
ಕರ್ನಾಟಕ
ರೈತರ ಸಾಲಮನ್ನಾ ಘೋಷಣೆಯಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ: ಎಚ್ಡಿಕೆ
ಬೆಂಗಳೂರು,ಮೇ 26-ನಾನು ಅಧಿಕಾರಕ್ಕೆ ಬಂದರೆ 24 ಗಂಟೆಯೊಳಗೆ ರೈತರ ಸಾಲಮನ್ನಾ ಮಾಡುತ್ತೇನೆಂದು ಮೊದಲಿನಿಂದಲೂ ಹೇಳಿಕೊಂಡು ಬಂದಿರುವ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಸಾಲಮನ್ನಾ ಘೋಷಣೆ ಮಾಡದಿದ್ದಲ್ಲಿ ಸೋಮವಾರ ರಾಜ್ಯ ಬಂದ್ ಮಾಡಿ ಹೋರಾಟ ಮಾಡುವ ಎಚ್ಚರಿಕೆಯನ್ನು ಬಿಜೆಪಿ ನೀಡಿದೆ.
ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿರುವ ಎಚ್ಡಿಕೆ, ರೈತರ ಸಾಲಮನ್ನಾ ಮಾಡುತ್ತೇನೆ ಎಂಬ ನನ್ನ ಘೋಷಣೆಯಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ರಾಜ್ಯದಲ್ಲಿ ಆರ್ಥಿಕ ಪರಿಸ್ಥಿತಿ ಸುಧಾರಿಸಿದ ಬಳಿಕ ಸಾಲಮನ್ನಾ ಮಾಡುತ್ತೇವೆ. ನಾನೊಬ್ಬನೆ ನಿರ್ಧಾರ ತೆಗೆದುಕೊಳ್ಳಲು ಆಗುವುದಿಲ್ಲ. ಈ ಬಗ್ಗೆ ಕಾಂಗ್ರೆಸ್ ನಾಯಕರ ಜೊತೆ ಚರ್ಚಿಸಿ ಅವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕಿದೆ. ಇನ್ನೂ ಸಚಿವ ಸ್ಥಾನಗಳ ಹಂಚಿಗೆ ಆಗಿಲ್ಲ. ಸಚಿವ ಸ್ಥಾನ ಹಂಚಿಕೆ ವಿಚಾರದಲ್ಲಿ ಸಮಸ್ಯೆಗಳಿವೆ. ಅವುಗಳನ್ನು ಪರಿಹರಿಸಿಕೊಳ್ಳಬೇಕಿದೆ ಎಂದರು.
ಅವರಿವರ ಮನೆ ಒಡೆಯುವುದು ಬಿಟ್ಟು ಯಡಿಯೂರಪ್ಪ ಅವರಿಗೆ ಬೇರೆ ಕೆಲಸ ಏನಿದೆ? ಮಹಾನ್ ನಾನೊಬ್ಬನೇ ದೇಶ ಉದ್ಧಾರ ಮಾಡುವುದು ಅಂತ ತಿಳಿದುಕೊಂಡಿದ್ದಾರೆ. ಇಂತಹ ಆಟಗಳನ್ನು ರಾಜ್ಯದ ಜನ ಬೆಂಬಲಿಸಬಾರದು ಎಂದು ಮನವಿ ಮಾಡಿದರು. (ಎಂ.ಎನ್)