ಕರ್ನಾಟಕ

ಪ್ರತಿಭಟನೆ ನಡೆಸುತ್ತಿದ್ದ ರೈತರ ಮೇಲೆ ಪೊಲೀಸರು ನಡೆಸಿದ ಗೋಲಿಬಾರ್ ಗೆ ಖಂಡನೆ : ಪ್ರತಿಭಟನೆ

ರಾಜ್ಯ(ಮಂಡ್ಯ) ಮೇ.25: – ತೂತುಕುಡಿಯಲ್ಲಿ ತಾಮ್ರ ಸಂಸ್ಕರಣ ಘಟಕದ ವಿರುದ್ಧ ಹೋರಾಟ ನಡೆಸುತ್ತಿದ್ದ ರೈತರ ಮೇಲೆ ಗೋಲಿಬಾರ್ ನಡೆಸಿರುವುದನ್ನು ಖಂಡಿಸಿ ಪಟ್ಟಣದ ರೈತಸಂಘದ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಪಾಂಡವಪುರ ಪಟ್ಟಣದ ಐದು ದೀಪವೃತ್ತದಲ್ಲಿ ರೈತಸಂಘದ ತಾಲೂಕು ಅಧ್ಯಕ್ಷ ಎ.ಎಲ್.ಕೆಂಪೂಗೌಡ ನೇತೃತ್ವದಲ್ಲಿ ರೈತಸಂಘದ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ತಮಿಳುನಾಡು ರಾಜ್ಯದ ತೂತುಕುಡಿಯ ತಾಮ್ರ ಸಂಸ್ಕರಣ ಘಟಕದಿಂದಾಗಿ ಪ್ರಕೃತಿಗೆ ಹಾನಿಯುಂಟಾಗುತ್ತಿದೆ ಎಂಬ ಕಾರಣದಿಂದ ಅಲ್ಲಿನ ರೈತರು ಪ್ರತಿಭಟನೆ ನಡೆಸುತ್ತಿದ್ದ ಸಂದರ್ಭದಲ್ಲಿ ರೈತರ ಮೇಲೆ ಪೊಲೀಸರು ಗೋಲಿಬಾರ್ ನಡೆಸಿರುವುದು ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಯಾವುದೇ ರೈತರ ಮೇಲೆ ಯಾವುದೇ ಸರಕಾರಕ್ಕೂ ಗೋಲಿಬಾರ್ ನಡೆಸುವ ಅಧಿಕಾರವಿಲ್ಲ. ಆದ್ದರಿಂದ ಗೋಲಿಬಾರ್‍ನಿಂದ ಮೃತಪಟ್ಟಿರುವ ಕುಟುಂಬಗಳಿಗೆ ಅಲ್ಲಿನ ಸರಕಾರ ಸೂಕ್ತ ಪರಿಹಾರ ಘೋಷಣೆ ಮಾಡಬೇಕು. ಜತೆಗೆ ಮೃತರ ಕುಟುಂಬದ ಓರ್ವ ಸದಸ್ಯನಿಗೆ ಸರಕಾರಿ ಹುದ್ದೆಯನ್ನು ನೀಡಬೇಕು, ಮತ್ತೆ ಇಂತಹ ಘಟನೆಗಳು ಮರುಕಳಿಸದಂತೆ ಅಲ್ಲಿನ ಸರಕಾರ ಎಚ್ಚರವಹಿಸಬೇಕು. ಇಲ್ಲವಾದರೆ ಅಂತಹ ಸರಕಾರಗಳ ವಿರುದ್ಧ  ಇಡೀ ರೈತ ಸಮುದಾಯವೇ ತಿರುಗಿ ಬೀಳಲಿದೆ ಎಂದು ಎಚ್ಚರಿಸಿದರು.

ಪ್ರತಿಭಟನೆಯಲ್ಲಿ ರೈತಸಂಘದ ತಾಲೂಕು ಅಧ್ಯಕ್ಷ ಎ.ಎಲ್.ಕೆಂಪೂಗೌಡ, ಅಕ್ಷತಾಪುಟ್ಟಣ್ಣಯ್ಯ, ಸ್ಮಿತಾಪುಟ್ಟಣ್ಣಯ್ಯ, ಮುರುಳಿ, ಕೆನ್ನಾಳು ನಾಗರಾಜು, ಅಮೃತಿರಾಜಶೇಖರ್, ಹಿರೇಮರಳಿ ಶಿವಕುಮಾರ್, ಶಿವರಾಜು, ಮಂಜುನಾಥ್, ಡಿ.ಕೆ.ಅಂಕಯ್ಯ ಸೇರಿದಂತೆ ಹಲವರು ಪಾಲ್ಗೊಂಡಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: