
ಮೈಸೂರು
ಪಕ್ಕವಾದ್ಯಗಳು ತಾಳವಾದ್ಯಗಳಾಗದಿರಲಿ : ಟಿ.ಎ.ಎಸ್.ಮಣಿ
ಪಕ್ಕವಾದ್ಯ, ತಾಳವಾದ್ಯಗಳನ್ನು ನುಡಿಸುವುದು ಬೇರೆ ಎಂದು ಅರಿತುಕೊಂಡು ನುಡಿಸಿದಾಗ ಮಾತ್ರ ಕಲಾವಿದರು ಯಶಸ್ಸು ಸಾಧಿಸಬಲ್ಲರು ಎಂದು ವಿದ್ವಾನ್ ಟಿ.ಎ.ಎಸ್.ಮಣಿ ಹೇಳಿದರು.
ಶಿವರಾತ್ರಿ ರಾಜೇಂದ್ರ ಸ್ವಾಮೀಜಿ ಸ್ಮರಣಾರ್ಥ ಜೆ.ಎಸ್.ಎಸ್. ಸಂಗೀತ ಸಭಾ ಟ್ರಸ್ಟ್ ವತಿಯಿಂದ ಮೈಸೂರಿನ ಸರಸ್ವತಿಪುರಂನಲ್ಲಿರುವ ಜೆ.ಎಸ್.ಎಸ್ ಮಹಿಳಾ ಕಾಲೇಜಿನಲ್ಲಿ ಆಯೋಜಿಸಿದ್ದ 23ನೇ ಸಂಗೀತ ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಿ ಟಿ.ಎ.ಎಸ್ ಶಿವಮಣಿ ಮಾತನಾಡಿದರು.
ತಾಳವಾದ್ಯಕಾರರು ಪಕ್ಕವಾದ್ಯ ಮಾತ್ರವಲ್ಲದೇ ಅವರೇ ಪ್ರಮುಖ ತಂಡಗಳನ್ನು ರಚಿಸಿ ನುಡಿಸುವಷ್ಟು ಬೆಳವಣಿಗೆ ತಂದಿದ್ದಾರೆ. ಇಂದು ಲಯವಾದ್ಯಕಾರರ ಸ್ಥಾನಮಾನ, ನುಡಿಸುವಿಕೆ, ವೈವಿಧ್ಯಮಯ ತಾಳಗಳು, ಲೆಕ್ಕಾಚಾರಗಳು, ಚಮತ್ಕಾರ, ಧ್ವನಿವರ್ಧಕಗಳನ್ನು ಬಳಸುವ ವಿಧಾನಗಳು ಬದಲಾಗಿವೆ ಎಂದು ತಿಳಿಸಿದರು. ಲಯವಾದ್ಯಕಾರರು ಪಕ್ಕವಾದ್ಯ ನುಡಿಸುವಾಗಲೂ ತಾಳವಾದ್ಯದಲ್ಲಿ ನುಡಿಸುವಂತೆಯೇ ನುಡಿಸಿದರೆ ಸಂಗೀತದ ರುಚಿ ಮತ್ತು ಕಲಾವಿದರ ಸ್ಫೂರ್ತಿಗೆ ಅಡ್ಡಿಯಾಗಲಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ವಿದ್ವಾನ್ ಟಿ.ಎ.ಎಸ್.ಶಿವಮಣಿ ಅವರಿಗೆ ಸಂಗೀತ ವಿದ್ಯಾನಿಧಿ ಪ್ರಶಸ್ತಿಯನ್ನು ಪ್ರದಾನಿಸಲಾಯಿತು. ಈ ಸಂದರ್ಭ ಕಾನೂನು ಪ್ರಾಧ್ಯಾಪಕ ಸಿ.ಬಸವರಾಜು, ಜಗನ್ನಾಥ ಶೆಣೈ, ಕೆ.ವಿ.ಮೂರ್ತಿ, ಕೆ.ರಾಮಮೂರ್ತಿರಾವ್ ಮತ್ತಿತರರು ಉಪಸ್ಥಿತರಿದ್ದರು.