ಕರ್ನಾಟಕಮೈಸೂರು

‘ಟಿಪ್ಪು ಶಸ್ತ್ರಾಗಾರ ಸ್ಥಳಾಂತರ ಕಾರ್ಯ ಶೀಘ್ರ ಪೂರ್ಣ’

ಶ್ರೀರಂಗಪಟ್ಟಣ: ಶ್ರೀರಂಗಪಟ್ಟಣದಲ್ಲಿರುವ 18ನೇ ಶತಮಾನದ ಟಿಪ್ಪು ಸುಲ್ತಾನ್ ಅವಧಿಯ ಶಸ್ತ್ರಾಸ್ತ್ರ ಸಂಗ್ರಹಾಗಾರವನ್ನು ಸ್ಥಳಾಂತರಿಸುವ ಕಾರ್ಯವು ಆರಂಭವಾಗಿದೆ.

ಮೈಸೂರು ಮತ್ತು ಬೆಂಗಳೂರಿನ ನಡುವೆ ನಡೆಯುತ್ತಿದ್ದ ಜೋಡಿ ರೈಲು ಮಾರ್ಗದ ಕಾಮಗಾರಿಗೆ ಅಡ್ಡಿಯಾಗಿದ್ದ ಟಿಪ್ಪು ಸುಲ್ತಾನ್ ಶಸ್ತ್ರಾಸ್ತ್ರ ಸಂಗ್ರಹಾಗಾರವನ್ನು ಸ್ಥಳಾಂತರ ಮಾಡಲಾಗುತ್ತಿದ್ದು ಇನ್ನೇನು ರೈಲ್ವೆ ಕಾಮಗಾರಿಯು ತ್ವರಿತಗತಿಯಲ್ಲಿ ಪೂರ್ಣಗೊಂಡು ಶೀಘ್ರದಲ್ಲಿಯೇ ಬೆಂಗಳೂರು-ಮೈಸೂರು ನಡುವೆ ಕ್ರಾಸಿಂಗ್ ಮುಕ್ತ ಪಯಣ ಸಾಧ್ಯವಾಗಲಿದೆ.

ಸುಮಾರು 13.5 ಕೋಟಿ ರೂಗಳ ವೆಚ್ಚದಲ್ಲಿ ನಡೆಯುತ್ತಿರುವ ಕಾಮಗಾರಿಯು ಇದೇ ತಿಂಗಳ ಸೆ.30 ರೊಳಗೆ ಮುಕ್ತಾಯವಾಗಲಿದೆ. ಈ ಸ್ಮಾರಕದ ಸ್ಥಳಾಂತರವು ವಿಳಂಬವಾದ್ದರಿಂದ ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಬೆಂಗಳೂರು-ಮೈಸೂರು ಜೋಡಿ ರೈಲು ಮಾರ್ಗದ ಸುಮಾರು 13 ಕಿಮಿ ರೈಲ್ವೆ ಕಾಮಗಾರಿಯು ಇನ್ನು ಮುಂದೆ ಚುರುಕು ಪಡೆಯಲಿದೆ.

ಸ್ಮಾರಕ ಸ್ಥಳಾಂತರ  ಹಿನ್ನಲೆಯಲ್ಲಿ ಅಗೆಯುವ ಕೆಲಸ ಆರಂಭಿಸಲಾಗಿದ್ದು ಸ್ಥಳದಲ್ಲಿ ಶ್ರೀರಂಗಪಟ್ಟಣ ಪೊಲೀಸರು ಸೂಕ್ತ ಬಿಗಿ ಭದ್ರತೆ ಒದಗಿಸಿದ್ದಾರೆ. ಕಾರ್ಯಾಚರಣೆ ನಡೆಯುತ್ತಿರುವ ಸ್ಥಳದ ಸುತ್ತಮುತ್ತ ಬ್ಯಾರಿಕೇಡ್ ಗಳನ್ನು ಅಳವಡಿಸಿ ಸಾರ್ವಜನಿಕರ ಪ್ರವೇಶವನ್ನು ನಿರ್ಬಂಧಿಸಲಾಗಿದೆ.

ಕಳೆದ 5 ವರ್ಷದಿಂದ ನೆನೆಗುದಿಗೆ ಬಿದ್ದಿದ್ದ ಕಾಮಗಾರಿಯನ್ನು ಪ್ರಸ್ತುತ ಅಮೆರಿಕ ಮೂಲದ ಪಿ.ಎಸ್.ಎಲ್ – ವೋಲ್ಫ್ ಪ್ರೈವೇಟ್ ಲಿಮಿಟೆಡ್ ಕಂಪನಿಗೆ ಗುತ್ತಿಗೆ ನೀಡಲಾಗಿದ್ದು ಕಾಮಗಾರಿಯನ್ನು ತ್ವರಿತಗತಿಯಲ್ಲಿ ಮುಗಿಸಲು ಕಂಪನಿಯು ಬೃಹತ್ ಯಂತ್ರಗಳನ್ನು ಈಗಾಗಲೇ ಅಮೆರಿಕಾದಿಂದ ತಂದು ಕಾಮಗಾರಿಯ ಪ್ರದೇಶದದಲ್ಲಿ ನಿಯೋಜಿಸಿದೆ.

ರಾಜ್ಯ ಪುರಾತತ್ವ ಇಲಾಖೆ, ಐತಿಹಾಸಿಕ ಮತ್ತು ಸ್ಮಾರಕಗಳ ವಸ್ತುಸಂಗ್ರಹಾಲಯದಿಂದ ಸುಮಾರು ನೂರು ಮೀಟರ್ ದೂರಕ್ಕೆ ಶಸ್ತ್ರಾಗಾರವನ್ನು ಸ್ಥಳಾಂತರಿಸಲಾಗುತ್ತಿದ್ದು, ರಾಷ್ಟ್ರೀಯ ಸ್ಮಾರಕ ಪ್ರಾಧಿಕಾರದ ಒಪ್ಪಿಗೆ ಮೇರೆಗೆ ರಾಷ್ಟ್ರೀಯ ವಿನ್ಯಾಸ ಮತ್ತು ಸಂಶೋಧನಾ ಫೋರಮ್, ಮತ್ತು ಭಾರತದ ಪುರಾತತ್ವ ಇಲಾಖೆಯವರ ತಾಂತ್ರಿಕ ಬೆಂಬಲದಿಂದ ಸ್ಮಾರಕವನ್ನು ಸ್ಥಳಾಂತರಗೊಳಿಸಲಾಗುತ್ತಿದೆ.

Leave a Reply

comments

Related Articles

error: