೆ ಮಾಡಿಕೊಳ್ಳಲಿ ಎಂದಿದ್ದಾರೆ.

ರೇಷ್ಮೆ ಇಲಾಖೆಯ ಸಹಾಯಕ ನಿರ್ದೇಶಕ ಸೋಮಶೇಖರ್ ಮಾತನಾಡಿ “ಕಚೇರಿಯನ್ನು ಮೈಸೂರು ರಸ್ತೆಯಿಂದ 7ನೇ ರಸ್ತೆಗೆ ಸ್ಥಳಾಂತರಿಸಲಾಗಿದ್ದು ವಾಹನ ನಿಲ್ಲಿಸಲು ಸ್ಥಳಾವಕಾಶವಿಲ್ಲದ ಕಾರಣ ಚಿತ್ರಮಂದಿರದ ಆವರಣದಲ್ಲಿ ಜೀಪುಗಳನ್ನು ನಿಲ್ಲಿಸಲಾಗಿದೆ. ಇದರಲ್ಲಿ ಒಂದು ಈಗಾಗಲೆ ಸ್ಕ್ರಾಪ್‍ಗೆ ಬರೆಯಲಾಗಿದ್ದು ಮತ್ತೊಂದನ್ನು ದುರಸ್ತಿ ಮಾಡಿಸಲು ಇಲಾಖೆಗೆ ಅನುದಾನಕ್ಕೆ ಬರೆಯಲಾಗಿದ್ದು ಹಣ ಬಂದಿಲ್ಲ. ಬರುತ್ತಿದ್ದಂತೆ ವಾಹನ ದುರಸ್ತಿಪಡಿಸಿ ಬಳಕೆ ಮಾಡಲಾಗುವುದು ಎಂದಿದ್ದಾರೆ. ಆದರೆ ಸಾರ್ವಜನಿಕರ ತೆರಿಗೆ ಹಣ ಮಾತ್ರ ಬೇಕಾಬಿಟ್ಟಿ ಪೋಲಾಗುತ್ತಿರುವುದು ಸಾರ್ವಜನಿಕರಲ್ಲಿ ಆಕ್ರೋಶ ತರಿಸಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: