ದೇಶ

ಟೆಲಿಕಾಂ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಿದ ಪತಂಜಲಿ; `ಸ್ವದೇಶಿ ಸಮೃದ್ಧಿ ಸಿಮ್’ ಕಾರ್ಡ್ ಲಾಂಚ್

ಹರಿದ್ವಾರ್,ಮೇ 28-ಯೋಗ ಗುರು ಬಾಬಾ ರಾಮದೇವ್ ಅವರ ಪತಂಜಲಿ ಸಂಸ್ಥೆ ಬಿಎಸ್ಎನ್ಎಲ್ ನೊಂದಿಗೆ ಒಪ್ಪಂದ ಮಾಡಿಕೊಂಡು ‘ಸ್ವದೇಶಿ ಸಮೃದ್ಧಿ ಸಿಮ್’ ಕಾರ್ಡುಗಳನ್ನು ಬಿಡುಗಡೆಗೊಳಿಸುವ ಮೂಲಕ ಟೆಲಿಕಾಂ ಕ್ಷೇತ್ರಕ್ಕೂ ಪಾದಾರ್ಪಣೆ ಮಾಡಿದೆ.

ಹರಿದ್ವಾರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಯೋಗಗುರು ರಾಮ್ ದೇವ್ ಸ್ವದೇಶಿ ಸಮೃದ್ಧಿ ಸಿಮ್ ಕಾರ್ಡ್‍ಗಳನ್ನು ಬಿಡುಗಡೆಗೊಳಿಸಿದರು.

ಈ ಸಿಮ್ ಕಾರ್ಡ್ ಹೊಂದಿದವರು 144 ರೂ. ರಿಚಾರ್ಜ್ ಮಾಡಿದರೆ ಅನಿಯಮಿತ ದೇಶೀಯ ಕರೆಗಳನ್ನು ಮಾಡಬಹುದಾಗಿದೆಯಲ್ಲದೆ, 2ಜಿಬಿ ಡಾಟಾ ಪ್ಯಾಕ್ ಹಾಗೂ 100 ಎಸ್ಎಂಎಸ್ ಕೂಡ ಲಭ್ಯವಾಗಲಿದೆ. ಇದರ ಹೊರತಾಗಿ ಕಾರ್ಡ್ ಹೊಂದಿರುವವರಿಗೆ 2.5 ಲಕ್ಷ ರೂ. ವರೆಗಿನ ಆರೋಗ್ಯ ವಿಮೆ ಹಾಗೂ 5 ಲಕ್ಷ ರೂ.ನ ಜೀವವಿಮೆ ದೊರೆಯಲಿದೆ.

ಆರಂಭಿಕ ಹಂತದಲ್ಲಿ ಪತಂಜಲಿ ಸಂಸ್ಥೆಯ ಉದ್ಯೋಗಿಗಳಿಗೆ ಹಾಗೂ ಆಡಳಿತ ಮಂಡಳಿಯವರಿಗೆ ಮಾತ್ರ ಈ ಸಿಮ್ ಲಭ್ಯವಾಗಲಿದೆ. ಮುಂದೆ ಪೂರ್ಣ ಪ್ರಮಾಣದಲ್ಲಿ ಸಿಮ್ ಬಿಡುಗಡೆಗೊಂಡಾಗ ಪತಂಜಲಿ ಸಿಮ್ ಕಾರ್ಡ್ ಹೊಂದಿದವರಿಗೆ ಸಂಸ್ಥೆಯ ಉತ್ಪನ್ನಗಳನ್ನು ಖರೀದಿಸಿದಾಗ ಶೇ.10ರಷ್ಟು ರಿಯಾಯಿತಿ ದೊರೆಯಲಿದೆ.

ಸಿಮ್ ಕಾರ್ಡ್ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಬಾಬಾ ರಾಮದೇವ್, ಸರ್ಕಾರಿ ಒಡೆತನದ ಬಿಎಸ್ಎನ್ಎಲ್ ಒಂದು ಸ್ವದೇಶಿ ದೂರಸಂಪರ್ಕ ಜಾಲವಾಗಿದೆ. ಎಂದರಲ್ಲದೆ ಬಿಸ್ಎನ್ಎಲ್ ಹಾಗೂ ಪತಂಜಲಿ ದೇಶದ ಕಲ್ಯಾಣ ಬಯಸುತ್ತದೆ. ದೇಶದಲ್ಲಿರುವ 5 ಲಕ್ಷ ಬಿಎಸ್ಎನ್ಎಲ್ ಕೇಂದ್ರಗಳಲ್ಲಿ ಜನರಿಗೆ ಶೀಘ್ರ ಪತಂಜಲಿ ಸ್ವದೇಶಿ ಸಮೃದ್ಧಿ ಕಾರ್ಡ್ ದೊರೆಯಲಿದೆ ಎಂದು ಬಾಬಾ ರಾಮ್ ದೇವ್ ಹೇಳಿದರು.

ಬಿಎಸ್ಎನ್ಎಲ್ ಜನರಲ್ ಮ್ಯಾನೇಜರ್ ಸುನಿಲ್ ಗರ್ಗ್ ಕೂಡ ಈ ಸಂದರ್ಭ ಹಾಜರಿದ್ದರು. (ಎಂ.ಎನ್)

Leave a Reply

comments

Related Articles

error: