ಪ್ರಮುಖ ಸುದ್ದಿಮೈಸೂರು

ಸಾಲಮನ್ನಾಕ್ಕಾಗಿ ಆಗ್ರಹಿಸಿ ಬಿಜೆಪಿ ಬಂದ್ ಗೆ ಕರೆ : ಸಂಸದ, ಶಾಸಕರು ಸೇರಿದಂತೆ 20ಕ್ಕೂ ಹೆಚ್ಚು ಬಿಜೆಪಿ ಕಾರ್ಯಕರ್ತರ ಬಂಧನ

ಮೈಸೂರು,ಮೇ.28:- ಸಾಲಮನ್ನಾಕ್ಕಾಗಿ ಆಗ್ರಹಿಸಿ ಬಿಜೆಪಿ ಕರೆ ನೀಡಿರುವ ಬಂದ್ ಹಿನ್ನೆಲೆಯಲ್ಲಿ ಮೈಸೂರಿನಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಸಂಸದ ಪ್ರತಾಪ್ ಸಿಂಹ, ಶಾಸಕ ಎಸ್.ಎ.ರಾಮದಾಸ್ ಸೇರಿದಂತೆ 20ಕ್ಕೂ ಹೆಚ್ಚು ಬಿಜೆಪಿ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ನಗರದ ಸಬರ್ಬನ್ ಬಸ್ ನಿಲ್ದಾಣದ ಬಳಿ ಪ್ರತಿಭಟನೆ ನಡೆಸುತ್ತಿದ್ದ ವೇಳೆ ಪ್ರತಿಭಟನಾಕಾರರನ್ನು ಪೊಲೀಸರು ಬಂಧಿಸಿದರು. ಬನ್ನಿಮಂಟಪ ಡಿಪೋಗೆ ತೆರಳಿದ  ಸಂಸದ ಪ್ರತಾಪ್ ಸಿಂಹ ಮತ್ತು ಮುತ್ತಿಗೆ ಹಾಕಲು ಯತ್ನಿಸಿದ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದರು. ಈ ಸಂದರ್ಭ ಪ್ರತಾಪ್ ಸಿಂಹ ಮಾತನಾಡಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯವರು ಜನರ ಮುಲಾಜಿನಲ್ಲಿಲ್ಲ ಎಂಬ ಹೇಳಿಕೆಯನ್ನು ನೀಡಿದ್ದಾರೆ. ಎಂದರೆ ಏನರ್ಥ? ಜನರ ಮುಲಾಜಿನಲ್ಲಿ ಇಲ್ಲದಿದ್ದರೆ ಅಧಿಕಾರ ಬಿಟ್ಟು ಕೆಳಗಿಳಿಯಲಿ. ಅವರು ಪ್ರಣಾಳಿಕೆಯಲ್ಲಿ ರೈತರ ಸಾಲಮನ್ನಾ ಭರವಸೆ ನೀಡಿದ್ದರು. ಅದರಂತೆ ಸಾಲಮನ್ನಾ ಮಾಡಲಿ ಎಂದು ಒತ್ತಾಯಿಸಿದರು. ಕುಮಾರಸ್ವಾಮಿ ಕಾಂಗ್ರೆಸ್ ಜೊತೆ ಸೇರಿ ಮಾತು ತಪ್ಪಿದ್ದಾರೆ. ಅಧಿಕಾರಕ್ಕೆ ಬಂದ 24 ಗಂಟೆಯೊಳಗೆ ಸಾಲಮನ್ನಾ ಮಾಡುತ್ತೇನೆ ಅಂದಿದ್ದರು. 5 ವರ್ಷಗಳ ಕಾಲ ಕಾಂಗ್ರೆಸ್ ಸರ್ಕಾರವನ್ನು ಬೈಯ್ಯುತ್ತಲೇ ಬಂದಿದ್ದರು. ಆದರೆ ಇದೀಗಾ ಅವರ ಜೊತೆಯೇ ಸೇರಿ ಅಧಿಕಾರ ಮಾಡುತ್ತಿದ್ದಾರೆ. ಅವರು ಸಾಲ ಮನ್ನಾ ಮಾಡುವವರೆಗೂ ನಮ್ಮ ಹೋರಾಟ ನಿರಂತರ. ರಾಜ್ಯದಲ್ಲಿ ಮೂರುವರೆ ಸಾವಿರ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆದರೆ ಕುಮಾರಸ್ವಾಮಿ ಅವರು ಸಿಎಂ ಆಗಿ ಮೂರು ದಿನ ಕಳೆದಿದೆ. ಆದರೂ ಈವರೆಗೂ ಸಾಲಮನ್ನಾ ಬಗ್ಗೆ ಕ್ರಮ ಕೈಗೊಂಡಿಲ್ಲ. ಇದೀಗ ನಾವು ಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ಬಂದಿಲ್ಲ ಅಂತಿದ್ದಾರೆ.ಇದರ ವಿರುದ್ಧ ನಾವು ಹೋರಾಟ ಮಾಡುತ್ತಲೇ ಇರುತ್ತೇವೆ ಎಂದರು.

ಇದೇ ವೇಳೆ ಶಾಸಕ ಎಸ್.ಎ ರಾಮದಾಸ್ ಮಾತನಾಡಿ ನಮ್ಮನ್ನು ಬಂಧಿಸಿ ವಾಪಸ್ ಬಿಡುಗಡೆ ಮಾಡಿದರೂ ಬಸ್ ತಡೆಯುತ್ತೇನೆ. ರೈತರು ಈಗಾಗಲೇ ನೊಂದಿದ್ದಾರೆ. ಹಾಗಾಗಿ ಅವರ ಬದಲು ನಾವು ಪ್ರತಿಭಟನೆ ಮಾಡುತ್ತಿದ್ದೇವೆ.ನಾವು ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತೇವೆ. ಇದನ್ನು ಹತ್ತಿಕ್ಕುವ ಕೆಲಸ ಪೊಲೀಸರು ಮಾಡುತ್ತಿದ್ದಾರೆ. ಆದರೆ ನಾವು ಕಲ್ಲು ಹೊಡೆದಿಲ್ಲ, ಟೈರ್‌ಗಳಿಗೆ ಬೆಂಕಿಯೂ ಹಚ್ಚಿಲ್ಲ. ಶಾಂತಿಯುತವಾಗಿ ಪ್ರತಿಭಟನೆ ಮಾಡುತ್ತಿದ್ದೇವೆ. ಕುಮಾರಸ್ವಾಮಿ ಸಾಲಮನ್ನಾ ಮಾಡುತ್ತೇವೆಂದು ರೈತರಿಗೆ ಮೋಸ ಮಾಡಿದ್ದಾರೆ. ರೈತರ ಕಣ್ಣೀರು ಒರೆಸುವ ಕೆಲಸವಾಗಬೇಕಿದೆ ಎಂದರು.

ಇದೇ ವೇಳೆ ಚಾಮರಾಜ ಕ್ಷೇತ್ರದ ಬಿಜೆಪಿ ಶಾಸಕ ನಾಗೇಂದ್ರ ಅವರನ್ನೂ ಕೂಡ ಪೊಲೀಸರು ವಶಕ್ಕೆ ಪಡೆದರು. ಪೊಲೀಸರ ನಡುವೆ ಕೆಲಕಾಲ ಮಾತಿನ ಚಕಮಕಿ ನಡೆದಿದ್ದು, ಕೆಲಕಾಲ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: