ಕರ್ನಾಟಕ

ತಲಕಾವೇರಿಯಿಂದ ಪೂಂಪ್‍ಹಾರ್‍ವರೆಗಿನ ಸಿಎನ್‍ಸಿ ಜಾಥಾಕ್ಕೆ ಚಾಲನೆ

ರಾಜ್ಯ(ಮಡಿಕೇರಿ) ಮೇ 25 :-  ಜೀವನದಿ ಕಾವೇರಿಗೆ ಜೀವಂತ ವ್ಯಕ್ತಿಯ ಶಾಸನ ಬದ್ಧ ಸ್ಥಾನಮಾನ ನೀಡುವ ಮೂಲಕ ಅದನ್ನು ಸಂರಕ್ಷಿಸಬೇಕೆಂದು ಆಗ್ರಹಿಸಿ ಕೊಡವ ನ್ಯಾಷನಲ್ ಕೌನ್ಸಿಲ್ ವತಿಯಿಂದ ತಲಕಾವೇರಿಯಿಂದ ಪೂಂಪ್‍ಹಾರ್‍ವರೆಗೆ ಹಮ್ಮಿಕೊಳ್ಳಲಾಗಿರುವ ವಾಹನ ಜಾಥಾಕ್ಕೆ ಚಾಲನೆ ದೊರೆಯಿತು.

ತಲಕಾವೇರಿ ಕ್ಷೇತ್ರದಲ್ಲಿ ಸಿಎನ್‍ಸಿ ಅಧ್ಯಕ್ಷರಾದ ಎನ್.ಯು.ನಾಚಪ್ಪ ನೇತೃತ್ವದಲ್ಲಿ ಮಾತೆ ಕಾವೇರಿ, ಅಗಸ್ತ್ಯ ಮಹರ್ಷಿ ಹಾಗೂ ಗಣಪತಿಗೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ಜಾಥಾ ಆರಂಭವಾಯಿತು. ಬಳಿಕ ಭಾಗಮಂಡಲಕ್ಕೆ ಆಗಮಿಸಿ ಶ್ರೀಭಗಂಡೇಶ್ವರ ದೇವಾಲಯದಲ್ಲಿ ಪ್ರಾರ್ಥನೆ ಸಲ್ಲಿಸಲಾಯಿತು. ಅಯ್ಯಂಗೇರಿ, ದೇವಟ್‍ಪರಂಬು, ನಾಪೋಕ್ಲು, ಬೆಟ್ಟಗೇರಿ ಮೂಲಕ ಮಡಿಕೇರಿಗೆ ಜಾಥಾ ಆಗಮಿಸಿತು.

ನಗರದ ಜನರಲ್ ತಿಮ್ಮಯ್ಯ ವೃತ್ತದಲ್ಲಿ ಹಿರಿಯ ವಕೀಲ ಕೆ.ಪಿ. ಬಾಲಸುಬ್ರಮಣ್ಯ ಕಂಜರ್ಪಣೆ ಹಾಗೂ ಮಡಿಕೇರಿ ಕೊಡವ ಸಮಾಜದ ಪ್ರಮುಖರಾದ ಮಣವಟ್ಟಿರ ಚಿಣ್ಣಪ್ಪ, ಡಾನ್ ದೇವಯ್ಯ, ರತನ್ ಕುಟ್ಟಯ್ಯ ಅವರುಗಳು ಜಾಥಾವನ್ನು ಬರಮಾಡಿಕೊಂಡರು.

ಬಳಿಕ ಮೂರ್ನಾಡಿಗೆ ತೆರಳಿದ ಜಾಥಾವನ್ನು ಅಲ್ಲಿನ ಕೊಡವ ಸಮಾಜದ ಪ್ರಮುಖರಾದ ಬಡುವಂಡ ಅರುಣ, ವೇಣು ಅಪ್ಪಣ್ಣ, ಪಳಂಗಂಡ ಗಣೇಶ್ ಹಾಗೂ ವಿರಾಜಪೇಟೆಯಲ್ಲಿ ಕೊಡವ ಸಮಾಜದ ಪ್ರಮುಖರಾದ ವಾಂಚಿರ ನಾಣಯ್ಯ ಮತ್ತಿತರರು ಸ್ವಾಗತಿಸಿದರು. ಗೋಣಿಕೊಪ್ಪಲಿನಲ್ಲಿ ಜಿ.ಪಂ. ಸದಸ್ಯರಾದ ಸಿ.ಕೆ.ಬೋಪಣ್ಣ, ಕೊಲ್ಲಿರ ಧರ್ಮಜ, ಪಾಲಿಬೆಟ್ಟದಲ್ಲಿ ಕುಟ್ಟಂಡ ಅಜಿತ್ ಮತ್ತಿತರರು ಜಾಥಾವನ್ನು ಬರಮಾಡಿಕೊಂಡರು.

ಸಿಎನ್‍ಸಿ ಜಾಥಾವು ಮೇ 30 ಕ್ಕೆ ಪೂಂಪ್‍ಹಾರ್‍ನಲ್ಲಿ ಸಮಾರೋಪಗೊಳ್ಳಲಿದ್ದು,  ವಿವಿಧ ಬೇಡಿಕೆಗಳ ಬಗ್ಗೆ ಕೇಂದ್ರ ಹಾಗೂ ರಾಜ್ಯ ಗಮನ ಸೆಳೆಯಲಾಗುವುದೆಂದು ಅಧ್ಯಕ್ಷರಾದ ಎನ್.ಯು.ನಾಚಪ್ಪ ತಿಳಿಸಿದ್ದಾರೆ. (ಕೆಸಿಐ,ಎಸ್.ಎಚ್)

Leave a Reply

comments

Related Articles

error: